ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಕ ವಂಚನೆ: ಕೇಂದ್ರ ಹಾಗೂ 61 ಕಂಪನಿಗಳಿಂದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

Last Updated 15 ಜನವರಿ 2021, 16:58 IST
ಅಕ್ಷರ ಗಾತ್ರ

ನವದೆಹಲಿ: ಸುಂಕ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ದೇಶದ 61 ಕಬ್ಬಿಣ ಅದಿರು ರಫ್ತು ಕಂಪನಿಗಳಿಗೆ ಸೂಚಿಸಿದೆ.

ಎಸ್ಸಾರ್‌ ಸ್ಟೀಲ್‌ ಮತ್ತು ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌ ಸೇರಿದಂತೆ ಒಟ್ಟು 61 ಕಂಪನಿಗಳು 2015ರಿಂದಲೂ ಚೀನಾಗೆ ಕಬ್ಬಿಣದ ಅದಿರು ರಫ್ತು ಮಾಡುತ್ತಿದ್ದು, 1992ರ ವಿದೇಶಿ ವ್ಯಾಪಾರ ಕಾಯ್ದೆಯ ಅಡಿಯಲ್ಲಿ ತಪ್ಪಾದ ಸುಂಕ ಸಂಕೇತಗಳನ್ನು (ಕೋಡ್‌) ಘೋಷಿಸುವ ಮೂಲಕ ಸುಂಕ ವಂಚಿಸಿವೆ. ಹೀಗಾಗಿ ಈ ಕಂಪನಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಬೇಕು ಎಂದು ವಕೀಲ ಎಂ.ಎಲ್‌.ಶರ್ಮಾ, ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ತ್ರಿಸದಸ್ಯ ಪೀಠವು ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿತು.

‘ಶೇಕಡ 30ರಷ್ಟು ರಫ್ತು ಸುಂಕ ಪಾವತಿಸದೆ ಈ ಕಂಪನಿಗಳು ಚೀನಾಗೆ ಕಬ್ಬಿಣದ ಅದಿರನ್ನು ‘ಕಳ್ಳ ಸಾಗಾಣೆ’ ಮಾಡುತ್ತಿವೆ’ ಎಂದು ಶರ್ಮಾ ಅವರು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ಅವರ ವಾದವನ್ನು ಆಲಿಸಿದ ನ್ಯಾಯಪೀಠವು ‘ಕೇಂದ್ರ ಹಾಗೂ ಆರೋಪಿತ 61 ಕಂಪನಿಗಳಿಗೆ ನೋಟಿಸ್‌’ ಜಾರಿಗೊಳಿಸುವಂತೆ ಆದೇಶಿಸಿತು.

‘ಈ ಕಂಪನಿಗಳು ಹಾರ್ಮೋನೈಜಡ್‌ ಸಿಸ್ಟಂ ಕೋಡ್‌ 26011100 ಬದಲಾಗಿ 26011210 ಸಂಕೇತವನ್ನು ಬಳಸಿ ಚೀನಾಕ್ಕೆ 2015ರಿಂದ ಇದುವರೆಗೂ ಲಕ್ಷಾಂತರ ಟನ್‌ ಅದಿರು ರಫ್ತು ಮಾಡಿವೆ. ವಾಣಿಜ್ಯ ಮತ್ತು ಹಣಕಾಸು ಸಚಿವಾಲಯ ಹಾಗೂ ಕಸ್ಟಮ್ಸ್‌ ಇಲಾಖೆಯೂ ಈ ವಂಚನೆಗೆ ಸಹಕರಿಸಿವೆ. ಇವರಿಂದ ₹7.08 ಲಕ್ಷ ಕೋಟಿ ದಂಡ ವಸೂಲಿ ಮಾಡಬೇಕು’ ಎಂದೂ ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT