ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ್ರೋಹ ಸೆಕ್ಷನ್‌ ಅಪಾರ ದುರ್ಬಳಕೆಗೆ ಸುಪ್ರೀಂ ಕೋರ್ಟ್‌ ಕಳವಳ

ಬ್ರಿಟಿಷರ ಕಾನೂನು ಇನ್ನೂ ಏಕೆ?
Last Updated 15 ಜುಲೈ 2021, 20:19 IST
ಅಕ್ಷರ ಗಾತ್ರ

ನವದೆಹಲಿ: ಮಹಾತ್ಮ ಗಾಂಧಿಯಂತಹ ವ್ಯಕ್ತಿಗಳನ್ನು ‘ಮೌನ’ವಾಗಿಸಿ ಸ್ವಾತಂತ್ರ್ಯ ಚಳವಳಿಯನ್ನು ದಮನ ಮಾಡುವ ಉದ್ದೇಶದಿಂದ ಬ್ರಿಟಿಷರು ರಚಿಸಿದ್ದ ಭಾರತೀಯ ದಂಡ ಸಂಹಿತೆಯ(ಐಪಿಸಿ) 124 (ಎ)(ದೇಶದ್ರೋಹ) ಸೆಕ್ಷನ್‌ ಅನ್ನು ಏಕೆ ಕೈಬಿಡಬಾರದು ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಗುರುವಾರ ಪ್ರಶ್ನಿಸಿದೆ. ಈ ಕಾನೂನು ಅಪಾರವಾಗಿ ದುರ್ಬಳಕೆ ಆಗುತ್ತಿರುವುದರ ಬಗ್ಗೆ ನ್ಯಾಯಾಲಯವು ಕಳವಳವನ್ನೂ ವ್ಯಕ್ತಪಡಿಸಿದೆ.

ಐಪಿಸಿಯ 124 (ಎ) ಸೆಕ್ಷನ್‌ ಅನ್ನು ಪ್ರಶ್ನಿಸಿ ಭಾರತೀಯ ಸಂಪಾದಕರ ಕೂಟ ಮತ್ತು ಮೈಸೂರಿನವರಾದ ಮೇಜರ್‌ ಜನರಲ್‌ ಎಸ್‌.ಜಿ. ಒಂಬತ್ತುಕೆರೆ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಒಪ್ಪಿದೆ. ಕಾನೂನಿನ ದುರ್ಬಳಕೆಯೇ ಅತ್ಯಂತ ದೊಡ್ಡ ಕಳವಳವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ನೇತೃತ್ವದ ಪೀಠವು ಹೇಳಿದೆ.

ಮಹಾತ್ಮ ಗಾಂಧಿ, ಗೋಖಲೆ ಮತ್ತು ಇತರರನ್ನು ಮೌನವಾಗಿಸಲು ಬ್ರಿಟಿಷರು ಬಳಸಿದ ಅದೇ ಕಾನೂನನ್ನು ಸ್ವಾತಂತ್ರ್ಯ ಪಡೆದು 75 ವರ್ಷಗಳ ಬಳಿಕವೂ ಬಳಸುವ ಅಗತ್ಯ ಇದೆಯೇ ಎಂದು ಸರ್ಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್‌ ಅವರನ್ನು ಪೀಠವು ಪ್ರಶ್ನಿಸಿದೆ. ಕೇಂದ್ರಕ್ಕೆ ನೋಟಿಸ್‌ ನೀಡಿದೆ.

ದೇಶದ್ರೋಹ ವಿರುದ್ಧದ ಸೆಕ್ಷನ್‌ ಅನ್ನು ‘ಅಪಾರವಾಗಿ ದುರ್ಬಳಕೆ’ ಮಾಡಲಾಗಿದೆ. ನ್ಯಾಯಾಲಯವು ರದ್ದುಪಡಿಸಿ ಬಹುಕಾಲ ಆಗಿದ್ದರೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66 ಎ ಕೂಡ ಇದೇ ರೀತಿಯ ದುರ್ಬಳಕೆ ಆಗಿದೆ. ಒಂದು ಮರಕ್ಕಾಗಿ ಬಡಗಿಯು ಇಡೀ ಕಾಡನ್ನೇ ಕಡಿದುದಕ್ಕೆ ಇದನ್ನು ಹೋಲಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ಪೀಠವು ಹೇಳಿದೆ.

‘ಒಂದು ಗುಂಪಿಗೆ ಸೇರಿದ ಜನರನ್ನು ಸಿಲುಕಿಸುವುದಕ್ಕಾಗಿ ಬೇರೊಂದುಗುಂಪಿನ ವ್ಯಕ್ತಿಯು ಇಂತಹ ಕಾನೂನಿನ ಅಂಶಗಳನ್ನು ಬಳಸಿಕೊಳ್ಳಬಹುದು.ಬೇರೊಂದು ಗುಂಪಿನ ಜನರ ಧ್ವನಿಯನ್ನು ಕೇಳಲು ಇಚ್ಛಿಸದನಿರ್ದಿಷ್ಟವಾದ ಪಕ್ಷ ಅಥವಾ ಜನರು, ಆ ಗುಂಪಿನ ವಿರುದ್ಧವೂ ಈ ಸೆಕ್ಷನ್‌ ಅನ್ನು ಬಳಸಿಕೊಳ್ಳಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸರ್ಕಾರವು ಅನಗತ್ಯ ಮತ್ತು ಅಪ್ರಯೋಜಕ ಕಾನೂನುಗಳನ್ನು ರದ್ದುಪಡಿಸುತ್ತಿದೆ. ಹಾಗಿದ್ದರೂ ಈ ಸೆಕ್ಷನ್‌ಗೆ ಸಂಬಂಧಿಸಿ ಏಕೆ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂಬುದು ಅರ್ಥ ಆಗುತ್ತಿಲ್ಲ. ಯಾವುದೇ ಸರ್ಕಾರ ಅಥವಾ ರಾಜ್ಯವನ್ನು ದೂಷಿಸುತ್ತಿಲ್ಲ. ದುರದೃಷ್ಟವೆಂದರೆ, ಕಾನೂನು ಜಾರಿ ಸಂಸ್ಥೆಗಳು ಈ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಮತ್ತು ಯಾವುದೇ ಉತ್ತರದಾಯಿತ್ವವೂ ಕಾಣಿಸುತ್ತಿಲ್ಲ ಎಂದು ಪೀಠವು ಹೇಳಿದೆ.

ಯಾವುದೋ ಗ್ರಾಮೀಣ ಪ್ರದೇಶದ ಪೊಲೀಸ್‌ ಅಧಿಕಾರಿಯೊಬ್ಬ ಅಲ್ಲಿನ ವ್ಯಕ್ತಿಯೊಬ್ಬನನ್ನು ದೇಶದ್ರೋಹ
ಪ್ರಕರಣದಲ್ಲಿ ಸಿಲುಕಿಸಬೇಕಿದ್ದರೆ ಬಹಳ ಸುಲಭದಲ್ಲಿ ಅದನ್ನು ಮಾಡಿಬಿಡಬಹುದು. ಅದೂ ಅಲ್ಲದೆ, ದೇಶದ್ರೋಹ ಪ್ರಕರಣಗಳಲ್ಲಿ ಶಿಕ್ಷೆ ಆಗಿರುವ ಪ್ರಮಾಣ ಅತ್ಯಂತ ಕಡಿಮೆ. ಹಾಗಾಗಿ, ಈ ಸೆಕ್ಷನ್‌ ಬಗ್ಗೆ ನಿರ್ಧಾರ ತೆಗೆದುಕೊಳ್ಳಲೇಬೇಕಿದೆ ಎಂದು ಪೀಠವು ಹೇಳಿದೆ.

ಇನ್ನೊಂದು ಅರ್ಜಿಯೂ ಇದೆ:ಐಪಿಸಿಯ 124 ಎ (ದೇಶದ್ರೋಹ) ಸೆಕ್ಷನ್‌ ವಿರುದ್ಧ ಸಲ್ಲಿಕೆಯಾಗಿರುವ ಬೇರೆ ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ಯು.ಯು.ಲಲಿತ್‌ ಅವರ ನೇತೃತ್ವದ ಪೀಠದಲ್ಲಿ ನಡೆಯುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಯವರಿಗೆ ಮಾಹಿತಿ ನೀಡಲಾಯಿತು. ಈ ಅರ್ಜಿಯ ಮುಂದಿನ ವಿಚಾರಣೆ ಇದೇ 27ರಂದು ನಡೆಯಲಿದೆ. ಹಾಗಾಗಿ, ಮಂದಿನ ವಿಚಾರಣೆಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವುದಾಗಿ ರಮಣ ತಿಳಿಸಿದರು.

ಪತ್ರಕರ್ತರಾದ ಕಿಶೋರ್‌ಚಂದ್ರ ವಾಂಗ್‌ಕೇಮ್ಚಾ ಮತ್ತು ಕನ್ಹಯ್ಯಾ ಲಾಲ್‌ ಶುಕ್ಲಾ ಅವರು ಈ ಅರ್ಜಿ ಸಲ್ಲಿಸಿದ್ಧಾರೆ. ಈ ಪ್ರಕರಣದಲ್ಲಿಯೂ ಕೇಂದ್ರಕ್ಕೆ ನೋಟಿಸ್‌ ನೀಡಲಾಗಿದೆ.

ಭಾರತೀಯ ಸಂಪಾದಕರ ಕೂಟವು ಸಲ್ಲಿಸಿರುವ ಅರ್ಜಿಯನ್ನು ಈಗಾಗಲೇ ಸಲ್ಲಿಕೆಯಾಗಿರುವ ಇನ್ನೊಂದು ಅರ್ಜಿಯ ಜತೆಗೆ ಸೇರಿಸಿಕೊಳ್ಳಬಹುದು ಎಂದು ಅರ್ಜಿದಾರರ ಪರ ವಕೀಲ ಶ್ಯಾಮ್‌ ದಿವಾನ್‌ ಹೇಳಿದರು. ಸೆಕ್ಷನ್‌ ಅ‌ನ್ನು ರದ್ದುಪಡಿಸಬೇಕು ಮತ್ತು ದುರ್ಬಳಕೆ ತಡೆಗೆ ಮಾರ್ಗಸೂಚಿ ರೂಪಿಸಬೇಕು ಎಂದೂ ಸಂ‍ಪಾದಕರ ಕೂಟದ ಅರ್ಜಿಯಲ್ಲಿ ಕೋರಲಾಗಿದೆ ಎಂದು ದಿವಾನ್‌ ವಿವರಿಸಿದರು.

ಸರ್ಕಾರದ ಸಮರ್ಥನೆ

124 ಎ ಸೆಕ್ಷನ್‌ ಅನ್ನು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಸಮರ್ಥಿಸಿಕೊಂಡಿದ್ದಾರೆ. ಈ ಸೆಕ್ಷನ್‌ಕಾನೂನಿನ ಭಾಗವಾಗಿ ಇರಬೇಕು. ಅದನ್ನು ರದ್ದುಪಡಿಸಬಾರದು ಎಂದು ಹೇಳಿದ್ದಾರೆ. ಸೆಕ್ಷನ್‌ನ ದುರ್ಬಳಕೆ ತಡೆಗೆ ಮಾರ್ಗಸೂಚಿಯನ್ನು ನ್ಯಾಯಾಲಯವು ರೂಪಿಸಬಹುದು ಎಂದು ಅವರು ಸಲಹೆ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡುವಂತೆ ವೇಣುಗೋಪಾಲ್‌ ಅವರನ್ನು ಕೋರಲಾಗಿದೆ.

ಗಾಜು ಒಡೆದವರ ಮೇಲೆ ದೇಶದ್ರೋಹ ಪ್ರಕರಣ:ಚಂಡೀಗಡ: ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣದ ಸಿರ್ಸಾದಲ್ಲಿ ಈಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.ಪ್ರತಿಭಟನೆ ವೇಳೆ ಅಲ್ಲಿಗೆ ಭೇಟಿ ನೀಡಿದ್ದ ರಾಜ್ಯದ ವಿಧಾನಸಭೆ ಸ್ಪೀಕರ್ ರಣಬೀರ್ ಗಂಗ್ವಾ ಅವರ ಕಾರಿನ ಮೇಲೆ ದಾಳಿ ನಡೆದಿತ್ತು. ಕಾರಿನ ಗಾಜು ಒಡೆದಿತ್ತು. ಈ ಸಂಬಂಧ 100ಕ್ಕೂ ಹೆಚ್ಚು ರೈತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT