ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿ ತಡೆಗೆ ‘ಸುಪ್ರೀಂ’ ಸೂಚನೆ

ಕೇಂದ್ರ ಸಲ್ಲಿಸಿದ ಪ್ರಮಾಣಪತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ
Last Updated 17 ನವೆಂಬರ್ 2020, 21:17 IST
ಅಕ್ಷರ ಗಾತ್ರ

ನವದೆಹಲಿ: ‘ಸುದ್ದಿವಾಹಿನಿಗಳು ಮತ್ತು ಇತರ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಪ್ರಸಾರಕ್ಕೆ ತಡೆ ಒಡ್ಡಲು ವ್ಯವಸ್ಥೆ ರೂಪಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಾಕೀತು ಮಾಡಿದೆ.

ತಬ್ಲೀಗ್‌ ಜಮಾತ್‌ನಿಂದ ಕೋವಿಡ್‌ ಹರಡಿತು ಎಂದು ಕೆಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದ ವರದಿಗಳ ವಿರುದ್ಧ ಜಮಾತ್ ಉಲೇಮಾ ಎ ಹಿಂದ್ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾಧ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ ಈ ಸೂಚನೆ ನೀಡಿತು.

ಸುದ್ದಿವಾಹಿನಿಗಳಲ್ಲಿ ಸುಳ್ಳುಸುದ್ದಿಗಳನ್ನು ತಡೆಯಲು ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆ ಅಡಿ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಹಿಂದಿನ ವಿಚಾರಣೆ ವೇಳೆ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಮಂಗಳವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಈ ಸಂಬಂಧ ಪ್ರಮಾಣಪತ್ರವನ್ನು ಸಲ್ಲಿಸಿತ್ತು. ‘ಸುದ್ದಿವಾಹಿನಿಗಳ ಮೇಲೆ ಸಾರಾಸಗಟಾಗಿ ನಿಷೇಧ ಹೇರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಸುದ್ದಿವಾಹಿನಿಗಳ ಸ್ವಯಂ ನಿಯಂತ್ರಣಕ್ಕೆ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್ ಸ್ಟಾಂಡರ್ಡ್ ಅಥಾರಿಟಿ (ಎನ್‌ಬಿಸಿಎ) ಇದೆ’ ಎಂದು ಸರ್ಕಾರವು ತನ್ನ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿತ್ತು. ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಮಾಹಿತಿಯನ್ನು ಪೀಠಕ್ಕೆ ನೀಡಿದರು.

ಸರ್ಕಾರದ ಈ ಉತ್ತರಕ್ಕೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಕೇಬಲ್ ಟಿ.ವಿ. ಜಾಲ ನಿಯಂತ್ರಣ ಕಾಯ್ದೆ ಅಡಿ ನೀವು ತೆಗೆದುಕೊಂಡಿರುವ ಕ್ರಮಗಳು ಯಾವುವು ಎಂದು ಪ್ರಶ್ನಿಸಿದ್ದೆವು. ನಾವು ಕೇಳಿದ್ದ ಯಾವ ಪ್ರಶ್ನೆಗೂ ನಿಮ್ಮ ಪ್ರಮಾಣಪತ್ರದಲ್ಲಿ ಉತ್ತರ ಇಲ್ಲ’ ಎಂದು ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

‘ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಯಾವುದೇವ್ಯವಸ್ಥೆ ಇಲ್ಲದೇ ಇದ್ದರೆ, ಒಂದು ವ್ಯವಸ್ಥೆಯನ್ನು ರೂಪಿಸಿ. ಸುಳ್ಳು ಸುದ್ದಿಗೆ ತಡೆ ಒಡ್ಡುವ ಅಧಿಕಾರ ಸರ್ಕಾರಕ್ಕೆ ಇರುವಾಗ, ಎನ್‌ಬಿಎಸ್‌ಎಯಂತಹ ಹೊರಗಿನ ಸಂಸ್ಥೆಗೆ ಏಕೆ ನಿಯಂತ್ರಣದ ಜವಾಬ್ದಾರಿ ವಹಿಸಬೇಕು’ ಎಂದು ಪೀಠವು ಪ್ರಶ್ನಿಸಿತು.‘ಈ ಕಾಯ್ದೆ ಅಡಿ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಮೆಹ್ತಾ ಉತ್ತರಿಸಿದರು.

‘ಹಾಗಿದ್ದರೆ ಆ ಕಾಯ್ದೆ ಅಡಿ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ. ದೂರುಗಳು ಬಂದಿದ್ದರೆ, ಅವುಗಳನ್ನು ಬಗೆಹರಿಸಲು ಈವರೆಗೆ ಏಕೆ ವ್ಯವಸ್ಥೆ ರೂಪಿಸಿಲ್ಲ’ ಎಂದು ಪೀಠ ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT