ಶುಕ್ರವಾರ, ಜುಲೈ 1, 2022
28 °C

ಜಹಾಂಗಿರ್‌ಪುರಿಯಲ್ಲಿ ತೆರವು ಕಾರ್ಯಾಚರಣೆ 2 ವಾರ ಸ್ಥಗಿತ: ಸುಪ್ರೀಂಕೋರ್ಟ್ ಆದೇಶ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮಹಾನಗರ ಪಾಲಿಕೆ (ಎನ್‌ಡಿಎಂಸಿ) ಕೈಗೊಂಡಿದ್ದ ‘ಒತ್ತುವರಿ ತೆರವು’ ಕಾರ್ಯಾಚರಣೆ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬುಧವಾರ ನೀಡಿದ್ದ ಆದೇಶವನ್ನು ಮುಂದಿನ ಆದೇಶದವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ವಿಸ್ತರಿಸಿದೆ. ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಭಾರಿ ಸಂಘರ್ಷಕ್ಕೆ ಜಹಾಂಗೀರ್‌ಪುರಿ ಸಾಕ್ಷಿಯಾಗಿತ್ತು. 

ನೆಲಸಮ ಕಾರ್ಯಾಚರಣೆಯ ಕಾನೂನು ಸಿಂಧುತ್ವ ಪ್ರಶ್ನಿಸಿ ಜಮೀಯತ್‌ ಉಲೇಮಾ ಎ ಹಿಂದ್‌, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಮತ್ತು ಬಿ.ಆರ್‌. ಗವಾಯಿ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಇತರ ಪ್ರಾಧಿಕಾರಗಳಿಗೆ ನೋಟಿಸ್‌ ನೀಡಿದೆ. 

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಆದೇಶ ನೀಡಿದ್ದ ಬಳಿಕವೂ ನೆಲಸಮ ಕಾರ್ಯಾಚರಣೆಯನ್ನು ಮೇಯರ್ ಮತ್ತು ಅಧಿಕಾರಿಗಳು  ಮುಂದುವರಿಸಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೀಠವು ಹೇಳಿದೆ. ಈ ತಿಂಗಳ ಆರಂಭದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದ ಮಧ್ಯಪ್ರದೇಶ, ಉತ್ತರ ಪ್ರದೇಶ
ಮತ್ತು ಗುಜರಾತ್‌ನಲ್ಲಿಯೂ ಇಂತಹುದೇ ನೆಲಸಮ ಕಾರ್ಯಾಚರಣೆ ನಡೆದಿತ್ತು. ಆ ರಾಜ್ಯಗಳಿಗೂ ನೋಟಿಸ್‌ ನೀಡಲಾಗಿದೆ. 

ದೇಶದಾದ್ಯಂತ ನೆಲಸಮ ಕಾರ್ಯಾಚರಣೆಗೆ ತಡೆ ಕೊಡಬೇಕು ಎಂಬ ಬೇಡಿಕೆಯನ್ನು ಪೀಠವು ಮಾನ್ಯ ಮಾಡಲಿಲ್ಲ. ಎರಡು ವಾರದ ಬಳಿಕ ಪ್ರಕರಣದ ವಿಚಾರಣೆಯನ್ನು ನಿಗದಿ ಮಾಡಲಾಗಿದೆ.  

ಸಾಂವಿಧಾನಿಕ ಮತ್ತು ರಾಷ್ಟ್ರೀಯ ಮಹತ್ವದ ದೂರಗಾಮಿ ಪ್ರಶ್ನೆಗಳನ್ನು ಈ ಪ್ರಕರಣವು ಎತ್ತಿದೆ. ಬುಲ್ಡೋಜರ್‌, ಸರ್ಕಾರದ ನೀತಿಯ ಭಾಗವಾಗಿಬಿಟ್ಟಿದೆ ಎಂದು ದೂರುದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ದುಷ್ಯಂತ ದವೆ ಹೇಳಿದರು. ದೆಹಲಿ ಪುರಸಭೆ ಕಾಯ್ದೆಯ ಪ್ರಸ್ತಾವನೆಯನ್ನು ದವೆ ಉಲ್ಲೇಖಿಸಿದರು. ದೆಹಲಿಗೆ ಭಾರಿ ಪ‍್ರಮಾಣದಲ್ಲಿ ಜನರು ವಲಸೆ ಬಂದಿದ್ದಾರೆ. ದೆಹಲಿಯು ಮಾಸ್ಟರ್ ಪ‍್ಲಾನ್‌ ಅನ್ನು ಮೀರಿ ಬೆಳೆದಿದೆ ಎಂಬುದನ್ನು ಅವರು ವಿವರಿಸಿದರು. 

ಮೇಲ್ವರ್ಗದ ಜನರು ವಾಸಿಸುವ ಸೈನಿಕ್‌ ಫಾರ್ಮ್‌ ಮತ್ತು ಗಾಲ್ಫ್‌ ಲಿಂಕ್ಸ್‌ ಪ್ರದೇಶದಲ್ಲಿರುವ ಅಕ್ರಮ ಕಟ್ಟಡಗಳನ್ನು ಏಕೆ ತೆರವು ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು. 

‘ಜಹಾಂಗೀರ್‌ಪುರಿಯಲ್ಲಿರುವ ಹಲವು ಮನೆಗಳು 30 ವರ್ಷಕ್ಕೂ ಹಳೆಯವು, ಕೆಲವು ಅಂಗಡಿಗಳು 50 ವರ್ಷಕ್ಕೂ ಹಳೆಯವು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಇಂತಹುದಕ್ಕೆ (ನೆಲಸಮ ಕಾರ್ಯಾಚರಣೆ) ಅವಕಾಶ ಕೊಡಲು ಹೇಗೆ ಸಾಧ್ಯ’ ಎಂದು ಅವರು ಕೇಳಿದರು. ನೆಲಸಮಕ್ಕೆ ಮೊದಲು ನೋಟಿಸ್‌ ಕೊಟ್ಟಿಲ್ಲ ಮತ್ತು ವಿವರಣೆ ನೀಡಲು ಅವಕಾಶವನ್ನೇ ಕೊಟ್ಟಿಲ್ಲ ಎಂದರು. 

ಒತ್ತುವರಿಯು ದೇಶದಾದ್ಯಂತ ಇರುವ ಸಮಸ್ಯೆಯಾಗಿದೆ. ಆದರೆ, ಮುಸ್ಲಿಮರನ್ನು ಅದರ ಜತೆಗೆ ತಳಕು ಹಾಕವುದು ಸಮಸ್ಯೆಯಾಗಿದೆ ಎಂದು ದೂರುದಾರರ ಪರವಾಗಿ ವಾದಿಸಿದ ಇನ್ನೊಬ್ಬ ಹಿರಿಯ ವಕೀಲ ಕಪಿಲ್‌ ಸಿಬಲ್ ಹೇಳಿದರು. 

ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ಇದೇ ರೀತಿ ನಡೆದ ನೆಲಸಮ ಕಾರ್ಯಾಚರಣೆಯನ್ನು ಸಿಬಲ್‌ ಉಲ್ಲೇಖಿಸಿದರು. ಸಂಘರ್ಷದ ಬಳಿಕ ದೇಶದ ಎಲ್ಲೆಡೆಯೂ ಇದು ಘಟಿಸುತ್ತಿದೆ. ಒಂದು ಸಮುದಾಯದ ಜನರ ಮನೆಗಳನ್ನು ಮಾತ್ರ ಉರುಳಿಸಲಾಗುತ್ತಿದೆ ಎಂದರು. 

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ದೂರಿನ ವಿಚಾರಣಾರ್ಹತೆಯನ್ನೇ ಪ್ರಶ್ನಿಸಿದರು. ದೆಹಲಿ ಹೈಕೋರ್ಟ್‌ ನೀಡಿದ್ದ ನಿರ್ದೇಶನ ಪ್ರಕಾರ, ಜನವರಿ 19ರಂದೇ ತೆರವು ಕಾರ್ಯಾಚರಣೆ ಆರಂಭವಾಗಿದೆ. ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿಯೂ ಕಾರ್ಯಾಚರಣೆ ನಡೆದಿದೆ. ಖರ್ಗೋನ್‌
ನಲ್ಲಿ ಹಿಂದೂಗಳ 88 ಮತ್ತು ಮುಸ್ಲಿಮರ 26 ಮನೆಗಳನ್ನು ನೆಲಸಮ ಮಾಡಲಾಗಿದೆ ಎಂದು ಅವರು ಹೇಳಿದರು. 

ಸಾರ್ವಜನಿಕ ಸ್ಥಳದಲ್ಲಿ ಇರಿಸಲಾಗಿರುವ ಮೇಜು, ಕುರ್ಚಿ ಮತ್ತು ಇತರ ವಸ್ತುಗಳನ್ನು ತೆರವು ಮಾಡಲು ನೋಟಿಸ್‌ ನೀಡುವ ಅಗತ್ಯ ಇಲ್ಲ ಎಂದು ಮೆಹ್ತಾ ವಾದಿಸಿದರು. ಮನೆ ಕೆಡಹುವ ಸಂದರ್ಭದಲ್ಲಿ ನೋಟಿಸ್‌ ನೀಡಲಾಗಿದೆ ಎಂದರು. 

ಇದನ್ನೂ ಓದಿ.. ನಾವು ನರಕದ ಹಾದಿಯಲ್ಲಿದ್ದೇವೆ: ಜಹಾಂಗಿರ್‌ಪುರಿ ಕಾರ್ಯಾಚರಣೆಗೆ ಚಿದಂಬರಂ ಕಿಡಿ

ದೆಹಲಿಯಲ್ಲಿನ 731 ಅನಧಿಕೃತ ಕಾಲೊನಿಗಳಲ್ಲಿ 50 ಲಕ್ಷ ಜನ ಇದ್ದಾರೆ. ಹಾಗಿರುವಾಗ ಒಂದು ಕಾಲೊನಿ ಮತ್ತು ಒಂದು ಸಮುದಾಯವನ್ನು ಮಾತ್ರ ಗುರಿ ಮಾಡಲು ಹೇಗೆ ಸಾಧ್ಯ?

- ದುಷ್ಯಂತ ದವೆ, ದೂರುದಾರರ ಪರ ವಕೀಲ

l ‘ರೋಹಿಂಗ್ಯಾ ಸಮುದಾಯದವರು ಮತ್ತು ಬಾಂಗ್ಲಾದೇಶೀಯರ ಅಕ್ರಮ ಒತ್ತುವರಿಯನ್ನು ತೆರವು ಮಾಡುವಂತೆ ಪೂರ್ವ ಮತ್ತು ದಕ್ಷಿಣ ದೆಹಲಿಯ ಮೇಯರ್‌ಗಳಿಗೂ ಪತ್ರ ಬರೆಯುತ್ತೇನೆ’ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ್‌ ಗುಪ್ತಾ ಹೇಳಿದ್ದಾರೆ. ಜಹಾಂಗೀರ್‌ಪುರಿಯಲ್ಲಿ ಅಕ್ರಮ ಕಟ್ಟಡ ನೆಲಸಮ ಮಾಡುವಂತೆ ಆದೇಶ್‌ ಅವರು ಉತ್ತರ ದೆಹಲಿ ಮಹಾನಗರ ಪಾಲಿಕೆ ಮೇಯರ್‌ಗೆ ಪತ್ರ ಬರೆದಿದ್ದರು

l ಶನಿವಾರ ಹಿಂಸಾಚಾರ ನಡೆದ ಜಹಾಂಗೀರ್‌ಪುರಿಯ ಸಿ ಬ್ಲಾಕ್‌ನಲ್ಲಿ ಗುರುವಾರ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಮಾಧ್ಯಮ ಪ್ರತಿನಿಧಿಗಳು ಈ ಪ್ರದೇಶಕ್ಕೆ ಹೋಗುವುದನ್ನು ತಡೆಯಲಾಗಿತ್ತು. ಇಲ್ಲಿನ ನಿವಾಸಿಗಳು ಮನೆಯಲ್ಲಿಯೇ ಉಳಿದರು. ಡ್ರೋನ್‌ ಮೂಲಕವೂ ನಿಗಾ ಇರಿಸಲಾಗಿದೆ

l ಕಾಂಗ್ರೆಸ್‌ ಮುಖಂಡರ ನಿಯೋಗವೊಂದು ಜಹಾಂಗೀರ್‌ಪುರಿಗೆ ಗುರುವಾರ ಭೇಟಿ ಕೊಟ್ಟಿದೆ. ಆದರೆ, ನೆಲಸಮ ಕಾರ್ಯಾಚರಣೆ ನಡೆದ ಸ್ಥಳಕ್ಕೆ ಹೋಗಲು ಪೊಲೀಸರು ಅವಕಾಶ ಕೊಡಲಿಲ್ಲ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌, ಕಾಂಗ್ರೆಸ್‌ನ ದೆಹಲಿ ಘಟಕದ ಉಸ್ತುವಾರಿ ಶಕ್ತಿಸಿಂಹ ಗೋಹಿಲ್‌ ನಿಯೋಗದಲ್ಲಿ ಇದ್ದರು 

l ಸಮಾಜವಾದಿ ಪಕ್ಷದ ಐವರು ಸದಸ್ಯರ ಸಮಿತಿಯು ಜಹಾಂಗೀರ್‌ಪುರಿಗೆ ಶುಕ್ರವಾರ ಭೇಟಿ ನೀಡಲಿದೆ. ಎನ್‌ಡಿಎಂಸಿ ನಡೆಸಿದ ನೆಲಸಮ ಕಾರ್ಯಾಚರಣೆಯ ಬಗ್ಗೆ ತನಿಖೆ ನಡೆಸಲಿದೆ ಎಂದು ಪಕ್ಷವು ಹೇಳಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು