ಬುಧವಾರ, ಫೆಬ್ರವರಿ 1, 2023
16 °C
ಖರೀದಿದಾರರ ರಕ್ಷಣೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ

ಮನೆ ಖರೀದಿಗೆ ಮಾದರಿ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫ್ಲ್ಯಾಟ್‌ ಖರೀದಿದಾರರು ಭವಿಷ್ಯದಲ್ಲಿ ಸಮಸ್ಯೆ ಎದುರಿಸುವುದನ್ನು ತಪ‍್ಪಿಸುವುದಕ್ಕಾಗಿ ಬಿಲ್ಡರ್‌–ಖರೀದಿದಾರರ ನಡುವಣ ಒಪ್ಪಂದದ ಮಾದರಿಯೊಂದನ್ನು ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಒಪ್ಪಂದದಲ್ಲಿ ಇರುವ ಕೆಲವು ಷರತ್ತುಗಳನ್ನು ರಾಜ್ಯ ಮಟ್ಟದಲ್ಲಿ ಬದಲಾಯಿಸಲು ಅವಕಾಶ ಇರುವುದಿಲ್ಲ ಎಂದೂ ತಿಳಿಸಿದೆ. 

ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016ರಲ್ಲಿರುವ ಅವಕಾಶಗಳಿಗೆ ಅನುಗುಣ
ವಾಗಿಯೇ ಈ ಮಾದರಿ ಒಪ್ಪಂದವೂ ಇರಲಿದೆ. ಈ ಮಾದರಿಯನ್ನು ನ್ಯಾಯಾಲಯದ ಅನುಮೋದನೆಗಾಗಿ ಸಲ್ಲಿಸಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಅಗತ್ಯಗಳ ಅನುಸಾರ ಹೆಚ್ಚುವರಿ ಷರತ್ತುಗಳನ್ನು ಸೇರಿಸಲು ಅವಕಾಶ ಇದೆ. ಆದರೆ, ಕೇಂದ್ರವು ಸಿದ್ಧಪಡಿಸಿದ ಷರತ್ತುಗಳಿಗೆ ವ್ಯತಿರಿಕ್ತವಾಗಿ ಇರುವಂತಿಲ್ಲ ಎಂದು ಸರ್ಕಾರವು ಕೋರ್ಟ್‌ಗೆ ಹೇಳಿದೆ. 

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಬಿಲ್ಡರ್‌–ಖರೀದಿದಾರರ ನಡುವಣ ಮಾದರಿ ಒಪ್ಪಂದ ಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತು. ಹೆಚ್ಚುವರಿ ಸಾಲಿಸಿಟರ್ ಜನರಲ್‌ ಐಶ್ವರ್ಯಾ ಭಾಟಿ ಮತ್ತು ನ್ಯಾಯಾಲಯದ ಸಹಾಯಕ ದೇವಾಶಿಶ್‌ ಭರೂಕ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. 

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸಲ್ಲಿಸಿದ್ದ ಪ್ರತಿಕ್ರಿಯೆಗೆ ಆಂಧ್ರ ಪ್ರದೇಶ, ಛತ್ತೀಸಗಢ, ಗುಜರಾತ್‌, ಜಾರ್ಖಂಡ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಜೋ
ರಾಂ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಉತ್ತರಿಸಿಲ್ಲ ಎಂದು ನ್ಯಾಯಾಲಯವು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. 

ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸದೇ ಇದ್ದರೆ ಈ ರಾಜ್ಯಗಳ ನಗರಾಭಿವೃದ್ಧಿ ಸಚಿವಾಲಯಗಳ ಪ್ರಧಾನ ಕಾರ್ಯದರ್ಶಿಗಳು ಮುಂದಿನ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದು ಪೀಠವು ಎಚ್ಚರಿಕೆ ನೀಡಿದೆ. ಪ್ರತಿಕ್ರಿಯೆ ಸಲ್ಲಿಸದೇ ಇರುವುದಕ್ಕೆ ಕಾನೂನು ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ವಿವರಣೆಯನ್ನೂ ನೀಡಬೇಕಾಗುತ್ತದೆ ಎಂದು ಪೀಠವು ಹೇಳಿದೆ. 

ಮನೆ ಖರೀದಿಸುವ ಲಕ್ಷಾಂತರ ಜನರ ಹಿತಾಸಕ್ತಿ ರಕ್ಷಿಸುವುದು ಮಹತ್ವದ ವಿಚಾರ. ಸಾಮಾನ್ಯವಾಗಿ ಈ ವಿಚಾರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೂ ಹೇಳಿತ್ತು. 

ಬಿಲ್ಡರ್‌ಗಳು ಮತ್ತು ಅವರ ದಲ್ಲಾಳಿ ಗಳು ನ್ಯಾಯಬದ್ಧವಲ್ಲದ ರೀತಿಯಲ್ಲಿ ವ್ಯವಹರಿಸುವುದನ್ನು ತಡೆಯಲು ಮಾದರಿ ಒಪ್ಪಂದ ಅಗತ್ಯ ಎಂದು ಉಪಾಧ್ಯಾಯ ಅವರು ಅರ್ಜಿಯಲ್ಲಿ ಕೋರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು