ಸೋಮವಾರ, ಮಾರ್ಚ್ 20, 2023
30 °C

ವೈವಾಹಿಕ ಕಾಯ್ದೆಯ ನಿಯಮಗಳ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳು ಪೂರಕ: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ ವೈವಾಹಿಕ ಕಾಯ್ದೆಯ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸುವ ಅರ್ಜಿಗಳು ಪ್ರಮುಖವಾಗುತ್ತವೆ’ ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯರ ಪೀಠವು ಅಭಿಪ್ರಾಯಪಟ್ಟಿದೆ.

ಈಗಿನ ನಿಯಮಗಳು ಕೋರ್ಟ್‌ಗೆ ಪ್ರತ್ಯೇಕಗೊಂಡ ಪತಿ ಅಥವಾ ಪತ್ನಿಗೆ ‘ಸಹಜೀವನ ನಡೆಸಲು’ ಹಾಗೂ ‘ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು’ ಆದೇಶಿಸುವ ಅಧಿಕಾರವನ್ನು ಕೋರ್ಟ್‌ಗೆ ನೀಡುತ್ತವೆ ಎಂದು ಪೀಠ ಹೇಳಿದೆ. 10 ದಿನದಲ್ಲಿ ಪ್ರತಿಕ್ರಿಯೆಯನ್ನು ದಾಖಲಿಸಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಆರ್.ಎಫ್‌.ನರಿಮನ್, ಕೆ.ಎಂ.ಜೋಸೆಫ್‌ ಮತ್ತು ಬಿ.ಆರ್‌.ಗವಳಿ ಅವರಿದ್ದ ನ್ಯಾಯಪೀಠವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನಿಗದಿಪಡಿಸಿದ್ದು, ಪೂರಕವಾಗಿ ಸಲ್ಲಿಕೆಯಾಗಿದ್ದ ವಿವಿಧ ಮಧ್ಯಂತರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತು.

ಗುರುವಾರ ಅಲ್ಪಕಾಲದ ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು, ಈ ಸಂಬಂಧ ಲಿಖಿತವಾಗಿ ಹೇಳಿಕೆಯನ್ನು ದಾಖಲಿಸಲು ತಮಗೆ ಸಮಯಾವಕಾಶ ಬೇಕು ಎಂದು ತಿಳಿಸಿದರು.

ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌ ಅವರು, ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್‌ 9 ಮತ್ತು ಪೂರಕ ನಿಯಮಗಳಿಗೆ ಅನ್ವಯಿಸುವಂತೆ ಈ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ, ಕೋರ್ಟ್‌ ಕಡಿಮೆ ಕಾಲಾವಧಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಮಧ್ಯಂತರ ಅರ್ಜಿಗಳನ್ನು ಪ್ರತಿನಿಧಿಸಿದ್ದ ವಕೀಲ ಶೋಯೆಬ್ ಅಲಂ ಅವರು, ವೈವಾಹಿಕ ಕಾಯ್ದೆಯಷ್ಟೇ ಅಲ್ಲ, ಐಪಿಸಿ ಮತ್ತು ಇತರೆ ಕಾಯ್ದೆಗಳ ಹಲವು ನಿಯಮಗಳು ಪರಿಶೀಲನೆಗೆ ಒಳಪಡಬೇಕು ಎಂದು ಪ್ರತಿಪಾದಿಸಿದರು. ಈ ಎಲ್ಲ ಅರ್ಜಿಗಳನ್ನು ಮುಖ್ಯ ಅರ್ಜಿ ಜೊತೆಗೆ ಸೇರಿಸಿ ಜುಲೈ 22ರಂದು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿತು.

ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್‌ 9 ಮತ್ತು ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್‌ 22 ಮತ್ತು ಸಿಪಿಸಿಯ ಕೆಲ ನಿಯಮಗಳನ್ನು ಪ್ರಶ್ನಿಸಿ, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಒಜಾಸ್ವಾ ಪಾಠಕ್, ಮಯಂಕ್‌ ಗುಪ್ತಾ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರತ್ಯೇಕಗೊಂಡ ಪತಿ, ಪತ್ನಿಗೆ ಸಹಜೀವನ ನಡೆಸಲು ಆದೇಶಿಸಲು ಕಾಯ್ದೆ ನಿಯಮಗಳು ಕೋರ್ಟ್‌ಗೆ ಅಧಿಕಾರ ನೀಡುತ್ತವೆ. ವಿಚಾರಣೆಗೆ ನೆರವಾಗಲು ಅಟಾರ್ನಿ ಜನರಲ್‌ ಅವರಿಗೆ ಹಿಂದೆ ಸುಪ್ರೀಂ ಕೋರ್ಟ್ ಕೇಳಿತ್ತು. ವಿಚಾರಣೆಯನ್ನು ಕೋರ್ಟ್‌ ಮಾರ್ಚ್ 5, 2019ರಂದು ತ್ರಿಸದಸ್ಯರ ಪೀಠಕ್ಕೆ ಒಪ್ಪಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು