ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಕದನ: ವಿಚಾರಣೆ ಇಂದು

Last Updated 21 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣವೇ ನಿಜವಾದ ಶಿವಸೇನಾ ಎಂದು‍ ‍ಚುನಾವಣಾ ಆಯೋಗವು ನೀಡಿರುವ ಆದೇಶವನ್ನು ಪ್ರಶ್ನಿಸಿ ಶಿವಸೇನಾ (ಉದ್ಧವ್ ಬಾಳಾ ಠಾಕ್ರೆ) ಬಣದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಅಪರಾಹ್ನ 3.30ಕ್ಕೆ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡದೇ ಇದ್ದರೆ ಶಿಂದೆ ಬಣವು ಪಕ್ಷದ ಚಿಹ್ನೆ ಮತ್ತು ಬ್ಯಾಂಕ್‌ ಖಾತೆಯನ್ನು ವಶಕ್ಕೆ ಪಡೆಯಲಿದೆ. ಹಾಗಾಗಿ, ಸಂವಿಧಾನ ಪೀಠವು ಬುಧವಾರವೇ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಉದ್ಧವ್‌ ಪರ ವಕೀಲ ಕಪಿಲ್‌ ಸಿಬಲ್‌ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವನ್ನು ಕೋರಿದರು.

ಸಂವಿಧಾನದ 10ನೇ ಪರಿಚ್ಛೇದದ ಅಡಿಯಲ್ಲಿನ ಅನರ್ಹತೆ ಪ್ರಕ್ರಿಯೆ, ಚಿಹ್ನೆಗಳ ಹಂಚಿಕೆ ಪ್ರಕ್ರಿಯೆಗಳಲ್ಲಿ ಆಯೋಗವು ಲೋಪ ಎಸಗಿದೆ. ಶಿವಸೇನಾ ಪಕ್ಷವು ಒಡೆದಿದೆ ಎಂಬ ನಿರ್ಧಾರಕ್ಕೆ ಬರುವಲ್ಲಿಯೂ ಆಯೋಗ ತಪ್ಪೆಸಗಿದೆ. ಪಕ್ಷವು ಹೋಳಾಗಿದೆ ಎಂದು ಯಾರೂ ಹೇಳಿಲ್ಲ ಮತ್ತು ಸಾಕ್ಷ್ಯವೂ ಇಲ್ಲ. ಈ ವಿಚಾರದಲ್ಲಿಯೂ ಆಯೋಗ ಲೋಪ ಎಸಗಿದೆ ಎಂದು ಉದ್ಧವ್‌ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಆಯೋಗವು ಪಕ್ಷಪಾತಿಯಾಗಿ ವರ್ತಿಸಿದೆ. ಪಕ್ಷದ ಪ್ರಾಥಮಿಕ ಸದಸ್ಯರ ಆಶಯಗಳನ್ನು ಪ್ರತಿನಿಧಿಸುವ ಪ್ರತಿನಿಧಿ ಸಭಾದಲ್ಲಿ ಉದ್ಧವ್‌ ಅವರಿಗೆ ಭಾರಿ ಬಹುಮತ ಇದೆ. ವಿವಾದದ ಮಧ್ಯಸ್ಥಿಕೆಯಲ್ಲಿ ತಟಸ್ಥವಾಗಿ ಇರುವಲ್ಲಿ ಆಯೋಗ ವಿಫಲವಾಗಿದೆ. ತನ್ನ ಸಾಂವಿಧಾನಿಕ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಉದ್ಧವ್ ಆರೋಪಿಸಿದ್ದಾರೆ.

‘ಸಂಸತ್ತಿನಲ್ಲಿ ಚರ್ಚೆ ಏಕಿಲ್ಲ’

ಪ‍ಕ್ಷಾಂತರದ ವಿಚಾರಕ್ಕೆ ಬಂದಾಗ ಸದನದ ಸ್ಪೀಕರ್ ಅವರು ನ್ಯಾಯಮಂಡಳಿಯ ರೀತಿಯಲ್ಲಿ ಕೆಲಸ ಮಾಡಬೇಕು. ಆದರೆ, ಈ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಂಸತ್ತಿನಲ್ಲಿ ಎಷ್ಟು ಬಾರಿ ಚರ್ಚೆ ನಡೆದಿದೆ ಎಂದು ಸುಪ್ರೀಂ ಕೋರ್ಟ್‌, ಉದ್ಧವ್‌ ಠಾಕ್ರೆ ಬಣವನ್ನು ಪ್ರಶ್ನಿಸಿದೆ.

ಸಂವಿಧಾನದ 10ನೇ ಪರಿಚ್ಛೇದದ ಪ್ರಕಾರ, ಶಿಂದೆ ಬಣದಲ್ಲಿರುವ 40 ಶಾಸಕರಿಗೆ ಯಾವುದೇ ಸಮರ್ಥನೆ ಇಲ್ಲ. ಈ ಶಾಸಕರು ಪಕ್ಷಾಂತರ ಮಾಡಿದ್ದಾರೆ ಎಂದು ಕೋರ್ಟ್ ಆದೇಶ ಕೊಟ್ಟರೆ, ಅದು ದೂರಗಾಮಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕಪಿಲ್ ಸಿಬಲ್‌ ವಾದಿಸಿದರು. ಆದರೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಭಿನ್ನ ನಿಲುವು ವ್ಯಕ್ತಪಡಿಸಿತು. ನ್ಯಾಯಾಲಯವು ಕಾನೂನನ್ನು ವ್ಯಾಖ್ಯಾನಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಸ್ಪೀಕರ್‌ ಅವರು ನ್ಯಾಯಮಂಡಳಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನು ಶಾಸಕರು ಮತ್ತು ಸಂಸದರೇ ತೀರ್ಮಾನಿಸಿದ್ದಾರೆ. ಹಾಗಾಗಿ, ಸಂವಿಧಾನದ 10ನೇ ಪರಿಚ್ಛೇದದ ಪ್ರಕಾರ, ಸ್ಪೀಕರ್ ಅವರೇ ನ್ಯಾಯಮಂಡಳಿಯಂತೆ ಕೆಲಸ ಮಾಡಬೇಕು ಎಂದು ಪೀಠವು ಹೇಳಿದೆ.

ಸ್ಪೀಕರ್ ನಡವಳಿಕೆ ಕುರಿತು ಸಂಸತ್ತಿನಲ್ಲಿ ಏಕೆ ಚರ್ಚೆ ಆಗುವುದಿಲ್ಲ. ಒಂದೆರಡು ಕೆಟ್ಟ ಉದಾಹರಣೆಗಳಿಂದಾಗಿ ತಾನು ನಿಯಮವನ್ನು ಏಕೆ ಬದಲಾಯಿಸಬೇಕು ಎಂದು ಪೀಠವು ಪ್ರಶ್ನಿಸಿದೆ.

‘ಶಿಂದೆ ಮಗನಿಂದ ಜೀವ ಬೆದರಿಕೆ’

ಮುಂಬೈ (ಪಿಟಿಐ): ಏಕನಾಥ ಶಿಂದೆ ಅವರ ಮಗ, ಸಂಸದ ಶ್ರೀಕಾಂತ್ ಶಿಂದೆ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಶಿವಸೇನಾ ಉದ್ಧವ್‌ ಬಣದ ವಕ್ತಾರ ಸಂಜಯ ರಾವುತ್‌ ಪೊಲೀಸರಿಗೆ ಪತ್ರ ಬರೆದಿದ್ದಾರೆ. ‘ಇದು ಅಗ್ಗದ ತಂತ್ರ’ ಎಂದು ಶಿಂದೆ ಬಣವು ಹೇಳಿದೆ.

ತಮ್ಮನ್ನು ಹತ್ಯೆ ಮಾಡಲು ಅವರು ಠಾಣೆಯ ಗೂಂಡಾ ರಾಜಾ ಠಾಕೂರ್‌ಗೆ ಸುಪಾರಿ ನೀಡಿದ್ದಾರೆ. ಈ ಮಾಹಿತಿಯನ್ನು ದೃಢಪಡಿಸಿಕೊಂಡಿದ್ದೇನೆ. ಹೊಣೆಗಾರಿಕೆಯುಳ್ಳ ಪೌರನಾಗಿ ಈ ವಿಚಾರವನ್ನು‍ ತಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಗೃಹ ಸಚಿವರೂ ಆಗಿರುವ ಉಪ‍ಮುಖ್ಯಮಂತ್ರಿ ದೇವೇಂದ್ರ ಪಡಣವೀಸ್‌ ಮತ್ತು ಮುಂಬೈ ಪೊಲೀಸ್‌ ಆಯುಕ್ತರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

*ಚುನಾವಣಾ ಆಯೋಗದ ಆದೇಶದ ಪ್ರಕಾರ, ಶಿಂದೆ ಬಣ ಎನ್ನುವ ಬದಲು ಶಿವಸೇನಾ ಎಂದೇ ಕರೆಯಬೇಕು ಎಂದು ಪಕ್ಷದ ಕಾರ್ಯದರ್ಶಿ ಸಂಜಯ ಭಾವುರಾವ್‌ ಮಾಧ್ಯಮದವರಿಗೆ ಹೇಳಿದ್ದಾರೆ

*ಸಂಸತ್ ಭವನದಲ್ಲಿ ಶಿವಸೇನಾ ಹೊಂದಿದ್ದ ಕಚೇರಿಯನ್ನು ಶಿಂದೆ ಬಣಕ್ಕೆ ನೀಡಿ ಲೋಕಸಭಾ ಕಾರ್ಯಾಲಯವು ಆದೇಶ ಹೊರಡಿಸಿದೆ. ಶಿಂದೆ ಬಣದ ಸದನ ನಾಯಕ ರಾಹುಲ್‌ ಶೆವಾಲೆ ಅವರು ಇದೇ 18ರಂದು ಲೋಕಸಭಾ ಕಾರ್ಯಾಲಯಕ್ಕೆ ಪತ್ರ ಬರೆದು ತಮ್ಮ ಪಕ್ಷಕ್ಕೆ ಕಚೇರಿ ಒದಗಿಸಬೇಕು ಎಂದು ಕೋರಿದ್ದರು. ಈವರೆಗೆ ಎರಡೂ ಬಣದ ಸಂಸದರು ಇದೇ ಕಚೇರಿಯನ್ನು
ಬಳಸುತ್ತಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT