ಬುಧವಾರ, ಫೆಬ್ರವರಿ 8, 2023
18 °C

ಕೊಲಿಜಿಯಂನಿಂದ ಐಬಿ ವರದಿ ಬಹಿರಂಗ ಕಳವಳಕಾರಿ: ಕಾನೂನು ಸಚಿವ ಕಿರಣ್‌ ರಿಜಿಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಗುಪ್ತಚರ ಬ್ಯೂರೊ (ಐಬಿ) ಮತ್ತು ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ (ರಾ) ನೀಡಿದ್ದ ಸೂಕ್ಷ್ಮ ವರದಿಗಳ ಭಾಗಗಳನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಬಹಿರಂಗಪಡಿಸಿ ರುವುದು ಗಂಭೀರ ಕಳವಳದ ವಿಚಾರ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಮಂಗಳವಾರ ಹೇಳಿದ್ದಾರೆ. 

ಗುಪ್ತಚರ ಸಂಸ್ಥೆಗಳು ದೇಶಕ್ಕಾಗಿ ರಹಸ್ಯ ಸ್ವರೂಪದಲ್ಲಿ ಕೆಲಸ ಮಾಡುತ್ತವೆ. ಅಂತಹ ಸಂಸ್ಥೆಗಳು ಕೊಟ್ಟ ವರದಿಗಳನ್ನು ಬಹಿರಂಗಪಡಿಸುವಾಗ ಎರಡೆರಡು ಬಾರಿ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ. 

‘ಇದು ಪರಿಣಾಮವನ್ನೂ ಉಂಟು ಮಾಡಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕೆಲವು ಹೆಸರುಗಳನ್ನು ಕೇಂದ್ರ ತಿರಸ್ಕರಿಸಿತ್ತು. ಅವೇ ಹೆಸರುಗಳನ್ನು ಸರ್ಕಾರಕ್ಕೆ ಕೊಲಿಜಿಯಂ ಮರಳಿ ಕಳುಹಿಸಿತ್ತು. ಈ ಸಂದರ್ಭದಲ್ಲಿ ಐಬಿ ಮತ್ತು ರಾ ಕೊಟ್ಟ ವರದಿಗಳ ಭಾಗಗಳನ್ನು ಬಹಿರಂಗಪಡಿಸಿತ್ತು. ಇದಕ್ಕೆ ಸಂಬಂಧಿಸಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ರಿಜಿಜು ಅವರು ಹೀಗೆ ಉತ್ತರಿಸಿದ್ದಾರೆ. 

ವರದಿಗಳನ್ನು ಕೊಲಿಜಿಯಂ ಬಹಿರಂಗಪಡಿಸಿದ ವಿಚಾರದಲ್ಲಿ ಸರ್ಕಾರ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.  ವರದಿಗಳನ್ನು ಬಹಿರಂ‍ಗಪಡಿಸಿದ್ದಕ್ಕೆ ಸಂಬಂಧಿಸಿ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ, ಈಗ ಅದಕ್ಕೆ ಸರಿಯಾದ ಸಮಯ ಅಲ್ಲ ಎಂದೂ ರಿಜಿಜು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಜೊತೆಗೆ ಈ ಕುರಿತು ಮಾತನಾಡಲಾಗುವುದೇ ಎಂಬ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಲಿಲ್ಲ. 

‘ನಾವು ಸಂಪರ್ಕದಲ್ಲಿದ್ದೇವೆ. ಅವರು ನ್ಯಾಯಾಂಗದ ಮುಖ್ಯಸ್ಥ. ಸರ್ಕಾರ ಮತ್ತು ನ್ಯಾಯಾಂಗದ ನಡುವಣ ಕೊಂಡಿಯಾಗಿ ನಾನು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ನಾವು ಜೊತೆಯಾಗಿ ಕೆಲಸ ಮಾಡಲೇಬೇಕಾಗುತ್ತದೆ. ಪ್ರತ್ಯೇಕವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. 

ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ಎಸ್‌. ಸೋಧಿ ಅವರು ನೀಡಿದ್ದ ಸಂದರ್ಶನವೊಂದನ್ನು ರಿಜಿಜು ಅವರು ಇತ್ತೀಚೆಗೆ ಹಂಚಿಕೊಂಡಿದ್ದರು. ನ್ಯಾಯಾಮೂರ್ತಿಗಳನ್ನು ತಾವೇ ನೇಮಿಸುವ ಮೂಲಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಸಂವಿಧಾನವನ್ನು ಅಪಹರಿಸಿದ್ದಾರೆ ಎಂದು ಸೋಧಿ ಅವರು ಸಂದರ್ಶನದಲ್ಲಿ ಹೇಳಿದ್ದರು. ಆದರೆ, ಸರ್ಕಾರದ ಅನುಕೂಲಕ್ಕೆ ತಕ್ಕಂತೆ ತಮ್ಮ ಹೇಳಿಕೆಗಳನ್ನು ಬಳಸಿಕೊಳ್ಳಬಾರದು ಎಂದು ಸೋಧಿ ಅವರು ಬಳಿಕ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು