ಬುಧವಾರ, ಮಾರ್ಚ್ 29, 2023
24 °C

ಸುಶಾಂತ್ ಸಿಂಗ್ ರಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಶವಾಗಾರದ ಸಿಬ್ಬಂದಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ‘ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ಮುಂಬೈನ ಕೂಪರ್‌ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ರೂಪಕುಮಾರ್‌ ಶಾ ಹೇಳಿದ್ದಾರೆ. ಅವರ ಹೇಳಿಕೆಯು ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

'ನಾನು ಸುಶಾಂತ್ ಸಿಂಗ್ ರಜಪೂತ್ ಅವರ ಶವವನ್ನು ನೋಡಿದಾಗ ಅದು ಆತ್ಮಹತ್ಯೆ ಎಂದು ಅನಿಸುತ್ತಿರಲಿಲ್ಲ. ಅವರ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಇದನ್ನೇ ನನ್ನ ಹಿರಿಯರ ಅಧಿಕಾರಿಗಳ ಬಳಿಗೆ ಹೋಗಿ ಹೇಳಿದ್ದೆ. ಆದರೆ, ಇದನ್ನು ಆಮೇಲೆ ಚರ್ಚೆ ಮಾಡೋಣ ಎಂದು ಅವರು ನನಗೆ ಹೇಳಿದರು’ ಎಂದು ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡುತ್ತಾ ರೂಪಕುಮಾರ್‌ ಶಾ ಹೇಳಿದ್ದಾರೆ.

‘ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನು ಬರೆಯಬೇಕು ಎಂಬುದು ವೈದ್ಯರ ಕೆಲಸ. ಅವರಿಗೆ (ಸುಶಾಂತ್‌ ಸಿಂಗ್‌ಗೆ) ನ್ಯಾಯ ಸಿಗಬೇಕು. ಅವರನ್ನು ಕೊಲೆ ಮಾಡಲಾಗಿತ್ತು ಎಂಬುದು ಅವರನ್ನು ನೋಡಿದ ಯಾರಿಗಾದರೂ ಹೇಳಬಹುದಿತ್ತು. ತನಿಖಾ ಸಂಸ್ಥೆ ನನ್ನನ್ನು ಕರೆದರೆ ನಾನು ಅವರ ಬಳಿಗೆ ತೆರಳಿ ವಿವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ನಟ ಸುಶಾಂತ್‌ ಸಿಂಗ್‌ ರಾಜಪೂತ್‌ ಅವರು 2020ರ ಜೂನ್ 14ರಂದು ಮುಂಬೈನ ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ಸುತ್ತ ಅನುಮಾನಗಳು ಎದ್ದಿದ್ದವು. ಅವರನ್ನು ಕೊಲೆ ಮಾಡಲಾಗಿದೆ ಎಂಬ ವಾದಗಳು ಕೇಳಿಬಂದಿದ್ದವು.

ಆದರೆ, ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಶವಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ. ಕುಟುಂಬಸ್ಥರು ಇದು ಕೊಲೆ ಎಂದೇ ಹೇಳಿದ್ದಾರೆ. ಪ್ರಕರಣವನ್ನು ಆರಂಭದಲ್ಲಿ ಮುಂಬೈ ಪೊಲೀಸರು ತನಿಖೆ ಮಾಡಿದ್ದರು. ನಂತರ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) , ಮಾದಕ ಪದಾರ್ಥ ನಿಯಂತ್ರಣ ಘಟಕ (ಎನ್‌ಸಿಬಿ), ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ‌ನಡೆಸುತ್ತಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು