ಶಾಸಕರ ಅಮಾನತು ವಿರೋಧಿಸಿ ಸದನದ ಹೊರಗೆ ‘ಸಮನಾಂತರ ಅಧಿವೇಶನʼ ನಡೆಸಿದ ‘ಮಹಾʼ ಬಿಜೆಪಿ

ಮುಂಬೈ: ವಿಧಾನಸಭೆಯಲ್ಲಿ ತಮ್ಮ ಪಕ್ಷದ 12 ಶಾಸಕರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ವಿರೋಧ ಪಕ್ಷದ (ಬಿಜೆಪಿ) ಶಾಸಕರು ಮಂಗಳವಾರ ಸದನದ ಹೊರ ಭಾಗದಲ್ಲಿ ‘ಸಮಾನಾಂತರ ಅಧಿವೇಶನ‘ ನಡೆಸಿದರು.
ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಅವರು ಶಾಸಕ ಕಾಳಿದಾಸ್ ಕೋಲಮ್‌ಕರ್ ಅವರನ್ನು ಸಮಾನಾಂತರ ಅಧಿವೇಶನದ ಸಭಾಧ್ಯಕ್ಷ ಎಂದು ಘೋಷಿಸಿ, ಚರ್ಚೆ ನಡೆಸುವಂತೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದರು. ‘ನಾನು ಈಗ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸುತ್ತಿದ್ದೇನೆ. ಸದಸ್ಯರು ಈ ನಿರ್ಣಯದ ಮೇಲೆ ಚರ್ಚೆ ಆರಂಭಿಸಬಹುದು’ ಎಂದು ತಿಳಿಸಿದರು.
ಸದನದ ಹೊರ ಭಾಗದಲ್ಲಿ ಧ್ವನಿವರ್ಧಕಗಳೊಂದಿಗೆ ಘೋಷಣೆ ಕೂಗುತ್ತಾ, ಸಮಾನಾಂತರ ಅಧಿವೇಶನ ನಡೆಸುತ್ತಿರುವ ಬಿಜೆಪಿಯವರ ನಡೆಯನ್ನು ಆಡಳಿತ ಪಕ್ಷದ ನಾಯಕರು ಆಕ್ಷೇಪಿಸಿದರು.
ಸಮಾನಾಂತರ ಅಧಿವೇಶನದಲ್ಲಿ ಬಿಜೆಪಿಯ ಕೆಲವು ಮಾಜಿ ಶಾಸಕರನ್ನೂ ಕಂಡ ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯರು, ‘ಕೋವಿಡ್–19 ನಿರ್ಬಂಧಗಳ ನಡುವೆ ಮಾಜಿ ಶಾಸಕರು ಹೇಗೆ ವಿಧಾನ ಭವನ ಪ್ರವೇಶಿಸಿದರು‘ ಎಂದು ಭದ್ರತಾ ವಿಭಾಗದವರನ್ನು ಪಶ್ನಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಘಟನೆ ನಂತರ, ಧ್ವನಿ ವರ್ಧಕಗಳೊಂದಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ವಿಧಾನ ಭವನದ ಆವರಣ ಪ್ರವೇಶಿಸಲು ಮುಂದಾದ ಬಿಜೆಪಿ ಶಾಸಕರನ್ನು ಭದ್ರತಾ ಸಿಬ್ಬಂದಿ ತಡೆದರು.
ಇತ್ತ ಹೊರಗಡೆ ಸಮಾನಾಂತರ ಅಧಿವೇಶನ ನಡೆಯುವಾಗ, ಅತ್ತ ಸದನದ ಒಳಗೆ ನಡೆಯುತ್ತಿದ್ದ ಮುಂಗಾರು ಅಧಿವೇಶನದಲ್ಲಿ ಎನ್‌ಸಿಪಿ ನಾಯಕ ಮತ್ತು ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು, ‘ಸ್ಪೀಕರ್ ಭಾಸ್ಕರ್ ಜಾಧವ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗುತ್ತಿದೆ. ಅವರಿಗೆ ಭದ್ರತೆ ಒದಗಿಸುವಂತೆ ಕೇಳಿದರು. ಇದೇ ವೇಳೆ ಮಾಜಿ ಶಾಸಕ ರಾಜ್ ಪುರೋಹಿತ್ ಅವರು ವಿಧಾನ ಭವನದಲ್ಲಿ ಹೇಗೆ ಕರಪತ್ರಗಳನ್ನು ಹಂಚುತ್ತಾರೆ ? ಎಂದು ಪ್ರಶ್ನಿಸಿದರು.
ಇವನ್ನೂ ಓದಿ
* ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅನುಚಿತ ವರ್ತನೆ ಆರೋಪ: ಬಿಜೆಪಿಯ 12 ಶಾಸಕರ ಅಮಾನತು
* ಪ್ರಜಾಪ್ರಭುತ್ವದ ಕಗ್ಗೊಲೆ: ಬಿಜೆಪಿಯ 12 ಶಾಸಕರ ಅಮಾನತಿಗೆ ಫಡಣವೀಸ್ ಆಕ್ರೋಶ
* ಬಿಜೆಪಿ ಶಾಸಕರ ಅಮಾನತು ಸಮರ್ಥಿಸಿದ ರಾವುತ್: ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.