ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವೇಂದು ರಾಜೀನಾಮೆ ಅಂಗೀಕಾರವಾಗಿಲ್ಲ: ಸ್ಪೀಕರ್‌

ಪಾಲನೆಯಾಗದ ಸಂವಿಧಾನದ ನಿಬಂಧನೆ, ಸದನದ ನಿಯಮ
Last Updated 18 ಡಿಸೆಂಬರ್ 2020, 19:02 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಟಿಎಂಸಿಯ ಶಾಸಕ ಸುವೇಂದು ಅಧಿಕಾರಿ ಅವರ ರಾಜೀನಾಮೆಯು ಅಂಗೀಕಾರವಾಗಿಲ್ಲ’ ಎಂದು ಪಶ್ಚಿಮ ಬಂಗಾಳದ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.

‘ಸಂವಿಧಾನದ ನಿಬಂಧನೆಗಳು ಮತ್ತು ಸದನದ ನಿಯಮಗಳಿಗೆ ಅನುಗುಣವಾಗಿ ಸುವೇಂದು ರಾಜೀನಾಮೆ ಸಲ್ಲಿಸಿಲ್ಲ. ಹಾಗಾಗಿ, ಅವರ ರಾಜೀನಾಮೆ ಅಂಗೀಕಾರವಾಗಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಡಿ. 21ರಂದು ತಮ್ಮ ಕೊಠಡಿಗೆ ಖುದ್ದು ಹಾಜರಾಗುವಂತೆಯೂ ಸುವೇಂದು ಅವರಿಗೆ ಬ್ಯಾನರ್ಜಿ ಸೂಚಿಸಿದ್ದಾರೆ.

‘ಸುವೇಂದು ಅವರು ವೈಯಕ್ತಿಕವಾಗಿ ನನ್ನನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿಲ್ಲ. ಅಷ್ಟೇ ಅಲ್ಲ, ರಾಜೀನಾಮೆಯು ಸ್ವಯಂಪ್ರೇರಿತವಾದದ್ದೇ ಅಥವಾ ಸಕಾರಣಕ್ಕಾಗಿ ನೀಡಲಾಗಿದೆಯೇ ಎಂಬ ಬಗ್ಗೆ ಯಾವುದೇ ಸುಳಿವೂ ಇಲ್ಲ’ ಎಂದೂ ಅವರು ಹೇಳಿದ್ದಾರೆ.

‘ರಾಜೀನಾಮೆಯು ಸ್ವಯಂಪ್ರೇರಿತ ವಾದದ್ದು ಮತ್ತು ಸಕಾರಣವಾದದ್ದು ಎನ್ನುವ ಬಗ್ಗೆ ನನಗೆ ಮನವರಿಕೆಯಾಗದ ಹೊರತು ಸಂವಿಧಾನದ ನಿಬಂಧನೆಗಳು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳಡಿ ನಾನು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಬಿಮನ್ ಬ್ಯಾನರ್ಜಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಚಿವ ಸಂಪುಟದಲ್ಲಿದ್ದ ಸುವೇಂದು ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಡಿ.16ರಂದು ವಿಧಾಸನಭಾ ಕಾರ್ಯದರ್ಶಿ ಅವರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆ ಸಮಯದಲ್ಲಿ ವಿಧಾನಸಭೆಯ ಸ್ಪೀಕರ್ ಅವರು ಸದನದಲ್ಲಿ ಹಾಜರಿರಲಿಲ್ಲ.

ಪಕ್ಷಕ್ಕೆ ರಾಜೀನಾಮೆ: ಬ್ಯಾರಕ್‌ಪುರ ಶಾಸಕ ಶೀಲಭದ್ರ ದತ್ತಾ ಅವರು ಟಿಎಂಸಿ ಪಕ್ಷಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ 24 ಗಂಟೆಗಳಲ್ಲಿ ಮೂವರು ಪ್ರಮುಖ ನಾಯಕರು ಪಕ್ಷ ತ್ಯಜಿಸಿದಂತಾಗಿದೆ.

ಶೀಲಭದ್ರ ದತ್ತಾ ಅವರು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ಪತ್ರವನ್ನು ಇ–ಮೇಲ್‌ ಮೂಲಕ ಕಳುಹಿಸಿದ್ದಾರೆ. ಇತರ ನಾಯಕರಂತೆ ಅವರು ಕೂಡ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

‘ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಶಾಸಕ ಸ್ಥಾನಕ್ಕಲ್ಲ’ ಎಂದು ಅವರು ವರದಿಗಾರರಿಗೆ ತಿಳಿಸಿದರು.

ಬಿಜೆಪಿ ಮುಖಂಡರಿಗೆ ಕೋರ್ಟ್‌ನಿಂದ ಮಧ್ಯಂತರ ರಕ್ಷಣೆ
ಕ್ರಿಮಿನಲ್ ಪ್ರಕರಣವೊಂದರಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಐವರು ಬಿಜೆಪಿ ಮುಖಂಡರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಂತರ ರಕ್ಷಣೆ ಮಂಜೂರು ಮಾಡಿ, ಅವರ ವಿರುದ್ಧ ಬಲವಂತವಾಗಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ಈ ಐವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿ, ವಿಚಾರಣೆಯನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT