ಮಂಗಳವಾರ, ಅಕ್ಟೋಬರ್ 27, 2020
25 °C
ಆಸ್ತಿ ಹಕ್ಕು ನೀಡುವ ಕಾರ್ಡ್ ವಿತರಣೆಗೆ ಪ್ರಧಾನಿ ಮೋದಿ ಚಾಲನೆ

ಗ್ರಾಮ ಸ್ವಾವಲಂಬನೆಗೆ ‘ಸ್ವಾಮಿತ್ವ ಕಾರ್ಡ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆಸ್ತಿ ಮಾರಾಟ ಹಾಗೂ ಖರೀದಿ ಸರಳಗೊಳಿಸುವ ‘ಸ್ವಾಮಿತ್ವ’ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು. ‘ಆಸ್ತಿಯ ಮಾಲೀಕತ್ವವನ್ನು ಖಚಿತಪಡಿಸುವ ಈ ಯೋಜನೆಯು ಗ್ರಾಮೀಣ ಭಾರತದಲ್ಲಿ ಮಹತ್ವದ ಬದಲಾವಣೆ ತರಬಲ್ಲ ಐತಿಹಾಸಿಕ ನಡೆ’ ಎಂದು ಪ್ರಧಾನಿ ಬಣ್ಣಿಸಿದ್ದಾರೆ. 

‘ಗ್ರಾಮೀಣ ಭಾಗದ ಜನರು ಬ್ಯಾಂಕ್‌ನಲ್ಲಿ ಸಾಲ ಮತ್ತು ಇತರ ಹಣಕಾಸು ಸೌಲಭ್ಯಗಳನ್ನು ಪಡೆಯುವುದನ್ನು ಈ ಯೋಜನೆಯು ಸುಲಭವಾಗಿಸಲಿದೆ. ಮೇಲಾಗಿ, ಭೂಮಾಲೀಕತ್ವ ವ್ಯಾಜ್ಯಗಳಿಂದ ಮುಕ್ತಿ ಕೊಡುತ್ತದೆ. ಆತ್ಮನಿರ್ಭರ ಯೋಜನೆ ಸಾಕಾರದಲ್ಲಿ ಇದೊಂದು ಮಹತ್ವದ ಹೆಜ್ಜೆ’ ಎಂದು ಅವರು ವಿವರಿಸಿದ್ದಾರೆ. 

‘ಸರ್ವೇ ಆಫ್ ವಿಲೇಜಸ್ ಅಂಡ್ ಮ್ಯಾಪಿಂಗ್ ವಿತ್ ಇಂಪ್ರೊವೈಸ್ಡ್ ಟೆಕ್ನಾಲಜಿ ಇನ್ ವಿಲೇಜ್ ಏರಿಯಾ (ಎಸ್‌ವಿಎಎಂಐಟಿವಿಎ)’ ಯೋಜನೆಯ  ಫಲಾನುಭವಿಗಳ ಜತೆ ಪ್ರಧಾನಿ ಸಂವಾದ ನಡೆಸಿದರು.

‘ಭಾರತದಂತಹ ಮುಂದುವರಿಯುತ್ತಿರುವ ದೇಶಕ್ಕೆ ವ್ಯಾಜ್ಯಮುಕ್ತ ಭೂಮಾಲೀಕತ್ವ ದಾಖಲೆಗಳು ಅತಿಮುಖ್ಯ. ಆಸ್ತಿ ಹಕ್ಕು ಯುವಜನತೆಯಲ್ಲಿ ಆತ್ಮವಿಶ್ವಾಸ ತುಂಬಲಿದ್ದು, ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ’ ಎಂದರು. 

‘ಮೂರ್ನಾಲ್ಕು ವರ್ಷಗಳಲ್ಲಿ ಪ್ರತೀ ಕುಟುಂಬಗಳಿಗೂ ಸೊತ್ತಿನ ಕಾರ್ಡ್‌ ವಿತರಿಸುವ ಗುರಿ ಇದೆ. ಪುರಸಭೆ, ನಗರ ಸಭೆಗಳ ರೀತಿಯಲ್ಲಿ ಈ ಯೋಜನೆಯಿಂದ ಪಂಚಾಯಿತಿಗಳಿಗೆ ಗ್ರಾಮಗಳ ನಿರ್ವಹಣೆ ಸುಲಭವಾಗಲಿದೆ’ ಎಂದರು. 

‘ಮಸೂದೆ ವಿರೋಧಿಗಳು ದಲ್ಲಾಳಿಗಳು’

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವವರು ದಲ್ಲಾಳಿಗಳು ಎಂದು ಪ್ರಧಾನಿ ಟೀಕಿಸಿದ್ದಾರೆ. ‘ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಬೆಂಬಲದಿಂದ ರಾಜಕಾರಣ ಮಾಡುತ್ತಿರುವವರು ಮಾತ್ರವೇ ಕೃಷಿ ಮಸೂದೆಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಹರಿಹಾಯ್ದರು.

ಕಳೆದ ಆರು ವರ್ಷಗಳಲ್ಲಿ ತಮ್ಮ ಸರ್ಕಾರ ಗ್ರಾಮಗಳು ಮತ್ತು ಗ್ರಾಮೀಣ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಹಿಂದಿನ ಆರು ದಶಕಗಳಲ್ಲಿ ಇಷ್ಟು ಕೆಲಸ ಆಗಿರಲಿಲ್ಲ ಎಂದರು. ಈ ಮೊದಲು ದೇಶದಲ್ಲಿ ಆಡಳಿತ ನಡೆಸಿದವರು ಗ್ರಾಮೀಣ ಭಾರತವನ್ನು ಮರೆತಿದ್ದರು ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಯೋಜನೆಯ ಸುತ್ತ

*ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯವು ಏಪ್ರಿಲ್ 14ರ ‘ಪಂಚಾಯತ್ ರಾಜ್ ದಿನ’ದಂದು ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿತ್ತು

*ಭೂ ದಾಖಲೆಗಳನ್ನು ರಚಿಸಲು ಡ್ರೋನ್‌ಗಳನ್ನು ಬಳಸಿಕೊಂಡು ಗ್ರಾಮೀಣ ಜನವಸತಿ ಭೂಮಿಯನ್ನು ಮ್ಯಾಪಿಂಗ್ ಮಾಡಲಾಗುತ್ತದೆ

*ನಾಲ್ಕು ವರ್ಷಗಳ (2020–2024) ಅವಧಿಯಲ್ಲಿ ಹಂತ ಹಂತವಾಗಿ 6.62 ಲಕ್ಷ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನವಾಗಲಿದೆ

*ಪ್ರಾಥಮಿಕ ಹಂತದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 1 ಲಕ್ಷ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ

ರಾಮನಗರದ ನಾಲ್ಕು ಗ್ರಾಮ

ಕರ್ನಾಟಕದ ನಾಲ್ಕು ಗ್ರಾಮಗಳು ಸೇರಿದಂತೆ ಆರು ರಾಜ್ಯಗಳ 763 ಗ್ರಾಮಗಳ ಫಲಾನುಭವಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ರಾಮನಗರ ತಾಲ್ಲೂಕಿನ ಎಂ.ಜಿ. ಪಾಳ್ಯ, ಮಜರೆ ಸೀಬಕಟ್ಟೆ, ಮಾಗಡಿ ತಾಲ್ಲೂಕಿನ ಬಸವಾಪಟ್ಟಣ ಮತ್ತು ಮಜರೆ ಶಂಭಯ್ಯನ ಪಾಳ್ಯ ಗ್ರಾಮಗಳು ಈ ಯೋಜನೆಗೆ ಆಯ್ಕೆಯಾಗಿವೆ. ಉತ್ತರ ಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44 ಹಾಗೂ ಉತ್ತರಾಖಂಡ್‌ನ 50 ಗ್ರಾಮಗಳು ಯೋಜನೆಗೆ ಒಳಪಟ್ಟಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು