ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ‘ಕ್ರಿಮಿಕೀಟ‘ ಪಟ್ಟಿಗೆ ನೀಲ ಕೋಳಿಯನ್ನು ಸೇರಿಸಿ, ಭತ್ತ ಕೃಷಿಕರ ಮೊರೆ

Last Updated 8 ಅಕ್ಟೋಬರ್ 2021, 9:10 IST
ಅಕ್ಷರ ಗಾತ್ರ

ಕೊಚ್ಚಿ: ಬೆಳೆ ಹಾನಿ ಮಾಡುವ ಇಲಿ, ಬಾವಲಿಗಳು ಮತ್ತು ಕಾಗೆಗಳನ್ನು ‘ಕ್ರಿಮಿ ಕೀಟಗಳು‘ (ವರ್ಮಿನ್‌) ಎಂದು ಘೋಷಿಸಲಾಗಿದ್ದು, ಪೊಕ್ಕಲಿ ಭತ್ತದ ಮೇಲೆ ದಾಳಿ ಮಾಡಿ, ಬೆಳೆ ನಾಶಮಾಡುವ ಬೂದು ತಲೆಯ ನೀರುಕೋಳಿ ಅಥವಾ 'ನೀಲ ಕೋಳಿ‘ಯನ್ನೂ ಆ ಪಟ್ಟಿಗೆ ಸೇರಿಸುವಂತೆ ಕೇರಳದ ಪೊಕ್ಕಲಿ ಭತ್ತದ ಕೃಷಿಕರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ವಿಶೇಷವಾಗಿ ಉಪ್ಪುನೀರು ನಿರೋಧಕ ತಳಿಯಾಗಿರುವ ಈ ಪೊಕ್ಕಲಿ ಭತ್ತದ ಗದ್ದೆಯ ಮೇಲೆ ನೀಲ ಕೋಳಿಗಳು ನಿರಂತರ ದಾಳಿ ಮಾಡಿ ಬೆಳೆ ನಾಶ ಮಾಡುತ್ತವೆ. ಹಾಗಾಗಿ ಅವುಗಳನ್ನು ಬೆಳೆ ನಾಶ ಮಾಡುವ ‘ಕ್ರಿಮಿಕೀಟ‘ಗಳ ಪಟ್ಟಿಗೆ ಸೇರಿಸುವಂತೆ ಈ ತಳಿಯ ಭತ್ತ ಬೆಳೆಯುವ ಎರ್ನಾಕುಲಂನ ರೈತರ ಸಂಘವೊಂದು ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ.

ರೈತರ ಮನವಿಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಇದೊಂದು ವಲಸೆ ಹಕ್ಕಿಯಾಗಿದ್ದು, ಇದೇ ಮೊದಲ ಬಾರಿಗೆ ರೈತರಿಂದ ಇಂಥದ್ದೊಂದು ದೂರು ಕೇಳಿಬಂದಿದೆ. ರೈತರು ಈ ವಿಚಾರವಾಗಿ ನ್ಯಾಯಾಲಯವನ್ನು ಸಂಪರ್ಕಿಸುವ ಮೊದಲು, ರಾಜ್ಯ ಅರಣ್ಯ ಇಲಾಖೆಯನ್ನು ಸಂಪರ್ಕಿಸಬೇಕಿತ್ತು ಎಂದು ಪ್ರತಿಕ್ರಿಯಿಸಿದೆ.

ಇದೇ ವೇಳೆ ನ್ಯಾಯಾಲಯ, ರೈತರು ಎದುರಿಸುತ್ತಿರುವ ಈ ಸಮಸ್ಯೆ ನಿಜವೇ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರವನ್ನು ಕೇಳಿದೆ. ಒಂದು ವೇಳೆ ಇದು ನಿಜವಲ್ಲ ಎಂದಾದರೆ, ಹೀಗೆ ದಿಢೀರನೆ ಅರ್ಜಿ ಸಲ್ಲಿಸಿರುವ ಹಿಂದಿನ ಉದ್ದೇಶ ಏನೆಂದು ಪತ್ತೆ ಮಾಡುವಂತೆಯೂ ಸೂಚಿಸಿದೆ. ವಕೀಲರಾದ ಎಸ್‌. ಕುಮಾರ್, ಮಿಥುನ್ ಸಿ.ಥಾಮಸ್ ಮತ್ತು ಅಕ್ಷಯ್ ಜೋಸೆಫ್‌ ಅವರು ರೈತರ ಪರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ವರ್ಷದ ಜುಲೈನಲ್ಲಿ ಹೈಕೋರ್ಟ್ ರಾಜ್ಯದ ಕೆಲವು ಭಾಗಗಳಲ್ಲಿ ಜಮೀನುಗಳ ಮೇಲೆ ದಾಳಿ ಮಾಡುವ ಕಾಡುಹಂದಿ ಗಳನ್ನು ಬೇಟೆಯಾಡಲು ಅನುಮತಿ ನೀಡಿತ್ತು. ಆ ನಿರ್ದಿಷ್ಟ ಪ್ರದೇಶದಲ್ಲಿರುವ ಪ್ರಾಣಿಗಳನ್ನು ಕ್ರಿಮಿಕೀಟಗಳೆಂದು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿತ್ತು. ಈಗ ನೀಲ ಕೋಳಿಯ ಹಾವಳಿ ಎದುರಿಸುತ್ತಿರುವ ಎರ್ನಾಕುಲಂನ ಪೊಕ್ಕಲಿ ಭತ್ತದ ಕೃಷಿಕರು ಇಂಥದ್ದೇ ಪರಿಹಾರವನ್ನು ಹುಡುಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಜೊತೆಗೆ, ಜೌಗು ಪ್ರದೇಶಗಳಲ್ಲಿರುವ ನೀಲ ಕೋಳಿಗಳನ್ನು ಕೊಲ್ಲುವ ಅಥವಾ ಅವುಗಳನ್ನು ಹಿಡಿಯು ವವರ ವಿರುದ್ಧ ವನ್ಯಜೀವಿ ಕಾಯ್ದೆಯಡಿಯಲ್ಲಿ ಯಾವುದೇ ಕ್ರಮಕೈಗೊಳ್ಳಂತೆ ರಕ್ಷಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಅಂದ ಹಾಗೆ, ಬೂದು ತಲೆಯ ನೀರು ಕೋಳಿ ಅಥವಾ ನೀಲ ಕೋಳಿಗಳು ಸಾಮಾನ್ಯವಾಗಿ ಜೌಗು ಪ್ರದೇಶಗಳು ಅಥವಾ ಬೇಸಾಯ ಮಾಡದ ಭತ್ತದ ಗದ್ದೆಗಳಲ್ಲಿ ಕಂಡುಬರುತ್ತವೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಜಾತಿಯ ಪಕ್ಷಿ ಎಂದು ಘೋಷಿಸಲಾಗಿದೆ. ಅರಣ್ಯ ಇಲಾಖೆಯವರು ಮಾತ್ರ ಇದನ್ನು ‘ಕ್ರಿಮಿಕೀಟ‘ ಎಂದು ಘೋಷಿಸಬಹುದು ಎಂದು ತಜ್ಞರು ಹೇಳುತ್ತಾರೆ.

ರಾಜ್ಯದ ತ್ರಿಶ್ಯೂರ್, ಎರ್ನಾಕುಲಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿನ ಪೊಕ್ಕಲಿ ಭತ್ತವನ್ನು ಮಿಶ್ರ ವಿಧಾನದಲ್ಲಿ ಬೆಳೆಯುತ್ತಾರೆ. ಮೊದಲ ಐದು ತಿಂಗಳು ಗದ್ದೆಗಳಲ್ಲಿ ಭತ್ತ ಬೆಳೆದರೆ, ನಂತರದ ಐದು ತಿಂಗಳಲ್ಲಿ ಅದೇ ಗದ್ದೆಯಲ್ಲಿ ಸೀಗಡಿ ಕೃಷಿ ಅಥವಾ ಮೀನಿನ ಮರಿ ಉತ್ಪಾದನೆ ಮಾಡುತ್ತಾರೆ. ಉಳಿದ ಎರಡು ತಿಂಗಳ ಕಾಲ ಗದ್ದೆ ಖಾಲಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT