ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲೀಗಿ ಜಮಾತ್‌: ಹಲವು ನಗರಗಳಲ್ಲಿ ಇ.ಡಿ ದಾಳಿ

Last Updated 19 ಆಗಸ್ಟ್ 2020, 12:22 IST
ಅಕ್ಷರ ಗಾತ್ರ

ನವದೆಹಲಿ: ತಬ್ಲೀಗಿ ಜಮಾತ್‌ ಮುಖ್ಯಸ್ಥ ಮೌಲಾನಾ ಸಾದ್‌ ಕಂಢಾಲ್ವಿ ಹಾಗೂ ಜಮಾತ್‌ಗೆ ಸಂಬಂಧಿಸಿದ ಟ್ರಸ್ಟ್‌ಗಳ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಮುಂಬೈ, ದೆಹಲಿ, ಹೈದರಾಬಾದ್‌ ಸೇರಿದಂತೆ ಹಲವು ನಗರಗಳಲ್ಲಿ ಪರಿಶೀಲನೆ ನಡೆಸಿದೆ.

ದೆಹಲಿ ಪೊಲೀಸರು ದಾಖಲಿಸಿಕೊಂಡಿರುವ ದೂರನ್ನು ಪರಿಶೀಲಿಸಿ, ಮೌಲಾನಾ ಸಾದ್‌ ಹಾಗೂ ಇತರರ ವಿರುದ್ಧ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿತ್ತು.ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಸಭೆ ಸಮಾರಂಭಗಳ ಆಯೋಜನೆಗೆ ನಿರ್ಬಂಧವಿದ್ದರೂ, ಇದನ್ನು ಉಲ್ಲಂಘಿಸಿ ತಬ್ಲೀಗಿ ಜಮಾತ್‌ ಅನುಯಾಯಿಗಳ ಸಭೆಯನ್ನು ಆಯೋಜಿಸಿದ್ದಕ್ಕಾಗಿ ನಿಜಾಮುದ್ದೀನ್‌ ಪೊಲೀಸ್‌ ಠಾಣೆಯ ಸ್ಟೇಷನ್‌ ಹೌಸ್‌ ಅಧಿಕಾರಿ(ಎಸ್‌ಎಚ್‌ಒ) ದೆಹಲಿ ಪೊಲೀಸ್‌ ಅಪರಾಧ ವಿಭಾಗಕ್ಕೆ ದೂರು ನೀಡಿದ್ದರು. ಇದನ್ನು ಪರಿಗಣಿಸಿ ಮಾರ್ಚ್‌ 31ರಂದು ಏಳು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ನಿಯಮ ಉಲ್ಲಂಘಿಸಿ ಮೌಲಾನಾ ಸಾದ್‌ ಈ ಸಭೆಯನ್ನು ಆಯೋಜಿಸಿದ್ದರು ಎನ್ನುವ ಆರೋಪವಿದ್ದು, ಈ ಪ್ರಕರಣವನ್ನು ನಂತರ ಇ.ಡಿ ಕೈಗೆತ್ತಿಕೊಂಡಿದೆ. ಆರೋಪಿಗಳ ವೈಯಕ್ತಿಕ ಹಣಕಾಸು ಮೂಲ, ಹಣ ಅಕ್ರಮ ವರ್ಗಾವಣೆ ಆರೋಪದ ಕುರಿತು ಇ.ಡಿ ತನಿಖೆ ನಡೆಸುತ್ತಿದೆ. ಜಮಾತ್‌ಗೆ ವಿದೇಶದ ಮತ್ತು ದೇಶದೊಳಗಿರುವ ಮುಸಲ್ಮಾನ ಸಂಘಸಂಸ್ಥೆಗಳು ನೀಡಿರುವ ದೇಣೆಗೆ ಕುರಿತೂ ಪ‍ರಿಶೀಲನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT