ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ್‌ ಹಾಸನ್‌ ತೃತೀಯ ರಂಗದ ಸಿಎಂ ಅಭ್ಯರ್ಥಿ: ಶರತ್‌ ಕುಮಾರ್‌ ಘೋಷಣೆ

Last Updated 4 ಮಾರ್ಚ್ 2021, 8:37 IST
ಅಕ್ಷರ ಗಾತ್ರ

ಚೆನ್ನೈ: ಕಮಲ್‌ ಹಾಸನ್‌ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಎಸ್‌ಎಂಕೆ ಪಕ್ಷದ ಸಂಸ್ಥಾಪಕ, ನಟ ಆರ್‌.ಶರತ್‌ ಕುಮಾರ್ ಬುಧವಾರ ಘೋಷಿಸಿದ್ದಾರೆ.

ತಮಿಳುನಾಡು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 6ರಂದು ಚುನಾವಣೆ ನಿಗದಿಯಾಗಿದ್ದು, ಎಂಎನ್‌ಎಂ ಪಕ್ಷದ ಸಂಸ್ಥಾಪಕ, ನಟ ಕಮಲ್‌ ಹಾಸನ್‌ ಸಮಾನ ಯೋಚನೆಗಳಿರುವ ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.

ಈಗಾಗಲೇ ಎಐಎಸ್‌ಎಂಕೆ ಮತ್ತು ಎಂಎನ್‌ಎಂ ಪಕ್ಷಗಳ ಮೈತ್ರಿ ಖಚಿತಪಟ್ಟಿದ್ದು, 'ತೃತೀಯ ರಂಗಕ್ಕೆ ಕಮಲ್‌ ಹಾಸನ್‌ ನೇತೃತ್ವ ಇರಲಿದೆ. ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ' ಎಂದು ಶರತ್‌ ಕುಮಾರ್‌ ಹೇಳಿದ್ದಾರೆ. ಅವರ ಪತ್ನಿ, ಎಐಎಸ್‌ಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ರಾಧಿಕಾ ಶರತ್‌ಕುಮಾರ್‌ ಕೋವಿಲ್‌ಪತ್ತಿ ಅಥವಾ ವೆಲಚೇರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.

ಎಐಎಡಿಎಂಕೆ ಜೊತೆಗೆ ಕಳೆದ 10 ವರ್ಷಗಳಿಂದ ಎಐಎಸ್‌ಎಂಕೆ ಪಕ್ಷವು ಮೈತ್ರಿ ಮಾಡಿಕೊಂಡಿತ್ತು.

'ಉತ್ತಮ ಜನರೊಂದಿಗೆ' ಮೈತ್ರಿ ಮಾಡಿಕೊಳ್ಳುವ ಹಂಬಲ ವ್ಯಕ್ತಪಡಿಸಿರುವ ಕಮಲ್‌ ಹಾಸನ್‌, 'ಹಲವು ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿದೆ, ಸೀಟು ಹಂಚಿಕೆ ನಿರ್ಧಾರಗಳಿಗೂ ಮುನ್ನ ಮೈತ್ರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ' ಎಂದಿದ್ದಾರೆ.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ವೈಜ್ಞಾನಿಕ ಸಲಹೆಗಾರರಾಗಿದ್ದ ವಿ.ಪೊನರಾಜ್‌ ಅವರು ಎಂಎನ್‌ಎಂ ಪಕ್ಷದ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಲಿದ್ದಾರೆ ಎಂದು ಕಮಲ್‌ ಪ್ರಕಟಿಸಿದ್ದಾರೆ.

ಗೃಹಿಣಿಯರನ್ನು ಗುರುತಿಸುವ ಕಾರ್ಯವನ್ನು ಪಕ್ಷ ಮಾಡಲಿದೆ. ಮಹಿಳೆಯರಿಗೆ ಶೇ 50 ಮೀಸಲಾತಿ, ಪ್ರತಿ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಉಳಿದುಕೊಳ್ಳಲು ಅನುಕೂಲವಾಗಲು ಹಾಸ್ಟೆಲ್‌ಗಳು ಸಿಗುವಂತೆ ಮಾಡಲಾಗುತ್ತದೆ. ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಬ್ಯಾಂಕ್‌ ಸ್ಥಾಪಿಸಲಾಗುತ್ತದೆ ಎಂದಿದ್ದಾರೆ. 50 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ಪಕ್ಷದ ಕಾರ್ಯಸೂಚಿಯಲ್ಲಿ ನೀಡಲಾಗಿದೆ.

'ತಮಿಳರು ಮಾರಾಟಕಿಲ್ಲ, ಅವರ ಮತಗಳು ಸಹ ಮಾರಾಟಕ್ಕಿಲ್ಲ' ಎಂದಿರುವ ಕಮಲ್‌ ಹಾಸನ್‌ ಭ್ರಷ್ಟಾಚಾರ ಮುಕ್ತ ಸರ್ಕಾರ ಸ್ಥಾಪನೆಗಾಗಿ ಬೆಂಬಲಿಸಿ ಎಂದು ಜನರನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT