ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಕರ್‌ ಪ್ರಶಸ್ತಿ: ಸಂಭವನೀಯ ಪಟ್ಟಿಯಲ್ಲಿ ‘ಪೈರ್‌’ ‌

ಪೆರುಮಾಳ್‌ ಮುರುಗನ್‌ ಅವರ ತಮಿಳು ಕಾದಂಬರಿ
Last Updated 14 ಮಾರ್ಚ್ 2023, 16:02 IST
ಅಕ್ಷರ ಗಾತ್ರ

ಲಂಡನ್‌/ದೆಹಲಿ: ತಮಿಳು ಲೇಖಕ ಪೆರುಮಾಳ್‌ ಮುರುಗನ್‌ ಅವರ ‘ಪೈರ್’ ಕಾದಂಬರಿಯು 2023ರ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿಯ ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 13 ಪುಸ್ತಕಗಳ ಹೆಸರನ್ನು ಬೂಕರ್‌ ಪ್ರೈಸ್‌ ಫೌಂಡೇಷನ್‌ ಮಂಗಳವಾರ ಘೋಷಿಸಿತು. ಏಷ್ಯಾ, ಆಫ್ರಿಕ, ಯುರೋಪ್‌ ಮತ್ತು ಲ್ಯಾಟಿನ್‌ ಅಮೆರಿಕದ ಪುಸ್ತಕಗಳು ಈ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೊದಲ ತಮಿಳು ಪುಸ್ತಕ ಎಂಬ ಹೆಗ್ಗಳಿಕೆಗೂ ಪೈರ್‌ ಪಾತ್ರವಾಗಿದೆ.

ಅಂತರ್ಜಾತಿ ಜೋಡಿಯೊಂದು ಮನೆಯಿಂದ ಓಡಿಹೋಗಿ ಅನುಭವಿಸಿದ ಕಷ್ಟಗಳ ಕುರಿತ ಕಥಾಹಂದರ ಈ ಕಾದಂಬರಿಯಲ್ಲಿದೆ.

ಸಂಭವನೀಯ ಪಟ್ಟಿಯಲ್ಲಿ ತಮ್ಮ ಪುಸ್ತಕ ಸ್ಥಾನ ಪಡೆದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಪೆರುಮಾಳ್‌, ‘ನನಗೆ ತುಂಬಾ ಸಂತೋಷವಾಗಿದೆ. ನನ್ನ ಪುಸ್ತಕಕ್ಕೆ ದೊರೆತಿರುವ ಅತ್ಯಂತ ಮಹತ್ವದ ಸ್ವೀಕಾರ ಇದಾಗಿದೆ. ಮರ್ಯಾದೆಗೇಡು ಹತ್ಯೆ ಕುರಿತು ಪೈರ್‌ ಮಾತನಾಡುತ್ತದೆ. ಮರ್ಯಾದೆಗೇಡು ಹತ್ಯೆ ನಮ್ಮ ದೇಶದಲ್ಲಿಯ ದೊಡ್ಡ ಪಿಡುಗು. ಪುಸ್ತಕಕ್ಕೆ ಸಿಕ್ಕಿರುವ ಮಾನ್ಯತೆಯಿಂದಾಗಿ ಇನ್ನೂ ಹಲವರಿಗೆ ಈ ಪಿಡುಗಿನ ಪರಿಚಯವಾಗುತ್ತದೆ ಎಂದು ಭಾವಿಸಿದ್ದೇನೆ’ ಎಂದರು.

13 ಪುಸ್ತಕಗಳ ಸಂಭವನೀಯ ಪಟ್ಟಿಯಿಂದ 6 ಪುಸ್ತಕಗಳನ್ನು ಏಪ್ರಿಲ್‌ 18ರಂದು ನಡೆಯಲಿರುವ ಲಂಡನ್‌ ಬುಕ್‌ ಫೇರ್‌ಗಾಗಿ ಆಯ್ಕೆ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಸ್ಥಾನ ಗಳಿಸುವ ಪುಸ್ತಕಗಳಿಗೆ ತಲಾ ₹5.01 ಲಕ್ಷ (5,000 ಪೌಂಡ್‌) ಬಹುಮಾನ ನೀಡಲಾಗುವುದು. ಇದನ್ನು ಕೃತಿಯ ಲೇಖಕ ಮತ್ತು ಅನುವಾದಕನಿಗೆ ಸಮನಾಗಿ ಹಂಚಲಾಗುತ್ತದೆ.

ಲಂಡನ್‌ ಸ್ಕೈ ಗಾರ್ಡನ್‌ನಲ್ಲಿ ಮೇ 23ರಂದು ನಡೆಯಲಿರುವ ಸಮಾರಂಭದಲ್ಲಿ ಈ ಸಾಲಿನ ಬೂಕರ್‌ ಪ್ರಶಸ್ತಿ ಪುರಸ್ಕೃತ ಪುಸ್ತಕದ ಹೆಸರು ಘೋಷಿಸಲಾಗುವುದು. ಇದು ₹50.23 ಲಕ್ಷ ಬಹುಮಾನ ಮೊತ್ತ ಹೊಂದಿದೆ. ಇದನ್ನು ಕೂಡಾ ಕೃತಿಯ ಲೇಖಕ ಮತ್ತು ಅನುವಾದಕನಿಗೆ ಸಮಾನವಾಗಿ ಹಂಚಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT