ಸೋಮವಾರ, ಏಪ್ರಿಲ್ 19, 2021
25 °C

ತಮಿಳುನಾಡು ವಿಧಾನಸಭೆ ಚುನಾವಣೆ: ಅರಾವಕುರಿಚಿಯಿಂದ ಅಣ್ಣಾಮಲೈ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಭಾನುವಾರ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್, ಎಚ್ ರಾಜಾ ಮತ್ತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಈ ಪಟ್ಟಿಯಲ್ಲಿದ್ದಾರೆ.

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ತಮಿಳುನಾಡಿನ ಬಿಜೆಪಿಗೆ ಸೇರ್ಪಡೆಯಾದ ಏಳು ತಿಂಗಳ ಬಳಿಕ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅರಾವಕುರಿಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಮಹಿಳಾ ವಿಭಾಗದ ಮುಖ್ಯಸ್ಥೆ ವನತಿ ಶ್ರೀನಿವಾಸನ್ ಅವರು ಕೊಯಮತ್ತೂರು (ದಕ್ಷಿಣ) ಕ್ಷೇತ್ರದಲ್ಲಿ ನಟ ಮತ್ತು ಮಕ್ಕಳ್ ನೀಧಿ ಮಯಂ (ಎಂಐಎಂ) ಮುಖ್ಯಸ್ಥ ಕಮಲ್ ಹಾಸನ್ ಅವರಿಗೆ ಮುಖಾಮುಖಿಯಾಗಲಿದ್ದು, ನಟಿ ಖುಷ್ಬೂ ಸುಂದರ್ ಅವರು ಚೆನ್ನೈನ ತೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಡಿಎಂಕೆಯ ಡಾ.ಎನ್. ಎನಿಳನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ತಿರುಪಾರಂಕುಂಡ್ರಮ್ ಕ್ಷೇತ್ರದ ಶಾಸಕ ಡಾ.ಪಿ.ಸರವನನ್ ಅವರು ಡಿಎಂಕೆ ತೊರೆದು ಪಕ್ಷಕ್ಕೆ ಸೇರಿದ ಕೇವಲ ಮೂರು ಗಂಟೆಗಳ ನಂತರ ಮಧುರೈ (ಉತ್ತರ)ನಿಂದ ಟಿಕೆಟ್ ಕೊಟ್ಟಿರುವುದು ಅಸಮಾಧಾನಕ್ಕೆ ಎಡೆಮಾಡಿದೆ. 2020 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿ ಸೇರಿದ ಖುಷ್ಬೂ ಸುಂದರ್ ಸಹ ಹೊಸಬರು.

ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕಿ ವನತಿ ಶ್ರೀನಿವಾಸನ್ ಅವರು ಕಮಲ್ ಹಾಸನ್ ಮತ್ತು ಕಾಂಗ್ರೆಸ್‌ನ ಮಯೂರ ಎಸ್ ಜಯಕುಮಾರ್ ಅರಿಮದ ತೀವ್ರ ಪೈಪೋಟಿ ಎದುರಿಸಲಿದ್ದಾರೆ.

ಬಿಜೆಪಿ ಸೇರಿದ್ದ ಅಣ್ಣಾಮಲೈ...

ಏಳು ತಿಂಗಳ ಹಿಂದೆ ಬಿಜೆಪಿ ಸೇರಿದ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಅವರಿಗೆ ಅರವಕುರಿಚಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

2019ರಲ್ಲಿ ಐಪಿಎಸ್‌ಗೆ ರಾಜೀನಾಮೆ ನೀಡಿದ್ದ ಅಣ್ಣಾಮಲೈ ಅವರು 2020ರ ಆಗಸ್ಟ್‌ನಲ್ಲಿ ಬಿಜೆಪಿ ಸೇರಿದ್ದರು. ಅವರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಲ್ಲಿ ಒಬ್ಬರಾಗಿ ನೇಮಿಸಲಾಗಿತ್ತು. ಪೊಲೀಸ್‌ ಅಧಿಕಾರಿಯಾಗಿದ್ದ ಅವಧಿಯಲ್ಲಿ ಅವರ ಕೆಲಸದ ಶೈಲಿಯಿಂದಾಗಿ ‘ಸಿಂಘಂ’ ಎಂದು ಕರೆಸಿಕೊಳ್ಳುತ್ತಿದ್ದರು. ಅವರ ಹುಟ್ಟೂರು ಅರವಕುರಿಚಿ ಕ್ಷೇತ್ರದಲ್ಲಿಯೇ ಇದೆ.  

‘ಅರವಕುರಿಚಿಯು ಬಿಜೆಪಿ ಬಲವಾಗಿರುವ ಕ್ಷೇತ್ರ ಅಲ್ಲ. ಆದರೆ, ಇಲ್ಲಿನ ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಲಿದ್ದಾರೆ ಎಂಬ ಬಲವಾದ ನಂಬಿಕೆ ನನ್ನಲ್ಲಿದೆ. ನನ್ನ ಪ್ರತಿಷ್ಠಾನವು ಇಲ್ಲಿ ಸಕ್ರಿಯವಾಗಿದೆ. ಈಗ ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಲ್ಲಿರುವ ಈ ಊರನ್ನು ಅದರ ಹಿಂದಿನ ವೈಭವಕ್ಕೆ ಮರಳಿಸುವುದು ನನ್ನ ಗುರಿ’ ಎಂದು ಅಣ್ಣಾಮಲೈ ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಭಾರಿ ಪ್ರಮಾಣದ ಹಣ ಹಂಚಿಕೆಯಾಗಿದೆ ಎಂಬ ಕಾರಣಕ್ಕೆ 2016ರಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. 2019ರಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಅದರಲ್ಲಿ ಡಿಎಂಕೆಯ ವಿ.ಸೆಂಥಿಲ್‌ ಬಾಲಾಜಿ ಅವರು ಗೆದ್ದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು