ಬುಧವಾರ, ಜೂನ್ 29, 2022
24 °C

ತಂಜಾವೂರು: ರಥಕ್ಕೆ ವಿದ್ಯುತ್‌ ಸ್ಪರ್ಶ– 11 ಭಕ್ತರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಂಜಾವೂರು (ಪಿಟಿಐ): ತಂಜಾವೂರು ಜಿಲ್ಲೆಯ ಕಳಿಮೆಡುವಿನ ಅಪ್ಪಾರ್ ದೇವಸ್ಥಾನದ ರಥಕ್ಕೆ ಬುಧವಾರ ಬೆಳಿಗ್ಗೆ ಮೆರವಣಿಗೆ ಸಂದರ್ಭದಲ್ಲಿ ಹೈ ಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಮೂವರು ಹದಿಹರೆಯದ ಬಾಲಕರು ಸೇರಿದಂತೆ ಒಟ್ಟು 11 ಮಂದಿ ಭಕ್ತರು  ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮಹಿಳೆ ಸೇರಿ 17 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಪ್ಪಾರ್‌ ದೇವಸ್ಥಾನದ ರಥವು ಬುಧವಾರ ಮುಂಜಾನೆ ತಂಜಾವೂರು– ಬೂದಲೂರು ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ರಥ ತಿರುವು ಪಡೆಯುವಾಗ ಕೆಲ ಅಡಚಣೆ ಎದುರಿಸಿತು. ಆಗ ಭಕ್ತರು ರಥವನ್ನು ತಿರುಗಿಸಲು ಪ್ರಯತ್ನಿಸಿದಾಗ ಅದರ ಮೇಲ್ಭಾಗ ವಿದ್ಯುತ್‌ ತಂತಿಯ ಸಂಪರ್ಕಕ್ಕೆ ಬಂದಿತು. ರಥದ ಬಳಿ ಇದ್ದ ಭಕ್ತರು ವಿದ್ಯುತ್‌ ಆಘಾತದಿಂದ ಪಕ್ಕಕ್ಕೆ ಎಸೆಯಲ್ಪಟ್ಟರೆ, ರಥ ಸಂಪೂರ್ಣ ಉರಿದು ಭಸ್ಮವಾಯಿತು ಎಂದು ಪೊಲೀಸ್ ಮತ್ತು ಜಿಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ₹2 ಲಕ್ಷ ಹಾಗೂ ಗಾಯ ಗೊಂಡವರಿಗೆ ತಲಾ ₹50 ಸಾವಿರ ಪರಿಹಾರವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ಘೋಷಿಸಿ ದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಮೃತರ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ.  

ತನಿಖೆ: ‘ಘಟನೆ ಕುರಿತು ತನಿಖೆ ನಡೆ ಸಲು ಹಾಗೂ ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದ ರೀತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲು ಮುಖ್ಯಮಂತ್ರಿ ಸ್ಟಾಲಿನ್‌ ಅವರು ಏಕ ಸದಸ್ಯ ಆಯೋಗ ರಚಿಸುವುದಾಗಿ ಘೋಷಿಸಿದ್ದಾರೆ’ ಎಂದು ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು