ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣ: ಪಾಕಿಸ್ತಾನ ಸರ್ಕಾರ

ಲಾಹೋರ್: ‘ಕಳೆದ ವಾರ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಹಾನಿಗೊಳಗಾದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪೂರ್ಣಗೊಂಡಿದೆ’ ಎಂದು ಪಾಕಿಸ್ತಾನ ಸರ್ಕಾರ ಸೋಮವಾರ ತಿಳಿಸಿದೆ.
ಎಂಟು ವರ್ಷದ ಹಿಂದೂ ಹುಡುಗ ಮುಸ್ಲಿಂ ಸಮುದಾಯಕ್ಕೆ ಸೇರಿದ ಧಾರ್ಮಿಕ ಶಾಲೆಯೊಂದನ್ನು ಅಪವಿತ್ರಗೊಳಿಸಿದ್ದಾನೆ ಎಂಬ ಕಾರಣಕ್ಕೆ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ಪಟ್ಟಣದಲ್ಲಿರುವ ಹಿಂದೂ ದೇವಾಲಯದ ಮೇಲೆ ನೂರಾರು ಜನರು ಬುಧವಾರ ದಾಳಿ ನಡೆಸಿದ್ದರು.
‘ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲವರು ಶಸ್ತ್ರಾಸ್ತ್ರ, ಬಿದಿರು, ಕೋಲುಗಳೊಂದಿಗೆ ದೇವಸ್ಥಾನ ಮೇಲೆ ದಾಳಿ ನಡೆಸಿ, ಪ್ರತಿಮೆಗಳನ್ನು ವಿರೂಪಗಳಿಸಿದ್ದರು. ಅಲ್ಲದೆ ದೇವಸ್ಥಾನದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಿದ್ದರು’ ಎನ್ನಲಾಗಿತ್ತು.
ಇದನ್ನೂ ಓದಿ: ಪಾಕ್ನಲ್ಲಿ ಹಿಂದೂ ದೇಗುಲ ಮೇಲೆ ದಾಳಿ: 50 ಜನರ ಬಂಧನ
‘ಸರ್ಕಾರವು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿ, ಅದನ್ನು ಸ್ಥಳೀಯ ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿದೆ’ ಎಂದು ರಹೀಮ್ ಯಾರ್ ಖಾನ್‌ನ ಜಿಲ್ಲಾ ಪೊಲೀಸ್ ಅಧಿಕಾರಿ ಆಸಾದ್ ಸರ್ಫಾಜ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ 90 ಮಂದಿಯನ್ನು ಬಂಧಿಸಲಾಗಿದೆ. ಇದಕ್ಕಾಗಿ ವಿಡಿಯೊ ದೃಶ್ಯಾವಳಿಯ ಸಹಾಯ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ಸರ್ಕಾರವು ದೇವಸ್ಥಾನದ ಪ್ರತಿಮೆ ನಿರ್ಮಾಣಕ್ಕಾಗಿ ಹೈದರಬಾದ್‌ನಿಂದ ಕಾರ್ಮಿಕರನ್ನು ಕರೆಸಿಕೊಂಡಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಇದನ್ನೂ ಓದಿ: ಹಿಂದೂ ದೇಗುಲ ಧ್ವಂಸ: ಪೊಲೀಸ್ ಇಲಾಖೆಗೆ ಪಾಕ್ ಮುಖ್ಯ ನ್ಯಾಯಮೂರ್ತಿ ಛೀಮಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.