ಶುಕ್ರವಾರ, ಅಕ್ಟೋಬರ್ 22, 2021
20 °C

ಬ್ರಿಟಿಷರಿಗೆ 10 ದಿನ ಪ್ರತ್ಯೇಕವಾಸ: ಬ್ರಿಟನ್‌ ಪ್ರಯಾಣ ನಿಯಮಕ್ಕೆ ಭಾರತ ತಿರುಗೇಟು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತಕ್ಕೆ ಬರುವ ಬ್ರಿಟನ್‌ ಪ್ರಜೆಗಳು ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದರೂ ಇಲ್ಲದಿದ್ದರೂ 10 ದಿನಗಳ ಕಡ್ಡಾಯ ಪ್ರತ್ಯೇಕವಾಸಕ್ಕೆ ಒಳಗಾಗಬೇಕು ಎಂಬ ನಿಯಮವು ಸೋಮವಾರದಿಂದ ಜಾರಿಗೆ ಬರಲಿದೆ. ಬ್ರಿಟನ್‌ ಇತ್ತೀಚೆಗೆ ರೂಪಿಸಿದ ಅಂತರ ರಾಷ್ಟ್ರೀಯ ಪ್ರಯಾಣ ನಿಯಮಗಳ ಪ್ರಕಾರ, ಭಾರತೀಯರು ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡಿದ್ದರೂ 10 ದಿನ ಪ್ರತ್ಯೇಕವಾಸಕ್ಕೆ ಒಳಗಾಗುವುದು ಕಡ್ಡಾಯ. ಈ ನಿಯಮಕ್ಕೆ ಪ್ರತಿಯಾಗಿ ಭಾರತವು ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. 

ಭಾರತದ ಲಸಿಕೆ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಬ್ರಿಟನ್‌ ಜಾರಿಗೆ ತಂದ ಅದೇ ರೀತಿಯ ನಿಯಮವನ್ನು ಭಾರತವೂ ಜಾರಿಗೆ ತರಲು ತೀರ್ಮಾನಿಸಿದೆ. ಈ ಬಗ್ಗೆ, ಬ್ರಿಟನ್‌ನಿಂದ ಪ್ರತಿಕ್ರಿಯೆಯೇನೂ ಬಂದಿಲ್ಲ. 

ಬ್ರಿಟನ್‌ನ ಪ್ರಯಾಣ ನಿಯಮಗಳು ಬಹಿರಂಗವಾದಾಗಲೇ ಸೆ.19ರಂದು ಭಾರತವು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿತ್ತು. ಭಾರತೀಯರನ್ನು ತಾರತಮ್ಯದಿಂದ ನೋಡುವ ನಿಯಮಕ್ಕೆ ತಿದ್ದುಪಡಿ ಮಾಡದೇ ಇದ್ದರೆ, ತಿರುಗೇಟಿನ ಕ್ರಮ ಅನಿವಾರ್ಯ ಎಂಬ ಎಚ್ಚರಿಕೆ ಕೊಟ್ಟಿತ್ತು.

ಹೊಸ ನಿಯಮ ಪ್ರಕಾರ, ಭಾರತಕ್ಕೆ ಬರುವ ಬ್ರಿಟನ್‌ ಪ್ರಯಾಣಿಕರು ಕಡ್ಡಾಯ ಪ್ರತ್ಯೇಕವಾಸಕ್ಕೆ ಒಳಗಾಗಬೇಕು. ಅದಲ್ಲದೆ, ಪ್ರಯಾಣ ಆರಂಭಕ್ಕೆ 72 ತಾಸು ಒಳಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗಿ ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿರಬೇಕು. ಭಾರತಕ್ಕೆ ಬಂದ ಬಳಿಕ ವಿಮಾನ ನಿಲ್ದಾಣದಲ್ಲಿ ಒಮ್ಮೆ ಮತ್ತು ಬಂದ ಎಂಟನೇ ದಿನ ಒಮ್ಮೆ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಮೂಲಗಳು ಹೇಳಿವೆ.  

ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ತಯಾರಾಗುವ ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ನೀಡುವುದಕ್ಕೇ ಬ್ರಿಟನ್‌ ಹಿಂದೇಟು ಹಾಕಿತ್ತು. ಭಾರತದ ಬಲವಾದ ಟೀಕೆಯ ಬಳಿಕ ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಿ ಸೆ.22ರಂದು ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ನೀಡಿತ್ತು. ಆದರೆ, ಇದರಿಂದ ಭಾರತೀಯ ಪ್ರಯಾಣಿಕರಿಗೆ ಅನುಕೂಲ ಆಗಲಿಲ್ಲ. ಭಾರತದ ಲಸಿಕೆ ಪ್ರಮಾಣಪತ್ರ ಪ್ರಕ್ರಿಯೆಯಲ್ಲಿ ಸಮಸ್ಯೆ ಇದೆ ಎಂದು ಬ್ರಿಟನ್‌ ಹೇಳಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು