ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ತಂಟೆಗೆ ತಿರುಗೇಟು

ಎಲ್‌ಎಸಿಯಲ್ಲಿ ಯಥಾಸ್ಥಿತಿ ಮಾರ್ಪಾಡು ಯತ್ನ ಹಿಮ್ಮೆಟ್ಟಿಸಿದ ಭಾರತ
Last Updated 31 ಆಗಸ್ಟ್ 2020, 18:15 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರ ಬಳಿಚೀನಾ ಸೇನೆ ಮತ್ತೊಮ್ಮೆ ಯಥಾಸ್ಥಿತಿ ಉಲ್ಲಂಘಿಸುವ ಪ್ರಯತ್ನ ಮಾಡಿದೆ. ಆದರೆ, ಚೀನಾದ ಕಡೆಯಿಂದ ಇಂತಹುದೊಂದು ದುಸ್ಸಾಹಸವನ್ನು ಅಂದಾಜಿಸಿದ್ದ ಭಾರತದ ಯೋಧರು, ಈ ಯತ್ನವನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಭಾರತದ ಸೇನೆಯ ವಕ್ತಾರ ಕರ್ನಲ್‌ ಅಮನ್‌ ಆನಂದ್‌ ತಿಳಿಸಿದ್ದಾರೆ. ಚೀನಾದ ವಿಫಲ ಯತ್ನದಿಂದಾಗಿ ಕೆಲ ತಿಂಗಳ ಬಳಿಕ ಭಾರತ–ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ನಾಲ್ಕು ತಿಂಗಳಿಂದಪಾಂಗಾಂಗ್‌ ಸರೋವರದ ಉತ್ತರದ ದಡದಲ್ಲಿ ಬೀಡುಬಿಟ್ಟಿದ್ದ ಚೀನಾ ಸೇನೆ ಮೊದಲ ಬಾರಿಗೆ ದಕ್ಷಿಣ ದಡದತ್ತ ಬಂದಿದ್ದು, ಸಮೀಪದ ಪರ್ವತವೊಂದನ್ನು ವಶಪಡಿಸಿಕೊಳ್ಳುವ ವಿಫಲ ಯತ್ನ ನಡೆಸಿದೆ ಎಂದು ಅಮನ್‌ ಆನಂದ್‌ ಹೇಳಿದ್ದಾರೆ.

ಗಡಿ ಪ್ರದೇಶದ ಪರ್ವತ ಶ್ರೇಣಿಯಲ್ಲಿ ಚೀನಾ ಯೋಧರ ಚಲನವಲನಗಳು ಗಮನಕ್ಕೆ ಬಂದ ತಕ್ಷಣ ಭಾರತೀಯ ಯೋಧರು ಕೂಡ ಆ ಪ್ರದೇಶದಲ್ಲಿ ಜಮಾವಣೆಗೊಂಡಿದ್ದಾರೆ. ಲೆಹ್‌ ಪರ್ವತ ಶ್ರೇಣಿಗಳ ಮೇಲೆ ಭಾರತದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿವೆ.

ಚೀನಾ ಯೋಧರ ಅತಿಕ್ರಮಣ ತಡೆಯಲು ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಎರಡೂ ಕಡೆಯ ಯೋಧರು ಸ್ಥಳದಲ್ಲಿ ಬೀಡುಬಿಟ್ಟಿದ್ದು,ಸದ್ಯಕ್ಕೆ ಪರಿಸ್ಥಿತಿ ಸಂಘರ್ಷದ ಮಟ್ಟವನ್ನು ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಚುಶುಲ್‌ ಎಂಬಲ್ಲಿ ಎರಡೂ ಕಡೆಯ ಬ್ರಿಗೇಡ್‌ ಕಮಾಂಡರ್‌ ಹಂತದ ಸಭೆ‌ ಪ್ರಗತಿಯಲ್ಲಿದೆ.

ಭಾರತದ ಸಾರ್ವಭೌಮತೆ ಮತ್ತು ಗಡಿ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಶಾಂತಿಯುತ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಭಾರತೀಯ ಸೇನೆ ಪ್ರತಿಪಾದಿಸಿದೆ.

ಭಾರತ–ಚೀನಾ ವಾಕ್ಸಮರ: ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿ ಉಲ್ಲಂಘನೆ ಆರೋಪವನ್ನು ಚೀನಾ‌ ತಳ್ಳಿ ಹಾಕಿದೆ. ಗಡಿಯಲ್ಲಿ ಯಥಾಸ್ಥಿತಿಯನ್ನೂ ಚೀನಾ ಎಂದಿಗೂ ಉಲ್ಲಂಘಿಸಿಲ್ಲ. ಎಲ್‌ಎಸಿಗೆ ತಾನು ಬದ್ಧ
ವಾಗಿರುವುದಾಗಿ ಚೀನಾದ ಸೇನೆಯು ಸ್ಪಷ್ಟಪಡಿಸಿದೆ.‌

‘ಚೀನಾ ಸೇನೆ ವಾಸ್ತವ ನಿಯಂತ್ರಣ ರೇಖೆಗೆ ಸಂಪೂರ್ಣ ಬದ್ಧವಾಗಿದ್ದು, ಎಂದಿಗೂ ಗಡಿಯನ್ನು ದಾಟಿಲ್ಲ. ಈ ಬಗ್ಗೆ ಎರಡೂ ಕಡೆಯ ಸೇನಾಧಿಕಾರಿಗಳು ನಿಕಟ ಸಂಪರ್ಕದಲ್ಲಿದ್ದಾರೆ’ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಜಾಹೊ ಲಿಜಿಯಾನ್‌ ಪ್ರತಿಕ್ರಿಯಿಸಿದ್ದಾರೆ.

ಪುನರಾವರ್ತನೆ: ಗಾಲ್ವನ್‌ ಕಣಿವೆಯಲ್ಲಿ ಜೂನ್‌ 15ರಂದು ಭಾರತ–ಚೀನಾ ಯೋಧರ ನಡುವಿನ ಸಂಘರ್ಷದ ನಂತರ ನಡೆದ ಮೊದಲ ಪ್ರಮುಖ ಘಟನೆ ಇದಾಗಿದೆ. ಆ ಘಟನೆಯಲ್ಲಿ ಎರಡು ಕಡೆ ಅಪಾರ ಸಾವು, ನೋವುಗಳಾಗಿದ್ದವು.

ಈ ಬೆಳವಣಿಗೆಯ ನಂತರ ಕಳೆದ ಎರಡೂವರೆ ತಿಂಗಳಲ್ಲಿಉಭಯ ರಾಷ್ಟ್ರಗಳು ಗಡಿಯಲ್ಲಿ ಶಾಂತಿ ಸ್ಥಾಪನೆ ಸಂಬಂಧ ಐದು ಸುತ್ತಿನ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆ ನಡೆಸಿವೆ. ಆದರೆ, ಸಮಸ್ಯೆಗೆ ಪರಿಹಾರ ಕಂಡು
ಕೊಳ್ಳುವ ದಿಸೆಯಲ್ಲಿ ಈ ಮಾತುಕತೆಗಳು ಮಹತ್ವದ ಪ್ರಗತಿ ಸಾಧಿಸಿಲ್ಲ.

ಗಡಿ ಪ್ರದೇಶದಲ್ಲಿ ಏಪ್ರಿಲ್‌ನಲ್ಲಿದ್ದ ಸ್ಥಿತಿಯನ್ನು ಕಾಯ್ದುಕೊಳ್ಳಲು ಲಡಾಖ್‌ನಿಂದ ಆದಷ್ಟೂ ಬೇಗ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತ ಪಟ್ಟು ಹಿಡಿದಿದೆ.

ಪಾಂಗಾಂಗ್‌ ಸರೋವರದ ದಕ್ಷಿಣ ದಡದಲ್ಲಿ ಏಕಪಕ್ಷೀಯವಾಗಿ ಯಥಾಸ್ಥಿತಿ ಬದಲಿಸುವ ಚೀನಾ ಸೇನೆಯ ಯತ್ನವನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ ಎಂದು ಸೇನಾಧಿಕಾರಿ ಕರ್ನಲ್‌ ಅಮನ್‌ ಆನಂದ್ ಹೇಳಿದ್ದಾರೆ.

ಗಡಿಯಲ್ಲಿ ಚೀನಾ ಸೇನೆಯ ಹೆಲಿಫೋರ್ಟ್

ಭಾರತ, ಭೂತಾನ್‌ ಮತ್ತು ಚೀನಾ ಗಡಿ ಸಂಧಿಸುವ ಜಾಗದಲ್ಲಿ ಚೀನಾ ಸೇನೆಯು ಹೆಲಿಪೋರ್ಟ್‌ ನಿರ್ಮಿಸುತ್ತಿರುವ ಚಿತ್ರಗಳನ್ನು ಉಪಗ್ರಹ ಸೆರೆ ಹಿಡಿದಿದೆ.

ಚೀನಾದ ಎರಡು ಪ್ರಮುಖ ಕ್ಷಿಪಣಿ ಅಭಿವೃದ್ಧಿ ಕೇಂದ್ರಗಳಿಂದ ಹೆಲಿಪೋರ್ಟ್‌ ಸಮಾನ ದೂರದಲ್ಲಿದೆ. ಮೂರು ದೇಶಗಳ ತ್ರಿಸಂಧಿ ಜಾಗವಾದ ದೋಕಲಾ ಪ್ರದೇಶಕ್ಕೂ ಅತ್ಯಂತ ಸನಿಹದಲ್ಲಿದೆ ಎಂದು ಬೇಹುಗಾರಿಕಾ ವಿಶ್ಲೇಷಣಾ ಸಂಸ್ಥೆ ಡೆಟ್ರೆಸ್ಫಾ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT