ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಿಯಲ್ಲಿ ಡ್ರೈವರ್‌ ಆಗಿದ್ದ ಬಂಧಿತ ಉಗ್ರ ಶೇಖ್‌!

‘ಡಿ–ಕಂಪನಿ’ ನಂಟು: ಮಹಾರಾಷ್ಟ್ರ ಎಟಿಎಸ್‌ನಿಂದ ಶಂಕಿತ ಉಗ್ರನ ಮನೆ ಶೋಧ
Last Updated 15 ಸೆಪ್ಟೆಂಬರ್ 2021, 16:57 IST
ಅಕ್ಷರ ಗಾತ್ರ

ಮುಂಬೈ: ಪಾಕಿಸ್ತಾನದ ಐಎಸ್‌ಐ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದವರಲ್ಲಿ, ಒಬ್ಬನಿಗೆ ಮುಂಬೈ ನಂಟು ಇರುವುದಾಗಿ ತಿಳಿದುಬಂದಿದೆ.

ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ಉಗ್ರರು ಸೇರಿದಂತೆ ಆರು ಜನರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅವರ ಪೈಕಿ, ಜಾನ್‌ ಮೊಹಮ್ಮದ್‌ ಶೇಖ್‌ ಅಲಿಯಾಸ್‌ ಸಮೀರ್‌ ಕಾಲಿಯಾ ಎಂಬಾತ ಮುಂಬೈನ ಧಾರಾವಿ ಕೊಳೆಗೇರಿಯಲ್ಲಿ ನೆಲೆಸಿದ್ದ. ಚಿಕ್ಕದಾದ ಒಂದೇ ಕೊಠಡಿಯ ಮನೆಯಲ್ಲಿ ತನ್ನ ಕುಟುಂಬದವರೊಂದಿಗೆ ವಾಸವಿದ್ದ ಆತ, ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ದೆಹಲಿ ಪೊಲೀಸರು ಭಯೋತ್ಪಾದಕ ಕೃತ್ಯದ ಷಡ್ಯಂತ್ರವನ್ನು ಬಯಲು ಮಾಡುತ್ತಿ ದ್ದಂತೆಯೇ, ಮುಂಬೈ ಪೊಲೀಸ್‌ನ ಸಿಐಡಿ ಅಪರಾಧ ವಿಭಾಗ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಸಿಬ್ಬಂದಿಯು ಕಾರ್ಯಪ್ರವೃತ್ತರಾಗಿ ಜಾನ್‌ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಆತನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಧಾರಾವಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಆತನ ಮನೆಯನ್ನು ಶೋಧಿಸಲಾಗಿದೆ. ಅಲ್ಲಿ ಯಾವುದೇ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಅಥವಾ ಜಿಲೆಟಿನ್‌ ಸಿಕ್ಕಿಲ್ಲ ಎಂದು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಜಾನ್‌ ಮೊಹಮ್ಮದ್‌ನನ್ನು ನಾನು 30–35 ವರ್ಷಗಳಿಂದ ಬಲ್ಲೆ. ಡ್ರೈವರ್‌ ಆಗಿ ಕೆಲಸ ಮಾಡಿಕೊಂಡಿದ್ದ. ಶಾಂತ ಸ್ವಭಾವದವನಾಗಿದ್ದ. ಈ ಸುದ್ದಿ ಕೇಳಿ ನಮಗೆ ಆಘಾತವಾಗಿದೆ’ ಎನ್ನುತ್ತಾರೆ ಧಾರಾವಿಯಲ್ಲಿನ ಆತನ ಸ್ನೇಹಿತ
ಫಯಾಜ್‌. ಆತನಿದ್ದ, ಒಂದೇ ಕೊಠಡಿಯ
ಮನೆಗೆ ಈಗ ಬೀಗ ಹಾಕಲಾಗಿದೆ.

ಡಿ ಕಂಪನಿ ನಂಟು : ಮಹಾರಾಷ್ಟ್ರ ಎಟಿಎಸ್‌

ಮುಂಬೈ: ಶಂಕಿತ ಉಗ್ರ, ಮುಂಬೈನ ಜಾನ್‌ ಮೊಹಮ್ಮದ್‌ ಶೇಖ್‌ನಿಗೆ 20 ವರ್ಷಗಳ ಹಿಂದೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಅಪರಾಧ ಚಟುವಟಿಕೆಗಳ ಜಾಲವಾದ ‘ಡಿ–ಕಂಪನಿ’ಯೊಂದಿಗೆ ಸಂಪರ್ಕವಿತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಹೇಳಿದ್ದಾರೆ.

20 ವರ್ಷಗಳ ಹಿಂದೆ ಆತ ದಾವೂದ್‌ ಅನುಯಾಯಿಯಾಗಿದ್ದ ಹಾಗೂ ‘ಡಿ–ಕಂಪನಿ’ಯಿಂದ ತನಗೆ ಬಂದ ನಿರ್ದೇಶನಗಳನ್ನು ಪಾಲಿಸುತ್ತಿದ್ದ ಎಟಿಎಸ್‌ ಮುಖ್ಯಸ್ಥ ವಿನೀತ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ನಗರದಲ್ಲಿ ನಡೆದ ವಿಧ್ವಂಸಕ ಕೃತ್ಯ ಹಾಗೂ ಗುಂಡಿನ ದಾಳಿ ಪ್ರಕರಣವೊಂದರಲ್ಲಿ ಆಗ ಆತನ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಹೀಗಾಗಿ, ಇತರರಂತೆ ಈತನ ಚಲನವಲನಗಳ ಮೇಲೆಯೂ ನಿಗಾ ಇಡಲಾಗಿತ್ತು ಎಂದು ಅವರು ಹೇಳಿದರು.

ಆತ ದೆಹಲಿಯ ಹಜರತ್‌ ನಿಜಾಮುದ್ದೀನ್‌ಗೆ ತೆರಳುವುದಕ್ಕಾಗಿ, ಸೆ.13ರಂದು ಮುಂಬೈನಿಂದ ಸ್ವರ್ಣಮಂದಿರ ರೈಲಿನಲ್ಲಿ ಪ್ರಯಾಣಿಸಿದ್ದ. ಆದರೆ, ರಾಜಸ್ಥಾನದ ಕೋಟದಲ್ಲಿಯೇ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಗುಪ್ತಚರ ವೈಫಲ್ಯ ಅಲ್ಲ’:ಅಪರಾಧ ಪ್ರಕರಣವೊಂದರಲ್ಲಿ, ಜಾನ್‌ ಮೊಹಮ್ಮದ್‌ ಶೇಖ್‌ನ ವಿರುದ್ಧ 2001ರಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಇತರ ಎಲ್ಲರ ಮೇಲೆ ಕಣ್ಣಿಡುವಂತೆ ಈತನ ಮೇಲೂ ಮಹಾರಾಷ್ಟ್ರ ಪೊಲೀಸರು ನಿಗಾ ಇಟ್ಟಿದ್ದರು. ಇದರಲ್ಲಿ ಯಾವುದೇ ಗುಪ್ತಚರ ವೈಫಲ್ಯ ಇಲ್ಲ ಎಂದು ಮಹಾರಾಷ್ಟ್ರ ಗೃಹಸಚಿವ ದಿಲೀಪ್‌ ವಾಸ್ಲೆ ಪಾಟೀಲ್‌ ಬುಧವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT