ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಮುನ್ನ ಟಿಎಂಸಿಗೆ ಹೊಡೆತ

ಪಶ್ಚಿಮ ಬಂಗಾಳದ ಸಚಿವ ಸುವೇಂದು ಅಧಿಕಾರಿ ರಾಜೀನಾಮೆ
Last Updated 27 ನವೆಂಬರ್ 2020, 21:23 IST
ಅಕ್ಷರ ಗಾತ್ರ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದೊಳಗಿನ ಬಿರುಕು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸತೊಡಗಿದೆ.ಪ್ರಭಾವಿ ಮುಖಂಡ, ಪಶ್ಚಿಮ ಬಂಗಾಳದ ಸಾರಿಗೆ ಖಾತೆ ಸಚಿವ ಸುವೇಂದು ಅಧಿಕಾರಿ ಅವರು ಸಚಿವ ಸ್ಥಾನಕ್ಕೆಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.ಟಿಎಂಸಿ ಶಾಸಕ ಮಿಹಿರ್‌ ಗೋಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಧಿಕಾರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ತಾಸುಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಧಿಕಾರಿ ಅವರ ರಾಜೀನಾಮೆಯು ಟಿಎಂಸಿಗೆ ಪ್ರತಿಕೂಲವಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಫ್ಯಾಕ್ಸ್‌ ಮೂಲಕ ರಾಜೀನಾಮೆ ಪತ್ರವನ್ನು ಕಳುಹಿಸಿರುವ ಅಧಿಕಾರಿ ಅವರು, ಅದರ ಪ್ರತಿಯನ್ನು ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಅವರಿಗೆ ಇ–ಮೇಲ್‌ ಮೂಲಕ ಕಳುಹಿಸಿದ್ದಾರೆ. ಹಲ್ದಿಯಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೂ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ಪಕ್ಷದ ಸದಸ್ಯತ್ವಕ್ಕೆರಾಜೀನಾಮೆ ನೀಡಿಲ್ಲ. ಸರ್ಕಾರ ತಮಗೆ ನೀಡಿದ್ದ ಝೆಡ್‌ ಶ್ರೇಣಿಯ ಭದ್ರತೆಯನ್ನೂ ಅವರು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಅಧಿಕಾರಿ ಅವರ ರಾಜೀನಾಮೆ ಆರಂಭವಷ್ಟೇ. ಪಕ್ಷದ ಕಾರ್ಯವೈಖರಿಯಿಂದ ಇನ್ನೂ ಅನೇಕ ಮುಖಂಡರು ಅಸಮಾಧಾನಗೊಂಡಿದ್ದಾರೆ. ಅವರೆಲ್ಲರೂ ಪಕ್ಷ ತೊರೆಯಲಿದ್ದಾರೆ. ಎಲ್ಲ ಮುಖಂಡರಿಗೆ ಬಿಜೆಪಿಯ ಬಾಗಿಲು ತೆರೆದಿರುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಹೇಳಿದ್ದಾರೆ.

ಪಕ್ಷದ ಸಂಘಟನೆಯಲ್ಲಿ ಈಚೆಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಇದು ಅಧಿಕಾರಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮಮತಾ ಅವರ ಸೋದರಳಿಯ, ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಪಕ್ಷದಲ್ಲಿ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಅವರು ಬೇಸರಗೊಂಡಿದ್ದರು. ಅಲ್ಲದೆ, ಚುನಾವಣಾ ನೀತಿ ನಿರೂಪಕ ಪ್ರಶಾಂತ್‌ ಕಿಶೋರ್‌ ಹಾಗೂ ಅವರ ತಂಡದವರು ಪಕ್ಷ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆಕ್ಷೇಪವನ್ನೂ ಅವರು ವ್ಯಕ್ತಪಡಿಸಿದ್ದರು.ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದ ಅವರು ಕಳೆದ ಕೆಲವು ತಿಂಗಳುಗಳಿಂದ ಸಚಿವ ಸಂಪುಟ ಸಭೆಗಳಿಗೂ ಗೈರುಹಾಜರಾಗಿದ್ದರು.

ಬಿಜೆಪಿ ಸೇರಿರುವ ಶಾಸಕ ಗೋಸ್ವಾಮಿ ಅವರೂ ಇವೇ ಅತೃಪ್ತಿಗಳನ್ನು ವ್ಯಕ್ತಪಡಿಸಿದ್ದರು. ಕಳೆದ 22 ವರ್ಷಗಳಲ್ಲಿ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪಕ್ಷದ ಎಲ್ಲ ಹುದ್ದೆಗಳಿಗೂ ಅವರು ಅಕ್ಟೋಬರ್‌ 3ರಂದು ರಾಜೀನಾಮೆ ನೀಡಿದ್ದರು. ಮಮತಾ ಅವರು ಹೇಳಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ, ಮಮತಾ ಅವರಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಗೋಸ್ವಾಮಿ ಹೇಳಿದ್ದಾರೆ.

ತಮ್ಮ ಅಸಮಾಧಾನವನ್ನು ಸಾರ್ವಜನಿಕ ಸಭೆಗಳಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದ ಅಧಿಕಾರಿ ಅವರು, ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಾ, ‘ನಾನು ಪ್ಯಾರಚೂಟ್‌ ಅಥವಾ ಲಿಫ್ಟ್‌ ಮೂಲಕ ಈ ಎತ್ತರಕ್ಕೆ ಬಂದವನಲ್ಲ. ತಳದಿಂದ, ಒಂದೊಂದೇ ಮೆಟ್ಟಿಲು ಏರುತ್ತಾ ಬಂದಿದ್ದೇನೆ’ ಎಂದಿದ್ದರು.

2007ರಲ್ಲಿ ನಂದಿಗ್ರಾಮ ಮತ್ತು ಸಿಂಗೂರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, 2011ರಲ್ಲಿ ತೃಣಮೂಲ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಫಲ ನೀಡದ ಸಂಧಾನ ಪ್ರಯತ್ನ
ಸುವೇಂದು ಅಧಿಕಾರಿ ಅವರ ಅಸಮಾಧಾನವನ್ನು ತಣಿಸಲು ತೃಣಮೂಲ ಕಾಂಗ್ರೆಸ್‌ ಪಕ್ಷ ಕಳೆದ ಎರಡು ವಾರಗಳಿಂದ ಗಂಭೀರ ಪ್ರಯತ್ನಗಳನ್ನು ನಡೆಸಿದೆ. ಪಕ್ಷದ ಹಿರಿಯ ಮುಖಂಡ, ಸಂಸದ ಸೌಗತಾ ರಾಯ್‌ ಅವರಿಗೆ ಅಧಿಕಾರಿ ಅವರ ಮನವೊಲಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಸೌಗತ್‌ ಅವರು ಅಧಿಕಾರಿ ಜತೆಗೆ ಎರಡು ಸಭೆಗಳನ್ನು ನಡೆಸಿದ್ದರೂ ಫಲನೀಡಲಿಲ್ಲ.

ಈನಡುವೆ ಅಧಿಕಾರಿ ಅವರು ರಾಜ್ಯದಲ್ಲಿ ಪ್ರವಾಸಗಳನ್ನು ನಡೆಸಿ, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಕಾರ್ಯಕರ್ತರು ಅಲ್ಲಲ್ಲಿ ರ್‍ಯಾಲಿಗಳನ್ನು ಆಯೋಜಿಸಿದ್ದಾರೆ. ಆದರೆ ಯಾವ ಕಾರ್ಯಕ್ರಮದಲ್ಲೂ ಟಿಎಂಸಿಯ ಧ್ವಜಗಳು ಬಳಕೆಯಾಗುತ್ತಿಲ್ಲ. ಇದು ಪಕ್ಷದ ನಾಯಕರಿಗೆ ಇರುಸುಮುರುಸು ಉಂಟುಮಾಡಿದೆ.

‘ಅಧಿಕಾರಿ ಅವರು ಪಕ್ಷ ಬಿಟ್ಟಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷವನ್ನು ತ್ಯಜಿಸುವ ಯೋಚನೆಯನ್ನು ಅವರು ಮಾಡಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಮಾತುಕತೆಗೆ ಇನ್ನೂ ಅವಕಾಶಗಳಿವೆ. ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ’ ಎಂದು ರಾಯ್‌ ಹೇಳಿದ್ದಾರೆ.

**

ಇಸ್ಪೀಟ್‌ ಎಲೆಗಳಿಂದ ನಿರ್ಮಿಸಿದ ಮನೆಯು ಉರುಳುವಂತೆ ಆಡಳಿತಾರೂಢ ಟಿಎಂಸಿ ಇನ್ನು ಮುಂದೆ ಕುಸಿಯಲಿದೆ.
-ಅಧಿರ್‌ ರಂಜನ್‌ ಚೌಧರಿ, ಪಶ್ಚಿಮ ಬಂಗಾಳ ಕಾಂಗ್ರೆಸ್‌ ಘಟಕದ ಮುಖ್ಯಸ್ಥ

**

ಅವರೊಬ್ಬ (ಸುವೇಂದು) ಹೋರಾಟಗಾರ. ಅವರಿಗೆ ಬಿಜೆಪಿಗೆ ಸ್ವಾಗತವಿದೆ. ಪಕ್ಷದಲ್ಲಿ ಪೂರ್ಣ ಗೌರವ ನೀಡಲಾಗುವುದು. ಇದು ಟಿಎಂಸಿಯ ಅವಸಾನದ ಆರಂಭ.
-ದಿಲೀಪ್‌ ಘೋಷ್‌, ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT