'ರಾಮಮಂದಿರವನ್ನ ವಿರೋಧಿಸಿದವರೇ ಈಗ ರಾಮ ಎಲ್ಲರಿಗೂ ಸೇರಿದವನೆನ್ನುತ್ತಿದ್ದಾರೆ'

ಗೋರಖಪುರ: ನಕಾರಾತ್ಮಕ ಚಿಂತನೆ ಹೊಂದಿದವರು ಮೊದಲು ರಾಮ ಮಂದಿರ ಹೋರಾಟವನ್ನು ವಿರೋಧಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದಾಗ ಭಗವಾನ್ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳಲು ತೊಡಗಿದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
ಅದೇ ವೇಳೆ ಕೊರೊನಾ ವೈರಸ್ ಮುಕ್ತ ಭಾರತಕ್ಕಾಗಿ ಶ್ರಮ ವಹಿಸಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. ಮೋದಿ ಮಾರ್ಗದರ್ಶನದಲ್ಲಿ ವಿಜ್ಞಾನಿಗಳು ಕೋವಿಡ್-19 ಲಸಿಕೆಗಳನ್ನು ಹೊರ ತಂದಿದ್ದಾರೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ 500 ಕೋಟಿ ರೂ.ಗಳ 37 ಯೋಜನೆಗಳಿಗೆ ಚಾಲನೆ ನೀಡಿ ಪ್ರತಿಕ್ರಿಯಿಸಿದ ಆದಿತ್ಯನಾಥ್, ಹಿಂದಿನ ಸರ್ಕಾರಗಳು ಪ್ರತಿಯೊಂದು ವಿವಾದವನ್ನು ಬಯಸಿದ್ದವು. ಭಗವಾನ್ ರಾಮ ಕಾಲ್ಪನಿಕ ಪಾತ್ರ ಎಂದು ಹೇಳುತ್ತಿದ್ದವರು ಈಗ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಿದ್ದಾರೆ. ಇದುವೇ ಪರಿವರ್ತನೆ ಎಂದರು.
ಇದನ್ನೂ ಓದಿ: ಅರ್ಧ ಪ್ಯಾಂಟ್ ಧರಿಸಿ ಭಾಷಣ ಮಾಡುವುದು ರಾಷ್ಟ್ರೀಯತೆಯಲ್ಲ: ಸಚಿನ್ ಪೈಲಟ್
ರಾಮನ ಭಕ್ತರ ವಿರುದ್ಧ ಆರೋಪ ಮಾಡಿದವರು, ರಾಮ ಅಸ್ತಿತ್ವದಲ್ಲಿಲ್ಲ ಎಂದು ಹೇಳುತ್ತಿದ್ದರು. ಈಗ ಅವರೆಲ್ಲ ರಾಮ ಭಕ್ತರ ಶಕ್ತಿಯನ್ನು ಅನುಭವಿಸುತ್ತಿದ್ದಾರೆ. ಈಗ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಿದ್ದಾರೆ. ರಾಮ ಎಲ್ಲರಿಗೂ ಸೇರಿದವರು, ಹಾಗಾಗಿ ರಾಮ ಜನ್ಮಭೂಮಿ ಹೋರಾಟವನ್ನು ಯಾರೂ ವಿರೋಧಿಸಬಾರದು ಎಂದು ನಾವು ಹೇಳುತ್ತಿದ್ದೆವು. ಕೊನೆಗೆ ರಾಮನ ಭಕ್ತರು ಸಲ್ಲಿಸಿದ ಸೇವೆಯು ವಿಜಯಶಾಲಿಯಾಗಿದೆ ಎಂದು ತಿಳಿಸಿದರು.
ರಾಮ ಮಂದಿರ ಹೋರಾಟವನ್ನು ವಿರೋಧಿಸುವವರು ನಕಾರಾತ್ಮಕ ಮನೋಭಾವವನ್ನು ಹೊಂದಿದ್ದರು. ಅಲ್ಲದೆ ಹೀಯಾಳಿಸಲು ಪ್ರಯತ್ನಿಸಿದ್ದರು. ಎಲ್ಲ ಕ್ಷೇತ್ರದಲ್ಲೂ ವಿಫಲರಾದಾಗ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ನೇರವೇರಿಸಿರುವುದು ಈ ಹೋರಾಟ ಧನಾತ್ಮಕವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ದೇಶದ ವಿಜ್ಞಾನಿಗಳು ಕೋವಿಡ್-19 ಲಸಿಕೆ ತಯಾರಿಸಿದ್ದಾರೆ. ಒಂದೇ ಸಮಯದಲ್ಲಿ ಎರಡು ಲಸಿಕೆಗಳನ್ನು ಬಿಡುಗಡೆ ಮಾಡಿದ ಜಗತ್ತಿನ ಮೊದಲ ದೇಶ ಭಾರತ ಎಂದು ಹೇಳಿದರು.
ಲಸಿಕೆಗಾಗಿ ಕೋವಿಡ್-19 ಪ್ರಯೋಗಾಲಯಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ. ಇದರ ಪರಿಣಾಮ ಭಾರತ ಸ್ವಾವಲಂಬಿಯಾಗುತ್ತಿದೆ. ಜಗತ್ತಿನಲ್ಲಿ ಒಂದು ಲಸಿಕೆ ಹೊರಬಂದಿದೆ. ಆದರೆ ಭಾರತದಲ್ಲಿ ಎರಡು ಲಸಿಕೆಗಳು ಒಟ್ಟಿಗೆ ಬಂದಿವೆ ಎಂದು ತಿಳಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.