ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ನಾಲ್ಕು ಭ್ರೂಣಗಳನ್ನು ಹೊಂದಿದ್ದ ಹುಲಿಯ ಭೀಕರ ಹತ್ಯೆ

ಯಾವತ್ಮಾಲ್ ಜಿಲ್ಲೆಯ ಪಂಢರ್ಕ್‌ವಾಡಾ ಕಾಡಿನಲ್ಲಿ ಅಮಾನವೀಯ ಘಟನೆ
Last Updated 27 ಏಪ್ರಿಲ್ 2021, 15:42 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಯಾವತ್ಮಾಲ್‌ ಜಿಲ್ಲೆಯ ಪಂಢರ್ಕ್‌ವಾಡಾದ ಅರಣ್ಯ ಪ್ರದೇಶದಲ್ಲಿ ನಾಲ್ಕು ಭ್ರೂಣಗಳನ್ನು ಹೊಂದಿದ್ದ ಹೆಣ್ಣು ಹುಲಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ನಡೆದಿದೆ.

ಹುಲಿಯ ಹತ್ಯೆಯು ಭಾನುವಾರ ನಡೆದಿದ್ದು, ಸೋಮವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ. ಉಗುರುಗಳ ಸಲುವಾಗಿ ಹುಲಿಯ ಮುಂದಿನ ಎರಡು ಕಾಲುಗಳ ಪಂಜವನ್ನು ಕಳ್ಳಬೇಟೆಗಾರರು ಕತ್ತರಿಸಿದ್ದಾರೆ. ಮುಕ್ತಬನ್ ಶ್ರೇಣಿಯಲ್ಲಿ ನಡೆದಿರುವ ಈ ಘಟನೆಯಿಂದ ವನ್ಯಜೀವಿ ಪ್ರೇಮಿಗಳು ಮತ್ತು ಅಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ.

ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತಂದಿರುವ ಸಾತ್ಪುಡ ಫೌಂಡೇಷನ್‌ನ ಸ್ಥಾಪಕ ಮತ್ತು ವನ್ಯಜೀವಿ ಸಂರಕ್ಷಣಾಧಿಕಾರಿ ಕಿಶೋರ್ ರಿಥೆ ಅವರು, ಕಳ್ಳಬೇಟೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ವನ್ಯಜೀವಿ ಮಂಡಳಿಯ ಸದಸ್ಯರೂ ಆಗಿರುವ ರಿಥೆ, ಇತ್ತೀಚಿನ ದಿನಗಳಲ್ಲಿ ನೋಡಿರದ ಹುಲಿಯ ಭೀಕರ ಸಾವು ಇದಾಗಿದೆ ಎಂದಿದ್ದಾರೆ.

‘ಹುಲಿಗಳು ಸಾಮಾನ್ಯವಾಗಿ ಸಣ್ಣ ಬಾಯಿಯುಳ್ಳ ಗುಹೆಗಳಲ್ಲಿ ವಾಸಿಸುತ್ತವೆ. ಗರ್ಭಿಣಿ ಹೆಣ್ಣುಹುಲಿಯು ಇಂಥದ್ದೇ ಸಣ್ಣ ಗುಹೆಯೊಂದರಲ್ಲಿ ವಾಸವಿರುವುದನ್ನು ಕಳ್ಳಬೇಟೆಗಾರರು ಪತ್ತೆ ಹಚ್ಚಿದ್ದಾರೆ. ಹುಲಿಯ ಚಲನವಲನಗಳನ್ನು ಗಮನಿಸಿ ಅದು ಗುಹೆಯೊಳಗೆ ಹೋದ ಬಳಿಕ ಬಿದಿರಿನ ಕೋಲುಗಳು ಮತ್ತು ಇತರ ವಸ್ತುಗಳಿಂದ ಗುಹೆಯ ಬಾಯಿಯನ್ನು ಮುಚ್ಚಿ, ಬೆಂಕಿಹಾಕಿ ಉಸಿರುಗಟ್ಟಿಸಿ ಕೊಂದಿರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

‘ಹುಲಿಯ ಸಾವನ್ನು ಖಚಿತಪಡಿಸಿಕೊಳ್ಳಲು ಚೂಪಾದ ಬಿದಿರಿನ ತುಂಡುಗಳನ್ನು ಅಥವಾ ಲೋಹದ ಕಡ್ಡಿಗಳನ್ನು ಚುಚ್ಚಿದ್ದಾರೆ. ಇದು ಹುಲಿಯ ದೇಹದ ಮೇಲೆ ಮತ್ತಷ್ಟು ಗಾಯಗಳನ್ನು ಉಂಟುಮಾಡಿದೆ. ಅಷ್ಟೇ ಅಲ್ಲ, ಹುಲಿಯ ಮರಣದ ನಂತರ ಕಳ್ಳಬೇಟೆಗಾರರು ಹುಲಿಯ ಪಂಜವನ್ನು ಕತ್ತರಿಸಿದ್ದಾರೆ. ಹುಲಿಯ ಸಾವಿನ ಸ್ಥಳದಲ್ಲಿ ಬಿದಿರಿನ ತುಂಡುಗಳು ಮತ್ತು ಕ್ಲಚ್ ತಂತಿಗಳಿರುವುದು ಪತ್ತೆಯಾಗಿದೆ’ ಎಂದು ರಿಥೆ ವಿವರಿಸಿದ್ದಾರೆ.

‘ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಸಾವಿಗೀಡಾದ ಹೆಣ್ಣು ಹುಲಿಯು ಗರ್ಭಿಣಿಯಾಗಿದ್ದು, ಅದರ ಹೊಟ್ಟೆಯಲ್ಲಿ ನಾಲ್ಕು ಹುಲಿಮರಿಗಳ ಭ್ರೂಣಗಳಿದ್ದವು. ಇನ್ನೊಂದು ತಿಂಗಳಲ್ಲಿ ಈ ಮರಿಗಳು ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದವು, ತಾಯಿಯೊಂದಿಗೆ ಈ ನಾಲ್ಕು ಮರಿಗಳೂ ಸಾವನ್ನಪ್ಪಿವೆ’ ಎಂದು ರಿಥೆ ತಿಳಿಸಿದ್ದಾರೆ.

‘ಕಳೆದ 30 ವರ್ಷಗಳಲ್ಲಿ ಇಂಥ ಭೀಕರ ಹತ್ಯೆಯನ್ನು ನಾನು ನೋಡಿಲ್ಲ. 2004ರಲ್ಲಿ ಮೆಲ್ಘಾಟ್‌ನಲ್ಲಿ ಹುಲಿಯೊಂದು ವಿದ್ಯುತ್ ಶಾಕ್‌ನಿಂದ ಆಘಾತಕ್ಕೀಡಾಗಿ ಮೂರು ಮರಿಗಳೊಂದಿಗೆ ಸಾವನ್ನಪ್ಪಿತ್ತು. ಆದರೆ, ಈ ಘಟನೆ ಅದಕ್ಕಿಂತ ಕ್ರೂರವಾಗಿದೆ. ದುರ್ಗಾ ಮಾತೆಯನ್ನು ಪೂಜಿಸುವ ಮಹಾರಾಷ್ಟ್ರದ ಸಂಪ್ರದಾಯಕ್ಕೆ ಇಂಥ ಘಟನೆಗಳು ಸರಿಯಾಗುವುದಿಲ್ಲ. ಇದನ್ನು ನಾವು ಖಂಡಿಸಬೇಕು’ ಎಂದು ಅವರು ಹೇಳಿದ್ದಾರೆ.

ಹುಲಿಯನ್ನು ಹತ್ಯೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಶೋಧಕ ಮತ್ತು ಪರಿಸರ ಪ್ರೇಮಿ ವರದಗಿರಿ ಒತ್ತಾಯಿಸಿದ್ದಾರೆ.

ಹುಲಿಯ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ವಿಭಾಗೀಯ ಅರಣ್ಯಾಧಿಕಾರಿ (ವನ್ಯಜೀವಿ) ಸುಭಾಷ್ ಪುರಾಣಿಕ್, ರೇಂಜ್ ಅರಣ್ಯಾಧಿಕಾರಿ (ಮುಕ್ತಬನ್) ವಿಜಯ್ ವಾರೆ, ದೆಹಲಿಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ ಡಾ. ರಮ್ಜಾನ್ ವಿರಾನಿ, ನಾಗ್ಪುರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯರಾದ ಡಾ.ಚೇತನ್ ಪಾಥೋಡ್, ಡಾ. ಅರುಣ್ ಜಾವೇದ್, ಡಾ.ಎಸ್.ಎಸ್. ಚವಾಣ್, ಡಾ.ಡಿ.ಜಿ. ಜಾಧವ್, ಡಾ.ವಿ.ಸಿ. ಜಾಗ್ಡೆ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT