ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಯೋಜನೆ ಪರಿಕಲ್ಪನೆಯನ್ನು ಇಸ್ಲಾಂ ವಿರೋಧಿಸುವುದಿಲ್ಲ: ಖುರೇಷಿ

Last Updated 7 ಮಾರ್ಚ್ 2021, 8:27 IST
ಅಕ್ಷರ ಗಾತ್ರ

ನವದೆಹಲಿ: ‘ಮುಸ್ಲಿಮರನ್ನು ಬೆದರಿಕೆಯಂತೆ ಪ್ರತಿಬಿಂಬಿಸಲು ಹಿಂದೂತ್ವ ಗುಂಪುಗಳು ಹೇಳುತ್ತಿರುವ ಸುಳ್ಳುಗಳನ್ನು ಬಯಲು ಮಾಡುವ ಸಮಯ ಬಂದಿದೆ’ ಎಂದು ಮಾಜಿ ಚುನಾವಣಾ ಆಯುಕ್ತ ಎಸ್.ವೈ ಖುರೇಷಿ ಅವರು ಹೇಳಿದರು.

‘ಕುಟುಂಬ ಯೋಜನೆ ಪರಿಕಲ್ಪನೆಯನ್ನು ಇಸ್ಲಾಂ ಧರ್ಮ ವಿರೋಧಿಸುವುದಿಲ್ಲ. ಅಲ್ಲದೆ ಭಾರತದಲ್ಲಿ ಇತರೆ ಸಮುದಾಯಕ್ಕಿಂತ ಇಸ್ಲಾಂ ಧರ್ಮದಲ್ಲಿ ಬಹುಪತ್ನಿತ್ವ ಕಡಿಮೆಯಿದೆ’ ಎಂದರು.

‘ದೇಶದಲ್ಲಿ ಹಿಂದೂ ಸಮುದಾಯವನ್ನು ಹಿಂದಿಕ್ಕಿ ಮುಸ್ಲಿಮರ ಸಂಖ್ಯೆಯನ್ನು ಹೆಚ್ಚಿಸಲು ಯಾವುದೇ ಪಿತೂರಿ ನಡೆದಿಲ್ಲ. ಹಿಂದೂ ಸಮುದಾಯದ ಜನಸಂಖ್ಯೆಯನ್ನು ನಮಗೆ ದಾಟಲು ಸಾಧ್ಯವಿಲ್ಲ’ ಎಂದು ಇತ್ತೀಚೆಗೆ ಬಿಡುಗಡೆಯಾದ ತಮ್ಮ ‘ದಿ ಪಾಪ್ಯುಲೇಷನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್‌ ಆ್ಯಂಡ್‌ ಪಾಲಿಟಿಕ್ಸ್‌ ಇನ್‌ ಇಂಡಿಯಾ’ ಎಂಬ ಪುಸ್ತಕದಲ್ಲಿ ವಾದಿಸಿದ್ದಾರೆ.

‘ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ, ಅದು ಸತ್ಯವೆಂಬಂತೆ ಪರಿವರ್ತನೆಯಾಗುತ್ತದೆ. ಹಾಗಾಗಿ ಮುಸ್ಲಿಂ ಸಮುದಾಯದ ವಿರುದ್ಧದ ಪ್ರಚಾರ ಮಾಡುತ್ತಿರುವ ಈ ಸುಳ್ಳನ್ನು ಎದುರಿಸುವ ಸಮಯ ಬಂದಿದೆ. ಇಸ್ಲಾಂ ಕುಟುಂಬ ಯೋಜನೆಯ ವಿರುದ್ಧವಾಗಿದೆ ಎಂಬ ಸುಳ್ಳನ್ನು ಮುಸ್ಲಿಂ ಸಮುದಾಯದವರು ಕೂಡ ನಂಬಿದ್ದಾರೆ. ಆದರೆ ಇದು ಸತ್ಯವಲ್ಲ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದರು.

‘ಕುರಾನ್‌ನಲ್ಲಿ ಎಲ್ಲಿಯೂ ಕುಟುಂಬ ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ ಯುವಕರು ಕುಟುಂಬವನ್ನು ನೋಡಿಕೊಳ್ಳುವಷ್ಟು ಸಮರ್ಥರಾದ ಮೇಲೆ ಮಾತ್ರ ಮದುವೆಯಾಗುವಂತೆ ಕುರಾನ್‌ನಲ್ಲಿ ಹೇಳಲಾಗಿದೆ’ ಎಂದು ಅವರು ಹೇಳಿದರು.

‘70 ವರ್ಷಗಳಲ್ಲಿ ಹಿಂದೂ ಜನಸಂಖ್ಯೆ ಶೇಕಡ 84.1ರಿಂದ ಶೇಕಡ 79.8ಕ್ಕೆ ಇಳಿದಿರುವುದು ನಿಜ. ಈ ಸಮಯದಲ್ಲಿ ಮುಸ್ಲಿಮರ ಸಂಖ್ಯೆಯೂ ಹೆಚ್ಚಾಯಿತು. ಆದರೆ ಮೂರು ದಶಕಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಕುಟುಂಬ ಯೋಜನೆಯನ್ನು ಅಳವಡಿಸುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT