ಶುಕ್ರವಾರ, ಆಗಸ್ಟ್ 12, 2022
23 °C

ಬಿಜೆಪಿ ಸೇರುವ ಗುಮಾನಿ ಇದ್ದ ಟಿಎಂಸಿ ಪ್ರಭಾವಿ ನಾಯಕ 'ಅಧಿಕಾರಿ' ಮುನಿಸು ಶಮನ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತಾ: ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಟಿಎಂಸಿಯ ಪ್ರಭಾವಿ ನಾಯಕ ಸುವೇಂದು ಚಕ್ರವರ್ತಿ ಅವರನ್ನು ಪಕ್ಷದ ಹಿರಿಯ ನಾಯಕರು ಮಂಗಳವಾರ ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಭೇಟಿ ನಂತರ ಮಾತನಾಡಿರುವ ನಾಯಕರು ' ಸಮಸ್ಯೆಗಳೆಲ್ಲವೂ ಬಗೆಹರಿದಿವೆ,' ಎಂದು ಹೇಳಿದ್ದಾರೆ.

ಉತ್ತರ ಕೋಲ್ಕತಾದಲ್ಲಿ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸುವೇಂದು ಅಧಿಕಾರಿ ಅವರೊಂದಿಗೆ ಅಭಿಷೇಕ್‌ ಬ್ಯಾನರ್ಜಿ, ಪ್ರಶಾಂತ್ ಕಿಶೋರ್ ಮತ್ತು ಸಂಸದ ಸೌಗತ ರಾಯ್ ಮತ್ತು ಸುದೀಪ್ ಬಂಡೋಪಾಧ್ಯಾಯ ಸಮಾಲೋಚನೆ ನಡೆಸಿದ್ದಾರೆ.

'ಅಧಿಕಾರಿ' ಅವರೊಂದಿಗಿನ ಟಿಎಂಸಿ ನಾಯಕರ ಈ ಸಭೆ ಮೂರನೇಯದ್ದು. ಇದಕ್ಕೂ ಹಿಂದೆ ಎರಡು ಸಭೆಗಳು ನಡೆದಿದ್ದವಾದರೂ, ಅವುಗಳಿಂದ ಯಾವುದೇ ಪ್ರಯೋಜವಾಗಿರಲಿಲ್ಲ.

'ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಪಕ್ಷವು ಮತ್ತಷ್ಟು ಗಟ್ಟಿಯಾಗಿದೆ. ಸಮಸ್ಯೆಗಳನ್ನು ಬಗೆಹರಿಸಲು ಮುಖಾಮುಖಿ ಭೇಟಿಯ ಅಗತ್ಯವಿತ್ತು. ಆದ್ದರಿಂದಲೇ ಸಭೆ ನಡೆಸಲಾಯಿತು. ಸಮಸ್ಯೆ ಪರಿಹರಿಸಲಾಗಿದೆ,' ಎಂದು ಸಂಸದ ಸೌಗತ ರಾಯ್‌ ಸಭೆಯ ನಂತರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿ ಅವರೇ ಹೇಳಿಕೆ ನೀಡಲಿದ್ದಾರೆ ಎಂದೂ ಸೌಗತ ರಾಯ್‌ ಹೇಳಿದರು.

'ಸುವೇಂದು ಅಧಿಕಾರಿ ಬಿಜೆಪಿ ಸೇರುವುದಿಲ್ಲ. ಅವರು ಬಿಜೆಪಿ ಸೇರುತ್ತಾರೆಂಬುದು ಮೂರ್ಖ ಆಲೋಚನೆಗಳು. ಅವರೊಂದಿಗೆ ನಡೆಸಲಾದ ಸಭೆ ಫಲಪ್ರದವಾಗಿದೆ. ಅಧಿಕಾರಿ ಟಿಎಂಸಿ ಜೊತೆಗೇ ಇದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಅವರು ನಮ್ಮೊಂದಿಗೆ ಶ್ರಮಿಸುತ್ತಾರೆ,' ಎಂದು ಸಂಸದ ಸೌಗತ ರಾಯ್‌ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

2011 ರಲ್ಲಿ ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೇರಲು ಕಾರಣವಾಗಿದ್ದ 'ನಂದಿಗ್ರಾಮ ಚಳವಳಿಯ' ಪ್ರಮುಖ ನಾಯಕರಾಗಿದ್ದ ಸುವೇಂದು ಅಧಿಕಾರಿ ನ. 27ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಗೆ ಸೇರುವಂತೆ ಅವರಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಜಯ್‌ ವರ್ಗೀಯ ಸೇರಿದಂತೆ ಹಲವು ನಾಯಕರು ಪಕ್ಷಕ್ಕೆ ಆಹ್ವಾನಿಸಿದ್ದರು. ಅವರು ಬಿಜೆಪಿ ಸೇರುವುದಾಗಿ ಊಹಾಪೋಹಗಳು ಕೇಳಿಬಂದಿದ್ದವು.

ಪೂರ್ವ ಮಿಡ್ನಾಪುರದ ತಮ್ಮ ಸ್ವಂತ ಜಿಲ್ಲೆ ಹೊರತುಪಡಿಸಿ, ಅಧಿಕಾರಿ ಅವರು ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ, ಜಾರ್‌ಗ್ರಾಮ್‌ ಮತ್ತು ಬುಡಕಟ್ಟು ಜನರ ಪ್ರಾಬಲ್ಯವಿರುವ ಜಂಗಲ್‌ ಮಹಲ್‌ನ ಪ್ರದೇಶವಾದ ಬಿರ್ಭುಮ್‌ ಸೇರಿದಂತೆ ಕನಿಷ್ಠ 35-40 ಕ್ಷೇತ್ರಗಳ ಮೇಲೆ ತಮ್ಮ ಪ್ರಭಾವ ಹೊಂದಿದ್ದಾರೆ.

ಪೂರ್ವ ಮಿಡ್ನಾಪುರದ ಪ್ರಭಾವಿ 'ಅಧಿಕಾರಿ' ಕುಟುಂಬದವರಾದ ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್‌ ಅಧಿಕಾರಿ, ಸೋದರ ದಿವ್ಯೇಂದು ಅಧಿಕಾರಿ ಕ್ರಮವಾಗಿ ಟಮ್ಲುಕ್‌ ಮತ್ತು ಕಾಂತಿ ಲೋಕಸಭೆ ಕ್ಷೇತ್ರದ ಟಿಎಂಸಿ ಸಂಸದರಾಗಿದ್ದಾರೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು