ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಅಮ್ಮಾ ಮೊಬೈಲ್‌ ಕ್ಯಾಂಟೀನ್‌ಗೆ ಮುಖ್ಯಮಂತ್ರಿ ಚಾಲನೆ

Last Updated 4 ನವೆಂಬರ್ 2020, 14:31 IST
ಅಕ್ಷರ ಗಾತ್ರ

ಚೆನ್ನೈ: ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ ಆಹಾರ ಒದಗಿಸುವ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಬುಧವಾರಮೂರು ಅಮ್ಮಾ ಮೊಬೈಲ್‌ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಕೆ.ಪಳನಿಸ್ವಾಮಿ ಅವರು ಸಾರ್ವಜನಿಕರಿಗೆ ಆಹಾರ ವಿತರಿಸಿದರು.

ಮೊಬೈಲ್‌ ಕ್ಯಾಂಟೀನ್‌ಗಳಿಗಾಗಿ ಬಳಸಲಾಗಿರುವ ಮೂರು ವಾಹನಗಳಿಗೆ ₹27 ಲಕ್ಷ ಖರ್ಚಾಗಿದೆ ಎಂದು ‍ಪತ್ರಿಕಾ ಬಿಡುಗಡೆಯಲ್ಲಿ ಹೇಳಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘ಅಮ್ಮಾ ಮೊಬೈಲ್ ಕ್ಯಾಂಟೀನ್‌ಗಳಿಗೆ ನಾನು ಚಾಲನೆ ನೀಡಿದ್ದೇನೆ. ಇದು ನನಗೆ ಬಹಳ ಖುಷಿಯನ್ನು ತಂದುಕೊಟ್ಟಿದೆ. ಮುಂದಿನ ದಿನಗಳಲ್ಲಿ ಅಮ್ಮಾ ಕ್ಯಾಂಟೀನ್‌ ಸರಪಳಿಯನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ’ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ, ಪುರಸಭೆ ಆಡಳಿತ ಸಚಿವ ಎಸ್‌.ಪಿ ವೇಲುಮಣಿ, ಮೀನುಗಾರಿಕೆ ಸಚಿವ ಡಿ.ಜಯಕುಮಾರ್‌, ಮುಖ್ಯ ಕಾರ್ಯದರ್ಶಿ ಕೆ.ಷಣ್ಮುಂಗಂ ಸೇರಿದಂತೆ ಇನ್ನಿತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಬೃಹತ್‌ ಚೆನ್ನೈ ಮಹಾನಗರ ಪಾಲಿಕೆಯ ಕಾರ್ಯಕ್ರಮಗಳಡಿ ಈ ಮೂರು ಅಮ್ಮಾ ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ಈ ಮೊಬೈಲ್‌ ಕ್ಯಾಂಟೀನ್‌ಗಳು ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಆಹಾರ ತಲು‍ಪಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತಹ ಸ್ಥಳಗಳಲ್ಲಿ, ಹೆಚ್ಚು ಬಡವರನ್ನು ಹೊಂದಿರುವ ಪ್ರದೇಶಗಳಲ್ಲಿ ಅಮ್ಮಾ ಮೊಬೈಲ್‌ ಕ್ಯಾಂಟೀನ್‌ಗಳನ್ನು ಇರಿಸಲಿದ್ದೇವೆ ಎಂದು ನಾಗರಿಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಮಿಳುನಾಡಿನಲ್ಲಿ ಒಟ್ಟು 650 ಅಮ್ಮಾ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಚೆನ್ನೈನಲ್ಲಿಯೇ ಒಟ್ಟು 407 ಅಮ್ಮಾ ಕ್ಯಾಂಟೀನ್‌ಗಳಿವೆ. ಇಲ್ಲಿ ಇಡ್ಲಿ (₹1), ಎರಡು ರೋಟಿ(₹3), ಪೊಂಗಲ್‌(₹5) ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT