ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿರಲು ಆಗುತ್ತಿಲ್ಲ: ನರಬಲಿಗೆ ಹೆದರಿ ಕೇರಳ ತೊರೆಯುತ್ತಿರುವ ತಮಿಳು ಕುಟುಂಬಗಳು

Last Updated 14 ಅಕ್ಟೋಬರ್ 2022, 10:14 IST
ಅಕ್ಷರ ಗಾತ್ರ

ಎರ್ನಾಕುಲಂ: ಕೇರಳದಲ್ಲಿ ನರಬಲಿ ಪ್ರಕರಣ ಬಯಲಾಗುತ್ತಲೇ ಭಯಭೀತಗೊಂಡಿರುವ ಹೊರ ರಾಜ್ಯಗಳ ವಲಸಿಗ ಕುಟುಂಬಗಳು ತಮ್ಮ ಊರುಗಳಿಗೆ ಹಿಂದಿರುಗುತ್ತಿವೆ.

ಕೇರಳದಲ್ಲಿ ಬಲಿಯಾಗಿರುವ ಇಬ್ಬರು ಮಹಿಳೆಯರ ಪೈಕಿ ಪದ್ಮಾ (52) ಎಂಬುವವರು ತಮಿಳುನಾಡಿನ ಧರ್ಮಪುರಿಯ ಎರಪೆಟ್ಟಿಯವರು. 15 ವರ್ಷಗಳ ಹಿಂದೆ ಬದುಕು ಅರಸಿ ಅವರು ಕೇರಳಕ್ಕೆ ಬಂದಿದ್ದರು. ತಮ್ಮ ಊರಿನಲ್ಲಿ ಅವರು ಪಡೆಯುತ್ತಿದ್ದ ಕೂಲಿಗಿಂತಲೂ ಕೇರಳದಲ್ಲಿ ಸಿಗುತ್ತಿದ್ದ ಕೂಲಿ ದುಪ್ಪಟ್ಟಾಗಿತ್ತು ಎನ್ನಲಾಗಿದೆ.

ಧರ್ಮಪುರಿ ಮತ್ತು ರಾಜ್ಯದ ಇತರ ಭಾಗಗಳಲ್ಲಿನ ಹಲವಾರು ಜನರು ಈಗ ಕೇರಳದ ಎರ್ನಾಕುಲಂ, ಕೋಯಿಕ್ಕೋಡ್‌, ತಿರುವನಂತಪುರ, ತ್ರಿಶೂರ್ ಮತ್ತು ಕೊಟ್ಟಾಯಂ ಜಿಲ್ಲೆಗಳಿಂದ ಮರಳಿ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ತಮಿಳರೇ ಆಗಿದ್ದಾರೆ.

ಎರ್ನಾಕುಲಂನಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ಶಾಂತಿ (42) ಎಂಬುವವರು, ಕಾಲೂರ್‌ನಲ್ಲಿರುವ ತನ್ನ ಪತಿ ಸ್ವಾಮಿನಾಥನ್ ಅವರೊಂದಿಗೆ ಧರ್ಮಪುರಿಯ ಎರಪೆಟ್ಟಿಗೆ ಮರಳಿದ್ದಾರೆ.

ಮಲಯಾಳಂನಲ್ಲಿ ನಿರರ್ಗಳವಾಗಿ ಮಾತನಾಡುವ ಶಾಂತಿ, ‘ನಾವು ಕಳೆದ 18 ವರ್ಷಗಳಿಂದ ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿದ್ದೆವು. ಎರ್ನಾಕುಲಂ ನಮಗೆ ಎಲ್ಲವನ್ನೂ ನೀಡಿದೆ. ಆದರೆ, ತಮಿಳು ಮಹಿಳೆಯನ್ನು ಬಲಿಕೊಟ್ಟು, ತುಂಡು ತುಂಡಾಗಿ ಕತ್ತರಿಸಿರುವ ಘಟನೆ ನನ್ನನ್ನು ಕಾಡುತ್ತಿದೆ. ಎರ್ನಾಕುಲಂನಲ್ಲಿ ಇರಲು ಮನಸಾಗುತ್ತಿಲ್ಲ. ಅರ್ಧ ಕೂಲಿ ಸಿಕ್ಕರೂ ನಾವು ನಮ್ಮ ಊರಿನಲ್ಲೇ ನೆಲೆಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

ತೇಣಿ ಮೂಲದ ಕೃಷ್ಣವೇಣಿ (36) ಎಂಬ ಮಹಿಳೆ ತನ್ನ ಪತಿ ಸುಕುಮಾರನ್ ಜೊತೆಗೆ ತಿರುವನಂತಪುರದಲ್ಲಿ ಇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ‘ತಿರುವನಂತಪುರ ನನಗೆ ಮನೆಗಿಂತ ಹೆಚ್ಚಾಗಿತ್ತು. ಆದರೆ ನನಗೆ ಈಗ ಭಯವಾಗಿದೆ. ಹೀಗಾಗಿ ಅಲ್ಲಿರಲು ಆಗುತ್ತಿಲ್ಲ. ಕಂಬಂ ಮತ್ತು ಥೇಣಿಯಲ್ಲಿ ಸಣ್ಣಪುಟ್ಟ ಕೆಲಸ ಸಿಗುತ್ತದೆ. ಅದರಲ್ಲೇ ಬದುಕುತ್ತೇವೆ. ನಮಗೆ ಸುರಕ್ಷಿತವಲ್ಲದ ಸ್ಥಳದಲ್ಲಿರುವುದಕ್ಕಿಂತ, ನಮ್ಮ ಸಂಬಂಧಿಕರು ಮತ್ತು ಕುಟುಂಬದೊಂದಿಗೆ ನಮ್ಮ ತವರಲ್ಲಿರುವುದೇ ಮೇಲು’ ಎಂದು ಅವರು ಹೇಳಿದ್ದಾರೆ.

ಬಲಿಯಾದ ಪದ್ಮಾ ಅವರ ಮೃತದೇಹದ ಕತ್ತರಿಸಿದ ಭಾಗಗಳನ್ನು ಮರಳಿ ತರಲು ಪ್ರಯತ್ನಿಸಬೇಕು ಎಂದು ಅವರ ಕುಟುಂಬಸ್ಥರು ತಮಿಳುನಾಡು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪದ್ಮಾ ಅವರ ಹಿರಿಮಗ ಆರ್.ಸೆದ್ದು ಈ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್‌ಗೆ ಕೋರಿಕೆ ಸಲ್ಲಿಸಿದ್ದಾರೆ.

ತಮಿಳುನಾಡಿನ ಎರಪೆಟ್ಟಿ ಗ್ರಾಮದ ಒಂಬತ್ತು ಕುಟುಂಬಗಳು ಎರ್ನಾಕುಲಂನಲ್ಲಿ ವಾಸಿಸುತ್ತಿದ್ದವು. ಅವರೆಲ್ಲರೂ ಈಗ ಮನೆಗೆ ಮರಳಿದ್ದಾರೆ.

ನಾನು ಧರ್ಮಪುರಿಯವಳು. 15 ವರ್ಷಗಳಿಂದ ಎರ್ನಾಕುಲಂನಲ್ಲಿ ವಾಸಿಸುತ್ತಿದ್ದೇನೆ. ಈಗ ನಾನು ಊರಿಗೆ ಹೋಗಲು ಬಯಸಿದ್ದೇನೆ. ಗೊತ್ತಿಲ್ಲದ ಸ್ಥಳಗಳಲ್ಲಿ ಕೊಲೆಯಾಗುವುದಕ್ಕಿಂತ, ದುಡ್ಡಿಲ್ಲದೇ ಮನೆಯಲ್ಲಿರುವುದೇ ಒಳ್ಳೆಯದು ಅನಿಸಿದೆ’ ಎಂದು ಸುನೀತಾ ಮಣಿ ಎಂಬ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಹೇಳಿದ್ದಾರೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

ಚಿತ್ರಹಿಂಸೆ ನೀಡಿ ಬಲಿ

‘ನತದೃಷ್ಟ ಮಹಿಳೆಯರಾದ ರೋಸ್ಲಿನ್ ಮತ್ತು ಪದ್ಮಾ ಅವರನ್ನು ಹತ್ಯೆ ಮಾಡುವ ಮುನ್ನ ಆರೋಪಿಗಳು ಅವರನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದರು. ಮಹಿಳೆಯೊಬ್ಬರ ದೇಹವನ್ನು 56 ಭಾಗಗಳನ್ನಾಗಿ ಕತ್ತರಿಸಲಾಗಿದೆ. ಈಕೆಯ ದೇಹದ ಭಾಗಗಳು ಮೂರು ಪ್ರತ್ಯೇಕ ಗುಂಡಿಗಳಲ್ಲಿ ಪತ್ತೆಯಾಗಿವೆ’ ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ಸಿ.ಎಚ್. ನಾಗರಾಜು ಮಾಹಿತಿ ನೀಡಿದ್ದಾರೆ.

‘ನರಬಲಿ ನೀಡಿದ ಬಳಿಕ ಆರೋಪಿಗಳು ಮಹಿಳೆಯರ ದೇಹದ ಮಾಂಸವನ್ನು ತಿಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ತನಿಖೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದ್ದಾರೆ.

‘ಪ್ರಕರಣದ ಮುಖ್ಯ ಆರೋಪಿ ಮುಹಮ್ಮದ್ ಶಾಫಿ, ಅಶ್ಲೀಲ ಚಿತ್ರದಲ್ಲಿ ಅಭಿನಯಿಸಿದರೆ ದುಡ್ಡು ನೀಡುವುದಾಗಿ ಈ ಮಹಿಳೆಯರಿಗೆ ಆಮಿಷ ಒಡ್ಡಿ ಅವರನ್ನು ಭಗವಲ್ ಸಿಂಗ್ ಮತ್ತು ಆತನ ಹೆಂಡತಿ ಲೈಲಾ ಅವರ ಬಳಿಗೆ ಕರೆತಂದಿದ್ದ. ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗಲು ಮಹಿಳೆಯರನ್ನು ನರಬಲಿ ನೀಡುವಂತೆ ಸಿಂಗ್ ದಂಪತಿಗೆ ಶಾಫಿ ಸಲಹೆ ನೀಡಿದ್ದ’ ಎಂದೂ ಪೊಲೀಸರು ವಿವರಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಜೂನ್ ತಿಂಗಳಿನಲ್ಲಿ ರೋಸ್ಲಿನ್ ಹಾಗೂ ಸೆಪ್ಟೆಂಬರ್‌ನಲ್ಲಿ ಪದ್ಮಾ ನಾಪತ್ತೆಯಾಗಿದ್ದರು. ಇಬ್ಬರನ್ನೂ ಕ್ರಮವಾಗಿ ಜೂನ್ 6 ಮತ್ತು ಸೆಪ್ಟೆಂಬರ್ 26ರಂದು ಹತ್ಯೆ ಮಾಡಲಾಗಿದೆ. ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಈ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.

ಮಹಿಳೆಯರಿಬ್ಬರ ಫೋನ್‌ಗಳು ಶಾಫಿ ಎಂಬಾತನ ಬಳಿ ದೊರೆತಿದ್ದವು. ಮಹಿಳೆಯರನ್ನು ಶಾಫಿ ಕಾರಿನಲ್ಲಿ ಕರೆತಂದಿದ್ದು ಸಿಸಿ ಟಿವಿಯ ದೃಶ್ಯಾವಳಿಯಲ್ಲಿ ಪತ್ತೆಯಾಗಿದ್ದು, ಇದನ್ನು ಅನುರಿಸರಿಸಿ, ತನಿಖೆಯ ಭಾಗವಾಗಿ ಪೊಲೀಸರು ಪತ್ತನಂತಿಟ್ಟ ಜಿಲ್ಲೆಯ ಎಲಂಥೂರಿನ ಸಿಂಗ್ ದಂಪತಿ ಮನೆಗೆ ಹೋದಾಗ ಅವರು ತಮ್ಮ ತಪ್ಪೊಪ್ಪಿಕೊಂಡಿದ್ದಾರೆ.

‘ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಹುಡುಕಲು ಶಾಫಿ ತನ್ನ ಪತ್ನಿಯ ಫೇಸ್‌ಬುಕ್ ಖಾತೆಯನ್ನು ಬಳಸುತ್ತಿದ್ದ. ಹೀಗೆ ಹುಡುಕುತ್ತಿದ್ದಾಗ ಸಿಂಗ್–ಲೈಲಾ ದಂಪತಿ ಪರಿಚಯವಾಗಿದ್ದರು. 15 ವರ್ಷಗಳಲ್ಲಿ ಶಾಫಿ ವಿರುದ್ಧ 10 ಪ್ರಕರಣಗಳು ದಾಖಲಾಗಿದ್ದು, ಕೆಲ ಪ್ರಕರಣಗಳಲ್ಲಿ ಮಹಿಳೆಯರನ್ನು ಒಂದೇ ಮಾದರಿಯಲ್ಲಿ ಹತ್ಯೆ ಮಾಡಲಾಗಿದೆ‌’ ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ಸಿ.ಎಚ್. ನಾಗರಾಜು ತಿಳಿಸಿದ್ದಾರೆ.

ಶೀಘ್ರವಾಗಿ ಶ್ರೀಮಂತರಾಗುವ ಆಸೆಯಿಂದ ಕೇರಳದ ದಂಪತಿ, ಇಬ್ಬರು ಮಹಿಳೆಯರನ್ನು ವಿರೂಪಗೊಳಿಸಿ ನರಬಲಿ ನೀಡಿರುವ ಜತೆಗೆ, ನರಮಾಂಸವನ್ನೇ ಭಕ್ಷಿಸಿರಬಹುದು ಎಂದು ಬುಧವಾರ ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT