ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ–ಗುಂಡರ್‌ ನದಿ ಜೋಡಣೆ ಯೋಜನೆಗೆ ತಮಿಳುನಾಡು ಭೂಮಿಪೂಜೆ

₹ 14,400 ಕೋಟಿ ವೆಚ್ಚದ ಯೋಜನೆ
Last Updated 21 ಫೆಬ್ರುವರಿ 2021, 8:36 IST
ಅಕ್ಷರ ಗಾತ್ರ

ಪುದುಕೊಟ್ಟೈ, ತಮಿಳುನಾಡು: ಕಾವೇರಿ, ವೈಗೈ ಹಾಗೂ ಗುಂಡರ್‌ ನದಿಗಳನ್ನು ಜೋಡಿಸುವ ₹ 14,400 ಕೋಟಿ ವೆಚ್ಚದ ಮಹತ್ವಾಕಾಂಕ್ಷೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ತಮಿಳುನಾಡು ಸರ್ಕಾರ ಭಾನುವಾರ ಭೂಮಿಪೂಜೆ ನೆರವೇರಿಸಿತು.

ಒಣಭೂಮಿಯೇ ಹೆಚ್ಚಾಗಿರುವ ರಾಜ್ಯದ ದಕ್ಷಿಣ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 6,000 ಘನ ಅಡಿಗಳಷ್ಟು ಹೆಚ್ಚುವರಿ ನೀರನ್ನು ಈ ಯೋಜನೆಯಡಿ ತಿರುಗಿಸಲಾಗುತ್ತದೆ.

ಜಿಲ್ಲೆಯ ಕುಣತ್ತೂರು ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಭೂಮಿಪೂಜೆ ನೆರವೇರಿಸಿದರು.

ಮೊದಲ ಹಂತದಲ್ಲಿ ₹ 6,941 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಯೋಜನೆಯಡಿ ಒಟ್ಟು 262 ಕಿ.ಮೀ. ಉದ್ದದ ಕಾಲುವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಈ ಪೈಕಿ ಮೊದಲ ಹಂತದಲ್ಲಿ 118 ಕಿ.ಮೀ. ಉದ್ದದ ಕಾಲುವೆಯನ್ನು ನಿರ್ಮಿಸಲಾಗುತ್ತದೆ. ಕಾವೇರಿ ನದಿಯಲ್ಲಿನ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಗುಂಡರ್‌ ನದಿಗೆ ಹರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರವಾಹ ಕಂಡು ಬಂದ ದಿನಗಳಲ್ಲಿ ಕಾವೇರಿ, ವೈಗೈ, ದಕ್ಷಿಣ ವೆಲ್ಲಾರ್‌ ನದಿಗಳಲ್ಲಿನ ಹೆಚ್ಚುವರಿ ನೀರನ್ನು ಈ ಕಾಲುವೆಗಳ ಮೂಲಕ ಗುಂಡರ್‌ ನದಿಗೆ ಹರಿಸಲಾಗುವುದು. ಇದರಿಂದ ದಕ್ಷಿಣ ತಮಿಳುನಾಡಿನ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯವಾಗುವುದು.

ತಿರುಚಿರಾಪಳ್ಳಿ, ಪುದುಕೊಟ್ಟೈ, ಶಿವಗಂಗಾ, ವಿರುಧುನಗರ, ರಾಮನಾಥಪುರಂ ಹಾಗೂ ಕರೂರು ಜಿಲ್ಲೆಗಳಿಗೆ ಈ ಯೋಜನೆಯಿಂದ ಅನುಕೂಲವಾಗುವುದು. ಈ ಜಿಲ್ಲೆಗಳಲ್ಲಿರುವ ಸಾವಿರಕ್ಕೂ ಅಧಿಕ ಕೆರೆಗಳ ಪುನಶ್ಚೇತನ ಸಾಧ್ಯವಾಗಲಿದೆ ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT