ಗುರುವಾರ , ಫೆಬ್ರವರಿ 25, 2021
27 °C
ದೆಹಲಿ ಹೊರವರ್ತುಲ ರಸ್ತೆಯಲ್ಲಿ ರ‍್ಯಾಲಿಗೆ ರೈತರ ಪಟ್ಟು: ಪೊಲೀಸರ ಮನವೊಲಿಕೆಗೆ ಹಿಂದೆ ಸರಿಯದ ಅನ್ನದಾತ

ಟ್ರ್ಯಾಕ್ಟರ್ ರ‍್ಯಾಲಿ: ಫಲ ಕೊಡದ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜನವರಿ 26ರಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ಸಂಬಂಧ ಪೊಲೀಸರು ಹಾಗೂ ರೈತರ ನಡುವೆ ಗುರುವಾರ ನಡೆದ ಎರಡನೇ ಸುತ್ತಿನ ಮಾತುಕತೆಯೂ ಬಿಕ್ಕಟ್ಟಿನಲ್ಲಿ ಅಂತ್ಯಗೊಂಡಿದೆ. ಸಾಕಷ್ಟು ವಾಹನ ದಟ್ಟಣೆಯ ಹೊರವರ್ತುಲ ರಸ್ತೆಯಲ್ಲಿ ರ‍್ಯಾಲಿ ನಡೆಸುತ್ತೇವೆ ಎಂದು ರೈತರು ಪಟ್ಟು ಹಿಡಿದು ಕೂತಿದ್ದರಿಂದ ಮಾತುಕತೆ ಫಲ ನೀಡಲಿಲ್ಲ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್, ರೈತ ನಾಯಕರು ತಮ್ಮ ಟ್ರ್ಯಾಕ್ಟರ್ ರ್‍ಯಾಲಿಯನ್ನು ದೆಹಲಿಯ ಹೊರಗೆ ನಡೆಸಬೇಕು ಎಂದು ಪೊಲೀಸರು ಆಗ್ರಹಿಸುತ್ತಿದ್ದಾರೆ ಎಂದು ಹೇಳಿದರು.

ಹೊರವರ್ತುಲ ರಸ್ತೆ ಬದಲಾಗಿ ಕುಂಡಲಿ–ಮನೇಸರ್–ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸುವಂತೆ ರೈತರ ಮನವೊಲಿಸಲು ಪೊಲೀಸರು ಯತ್ನಿಸಿದರು. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.

ಸಿಂಘು ಗಡಿಯ ಮಂತ್ರಂ ರೆಸಾರ್ಟ್‌ನಲ್ಲಿ ಜಂಟಿ ಪೊಲೀಸ್ ಆಯುಕ್ತ ಎಸ್‌ಎಸ್ ಯಾದವ್ ಅವರು ಸಭೆ ಕರೆದಿದ್ದರು. ಸಭೆಯಲ್ಲಿ ವಿಶೇಷ ಆಯುಕ್ತ ಸಂಜಯ್ ಸಿಂಗ್, ಗುಪ್ತಚರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ದೇಪೇಂದ್ರ ಪಾಠಕ್ ಮತ್ತು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ರ‍್ಯಾಲಿ ಮಾರ್ಗ ಮತ್ತು ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ರೈತ ಮುಖಂಡರು ಮುಖಂಡರು ಮತ್ತು ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರ ನಡುವೆ ವಿಜ್ಞಾನ ಭವನದಲ್ಲಿ ಮೊದಲ ಸುತ್ತಿನ ಸಭೆ ಬುಧವಾರ ನಡೆದಿತ್ತು. ಆದರೆ, ಸಾಕಷ್ಟು ವಾಹನ ದಟ್ಟಣೆ ಇರುವ ಹೊರವರ್ತುಲ ರಸ್ತೆಯ ಬದಲು ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಮಾರ್ಗ ಬದಲಾಯಿಸುವ ಪೊಲೀಸರ ಪ್ರಸ್ತಾವವನ್ನು ರೈತ ಸಂಘಗಳು ತಿರಸ್ಕರಿಸಿದ್ದವು ಎಂದು ಮೂಲಗಳು ತಿಳಿಸಿವೆ.

₹50 ಸಾವಿರ ಕೋಟಿ ನಷ್ಟ

ರೈತರ ಪ್ರತಿಭಟನೆಯಿಂದಾಗಿ ದೆಹಲಿ–ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಸುಮಾರು ₹50 ಸಾವಿರ ಕೋಟಿ ಮೌಲ್ಯದ ವ್ಯಾಪಾರ ನಷ್ಟವಾಗಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ. 

ವಿವಾದಾತ್ಮಕ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿ ಇರಿಸುವ ಪ್ರಸ್ತಾವವನ್ನು ಸರ್ಕಾರವು ಮುಂದಿಟ್ಟಿದೆ. ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂಬ ಮನಸ್ಸು ಸರ್ಕಾರಕ್ಕೆ ಇದೆ ಎಂಬುದನ್ನು ಇದು ತೋರಿಸುತ್ತದೆ. ಹಾಗಾಗಿ, ರೈತರು ಈ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್‌ವಾಲ್‌ ಹೇಳಿದ್ದಾರೆ. 

ಸರ್ಕಾರವು ಪ್ರಸ್ತಾವಿಸಿರುವ ಜಂಟಿ ಸಮಿತಿಯಲ್ಲಿ ವರ್ತಕರ ಪ್ರತಿನಿಧಿಗಳಿಗೂ ಪ್ರಾತಿನಿಧ್ಯ ಇರಬೇಕು. ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಸರ್ಕಾರದ ಶ್ರಮವು ವ್ಯರ್ಥವಾಗಲಿದೆ ಎಂದು ಅವರು ಹೇಳಿದ್ದಾರೆ. 

ಬಿಹಾರದಲ್ಲಿ ಪ್ರತಿಭಟನೆ: ತೇಜಸ್ವಿ

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಪಕ್ಷ ಮೈತ್ರಿಕೂಟವು ಬಿಹಾರದಲ್ಲಿ ಭಾರಿ ಪ್ರತಿಭಟನೆಯನ್ನು ಸದ್ಯದಲ್ಲೇ ಹಮ್ಮಿಕೊಳ್ಳಲಿದೆ. ರಾಜ್ಯವ್ಯಾಪಿ ಮಾನವ ಸರಪಣಿಯನ್ನು ಒಂದು ವಾರದ ಬಳಿಕ ರಚಿಸಲಾಗುವುದು ಎಂದು ಮೈತ್ರಿಕೂಟದ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರ ಜನ್ಮದಿನದ ಪ್ರಯುಕ್ತ ಇದೇ 24ರಿಂದ ಕಿಸಾನ್‌ ಜಾಗೃತಿ ಸಪ್ತಾಹ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಮಹಾಮೈತ್ರಿಕೂಟದಲ್ಲಿರುವ ಐದೂ ಪಕ್ಷಗಳ ಮುಖಂಡರು ಕೃಷಿ ಕಾಯ್ದೆಗಳ ವಿರುದ್ಧ ಬೀದಿಗಿಳಿಯಲಿದ್ದಾರೆ. ಮಹಾತ್ಮ ಗಾಂಧಿ ಹುತಾತ್ಮ ದಿನವಾದ ಜ. 30ರಂದು ಮಾನವ ಸರಪಣಿ ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ. 

₹5 ಲಕ್ಷ ಪರಿಹಾರ

ಲೂಧಿಯಾನ ವರದಿ: ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡ ಲೂಧಿಯಾನಾದ ನಾಲ್ವರು ರೈತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನಿರ್ದೇಶನದ ಮೇರೆಗೆ ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವರಿಂದರ್ ಕುಮಾರ್ ಶರ್ಮಾ ಹೇಳಿದ್ದಾರೆ.

ಶೀತ ಹವಾಮಾನ ಮತ್ತು ಮಳೆಯನ್ನು ಲೆಕ್ಕಿಸದೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ದೆಹಲಿಯ ವಿವಿಧ ಗಡಿ ಕೇಂದ್ರಗಳಲ್ಲಿ 57 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವಾರು ರೈತರು ಹೃದಯಾಘಾತ ಮತ್ತು ರಸ್ತೆ ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ಲೂಧಿಯಾನದ ಐವರು ಮೃತಪಟ್ಟಿದ್ದು, ನಾಲ್ವರಿಗೆ ಈಗ ಪರಿಹಾರ ನೀಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು