ತ್ರಿಶೂಲ ಅಥವಾ ಉದಯ ಸೂರ್ಯ ? ಚಿಹ್ನೆ ಕೇಳಿದ ಉದ್ಧವ್ ಬಣ!

ಮುಂಬೈ: ಶಿವಸೇನಾದ ಪಕ್ಷದ ಹೆಸರು ಮತ್ತು ಚಿಹ್ನೆ ಬಳಸದಂತೆ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂದೆ ಬಣಗಳಿಗೆ ಚುನಾವಣಾ ಆಯೋಗವು ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಎರಡು ಪ್ರತಿಸ್ಪರ್ಧಿ ರಾಜಕೀಯ ಬಣಗಳ ನಡುವೆ ಚಿಹ್ನೆ ಆಯ್ಕೆ ಸಂಬಂಧ ಪೈಪೋಟಿ ಎದುರಾಗಿದೆ.
ಬಿಲ್ಲುಬಾಣದ ಚಿಹ್ನೆ ಸಿಗದ ಹಿನ್ನೆಲೆಯಲ್ಲಿ ಈಗ ಉದ್ಧವ್ ಬಣವು ಮೂರು ಪರ್ಯಾಯ ಚಿಹ್ನೆ ಮತ್ತು ಹೆಸರುಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಿದೆ ಎಂದು ವರದಿಯಾಗಿದೆ.
ಇದರಲ್ಲಿ ತ್ರಿಶೂಲ, ಪಂಜು ಅಥವಾ ಉದಯ ಸೂರ್ಯ ಚಿಹ್ನೆಗಳು ಒಳಗೊಂಡಿವೆ. ಈ ಪೈಕಿ ತ್ರಿಶೂಲಕ್ಕೆ ಮೊದಲ ಆದ್ಯತೆ ನೀಡಿದೆ.
ಇದನ್ನೂ ಓದಿ: ಶಿವಸೇನಾ ಪಕ್ಷದ ಹೆಸರು, ಚಿಹ್ನೆ ಬಳಸದಂತೆ ಠಾಕ್ರೆ, ಶಿಂದೆ ಬಣಕ್ಕೆ ನಿರ್ಬಂಧ
ಶಿವಸೇನಾ (ಬಾಳಾಸಾಹೇಬ್ ಠಾಕ್ರೆ), ಶಿವಸೇನಾ (ಪ್ರಬೋಧಂಕರ್ ಠಾಕ್ರೆ) ಅಥವಾ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸೇರಿದಂತೆ ಶಿವಸೇನಾಗೆ ಸಂಬಂಧಿಸಿದ ಯಾವುದೇ ಹೆಸರನ್ನು ಚುನಾವಣಾ ಆಯೋಗವು ನೀಡಿದರೆ ಉದ್ಧವ್ ಠಾಕ್ರೆ ಅವರ ಬಣವು ಅದನ್ನು ಒಪ್ಪಿಕೊಳ್ಳಲಿದೆ ಎಂದು ಸಂಸದ ಅರವಿಂದ ಸಾವಂತ್ ತಿಳಿಸಿದ್ದಾರೆ.
ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆ ಸಮೀಪಿಸುತ್ತಿದ್ದಂತೆಯೇ ಚಿಹ್ನೆ ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.