ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26/11: ಮುಂಬೈ ದಾಳಿಯ ದಿನಾಂಕವೇ ಉದಯಪುರ ಟೈಲರ್‌ ಹತ್ಯೆ ಆರೋಪಿಯ ಬೈಕ್‌ ಸಂಖ್ಯೆ

Last Updated 1 ಜುಲೈ 2022, 12:29 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‌ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಆರೋಪಿಗಳ ಪೈಕಿ ಒಬ್ಬನ ಬೈಕ್ ನೋಂದಣಿ ಸಂಖ್ಯೆ 26/11ರ ಮುಂಬೈ ದಾಳಿಯ ದಿನಾಂಕವನ್ನೇ ಹೊಂದಿರುವುದು ತಿಳಿದುಬಂದಿದೆ.

ಆರೋಪಿ ರಿಯಾಜ್‌ ಅಖ್ತಾರಿಯ ಬೈಕ್ ‘ಆರ್‌ಜೆ 27 ಎಎಸ್ 2611’ ನೋಂದಣಿ ಸಂಖ್ಯೆ ಹೊಂದಿದೆ. ಮುಂಬೈ ದಾಳಿಯ ಸ್ಮರಣಾರ್ಥವಾಗಿಯೇ ಆತ ಈ ಸಂಖ್ಯೆಯನ್ನೇ ನೋಂದಾಯಿಸಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ಆರೋಪಿಯು ಬೈಕ್ ಖರೀದಿಸಿರುವುದಕ್ಕೆ ಸಂಬಂಧಿಸಿ ಹಾಗೂ ವಿಶೇಷ ನೋಂದಣಿ ಸಂಖ್ಯೆ ಪಡೆದಿರುವ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಹೆಚ್ಚುವರಿಯಾಗಿ ₹5,000 ಪಾವತಿಸಿ 2013ರಲ್ಲಿ ಆತ ವಿಶೇಷ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿದ್ದ ಎಂದೂ ಕೆಲವು ವರದಿಗಳು ಉಲ್ಲೇಖಿಸಿವೆ.

ಕನ್ಹಯ್ಯ ಲಾಲ್‌ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿದ ಬಳಿಕ ಆರೋಪಿಗಳು ‘ಆರ್‌ಜೆ 27 ಎಎಸ್ 2611’ ನೋಂದಣಿ ಸಂಖ್ಯೆಯ ಬೈಕ್‌ನಲ್ಲೇ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬೈಕ್ ನೋಂದಣಿ ಸಂಖ್ಯೆ ಹಿಂದೆ ಮುಂಬೈ ದಾಳಿಯ ಪ್ರಭಾವ ಇರುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಪ್ರವಾದಿ ಮಹಮ್ಮದ್‌ ಅವರ ಅವಹೇಳನ ಮಾಡಿದ್ದ ಬಿಜೆಪಿಯ ಮಾಜಿ ವಕ್ತಾರೆನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದರು ಎನ್ನುವ ಕಾರಣಕ್ಕೆ ಟೈಲರ್‌ ಕನ್ಹಯ್ಯ ಅವರ ಶಿರಚ್ಛೇದ ಮಾಡಲಾಗಿತ್ತು.ಹಂತಕರಲ್ಲಿ ಒಬ್ಬನಾದ ಮಹಮ್ಮದ್ ರಿಯಾಜ್‌ ಅನ್ಸಾರಿ ಪಾಕ್‌ ಮೂಲದ ಭಯೋತ್ಪಾದಕ ಗುಂಪುಗಳ ಜತೆಗೆ ನಂಟು ಹೊಂದಿದ್ದಾನೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT