ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಧವ್‌ಗೆ ಅಗ್ನಿಪರೀಕ್ಷೆ: ಬಹುಮತ ಸಾಬೀತಿಗೆ ನಾಳೆಯೇ ಅಧಿವೇಶನ– ರಾಜ್ಯಪಾಲರ ಆದೇಶ

ಅಕ್ಷರ ಗಾತ್ರ

ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರವು ನಾಳೆ ಬಹುಮತ ಸಾಬೀತು ಪಡಿಸಬೇಕಿದೆ.

ಸಿಎಂ ಉದ್ಧವ್ ಠಾಕ್ರೆ ಅವರು ವಿಶ್ವಾಸ ಮತ ಯಾಚಿಸುವ ಏಕೈಕ ಅಜೆಂಡಾದೊಂದಿಗೆ ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

'ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಜೂನ್ 30 ರಂದು (ಗುರುವಾರ) ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಯ ವಿಶ್ವಾಸ ಮತದ ಏಕೈಕ ಕಾರ್ಯಸೂಚಿಯೊಂದಿಗೆ ಕರೆಯಬೇಕು. ಯಾವುದೇ ಸಂದರ್ಭದಲ್ಲಿ ಸಂಜೆ 5 ಗಂಟೆಯೊಳಗೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಬೇಕು. ಸದನದ ಕಲಾಪವನ್ನು ದೂರದರ್ಶನದಲ್ಲಿನೇರ ಪ್ರಸಾರ ಮಾಡಬೇಕು ಮತ್ತು ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಶಿವಸೇನೆಯ ಸುಮಾರು 39 ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡೆದಿದ್ದು, ಗುವಾಹಟಿಗೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ದೇವೇಂದ್ರ ಫಡಣವಿಸ್ ನೇತೃತ್ವದ ಬಿಜೆಪಿ ನಿಯೋಗ, ಬಹುಮತ ಸಾಬೀತಿಗೆ ಸಿಎಂ ಉದ್ಧವ್ ಠಾಕ್ರೆಗೆ ಸೂಚಿಸುವಂತೆ ಮನವಿ ಮಾಡಿತ್ತು.

‘ನಾವು ಇ-ಮೇಲ್ ಕಳುಹಿಸಿದ್ದೇವೆ ಮತ್ತು ಖುದ್ದು ರಾಜ್ಯಪಾಲರನ್ನು ಭೇಟಿ ಮಾಡಿ ಪತ್ರವನ್ನು ನೀಡಿದ್ದೇವೆ. ಶಿವಸೇನೆಯ 39 ಶಾಸಕರು ಹೊರಗಿದ್ದಾರೆ (ಗುವಾಹಟಿಯಲ್ಲಿ) ಮತ್ತು ಅವರು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮುಂದುವರಿಯಲು ನಿರಾಕರಿಸಿದ್ದಾರೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಇದರರ್ಥ ಅವರು(ಬಂಡಾಯ ಶಾಸಕರು) ಎಂವಿಎ ಜೊತೆ ಇರಲು ಬಯಸುವುದಿಲ್ಲ. ಅಂದರೆ, ಸರ್ಕಾರ ಬಹುಮತ ಕಳೆದುಕೊಂಡಿದೆ. ಆದ್ದರಿಂದ, ಬಹುಮತ ಸಾಬೀತುಪಡಿಸುವ ಅಗತ್ಯವಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಮಂಗಳವಾರ ಹೇಳಿದ್ದರು.

ಈ ಮಧ್ಯೆ, ನಿನ್ನೆ, ಠಾಕ್ರೆ ಅವರು ಏಕನಾಥ್ ಶಿಂಧೆ ಬೆಂಬಲಿತ ಬಂಡಾಯ ಶಾಸಕರನ್ನು ಗುವಾಹಟಿಯಿಂದ ಹಿಂದಿರುಗುವಂತೆ ಕೋರಿದ್ದರು. ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದು ಭಾವನಾತ್ಮಕ ಮನವಿ ಮಾಡಿದ್ದರು.

‘ಶಿವಸೇನೆ ಪಕ್ಷದ ಮುಖ್ಯಸ್ಥ ಮತ್ತು ಕುಟುಂಬದ ಮುಖ್ಯಸ್ಥನಾಗಿ, ನಾನು ಇನ್ನೂ ನಿಮ್ಮ ಬಗ್ಗೆ ಚಿಂತಿಸುತ್ತಿದ್ದೇನೆ. ಮಾತುಕತೆಗಾಗಿ ಇಲ್ಲಿಗೆ ಬನ್ನಿ, ಮಾತುಕತೆಯ ಮೂಲಕ ನಾವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬಹುದು’ಎಂದು ಠಾಕ್ರೆ ಶಿವಸೇನಾ ಪಕ್ಷದ ಕಚೇರಿಯ ಮೂಲಕ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT