ಭಾನುವಾರ, ಮಾರ್ಚ್ 26, 2023
23 °C

ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಬೆಂಬಲಿಸಲು ಒಪ್ಪಿಕೊಂಡ ಉದ್ಧವ್ ಠಾಕ್ರೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ; ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಶಿವ ಸೇನಾದಿಂದ ಬೆಂಬಲಿಸುವುದಕ್ಕೆ ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಒಪ್ಪಿಕೊಂಡಿದ್ದಾರೆ.

ಮುರ್ಮು ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಶಿವ ಸೇನಾದ 22 ಸಂಸದರಲ್ಲಿ (19 ಲೋಕಸಭೆ, 3 ರಾಜ್ಯಸಭೆ ಸದಸ್ಯರು) 16 ಸಂಸದರು ಠಾಕ್ರೆ ಅವರ ಮೇಲೆ ಒತ್ತಡ ಹೇರಿದ್ದರು.

ಇದಕ್ಕೆ ಠಾಕ್ರೆ ಅವರು ಇಂದು ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಕಳೆದ ವಾರವಷ್ಟೆ ಶಿವ ಸೇನಾದ 40 ಕ್ಕೂ ಅಧಿಕ ಶಾಸಕರು ಬಂಡಾಯ ಎದ್ದು ಠಾಕ್ರೆ ಸರ್ಕಾರವನ್ನು ಪದಚ್ಯುತಗೊಳಿಸಿದ್ದರು. ಏಕನಾಥ ಶಿಂಧೆ ಸಿಎಂ ಆಗಿದ್ದರು.

ಅದಕ್ಕೂ ಮೊದಲು ಲೋಕಸಭೆಯ ವಿರೋಧ ಪಕ್ಷಗಳು ಒಮ್ಮತದಿಂದ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಬೆಂಬಲಿಸಿದ್ದರು. ಇದಕ್ಕೆ ಶಿವ ಸೇನಾ ಕೂಡ ಒಪ್ಪಿಗೆ ಸೂಚಿಸಿತ್ತು. ಇದೀಗ ಶಿವ ಸೇನೆ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಂತಾಗಿದೆ.

ಮುರ್ಮು ಅವರು ಒಬ್ಬ ಮಹಿಳೆ ಹಾಗೂ ಆದಿವಾಸಿ ಸಮುದಾಯಕ್ಕೆ ರಾಷ್ಟ್ರಪತಿ ಹುದ್ದೆ ಸಿಗುವುದು ಹೆಮ್ಮೆಯ ವಿಷಯ. ಶೇ 10 ರಷ್ಟು ಆದಿವಾಸಿ ಜನಾಂಗವನ್ನು ಹೊಂದಿರುವ ಮಹಾರಾಷ್ಟ್ರದಿಂದ ಅವರನ್ನು ನಾವು ಬೆಂಬಲಿಸಬೇಕು ಎಂಬ ಒತ್ತಾಸೆಯನ್ನು ಠಾಕ್ರೆ ಮೇಲೆ ಸೇನಾ ಸಂಸದರು ಹೇರಿದ್ದರು.

22 ಸಂಸದರಲ್ಲಿ 6 ಸಂಸದರು ಏಕನಾಥ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಜುಲೈ 18 ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಮುರ್ಮು ಅವರ ಆಯ್ಕೆ ನಿಚ್ಚಳವಾಗಿದೆ. ಅವರಿಗೆ ಜೆಡಿಎಸ್, ಟಿಡಿಪಿ ಸೇರಿದಂತೆ ಅನೇಕ ಪಕ್ಷಗಳು ಬೆಂಬಲ ಸೂಚಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು