ಬುಧವಾರ, ಡಿಸೆಂಬರ್ 7, 2022
22 °C

ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಬಿಡುಗಡೆಯಾಗಿದ್ದೇನೆ: ಬಿಜೆಪಿ ನಾಯಕಿ ಉಮಾ ಭಾರತಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಮ ಮಂದಿರ ಚಳುವಳಿಯಲ್ಲಿ ಮಂಚೂಣಿಯಲ್ಲಿದ್ದ ಬಿಜೆಪಿಯ ಫೈರ್‌ಬ್ರ್ಯಾಂಡ್‌ ನಾಯಕಿ, ಉಮಾ ಭಾರತಿ ‌ಅವರು ಕುಟುಂಬದೊಂದಿಗಿನ ಸಂಬಂಧವನ್ನೆಲ್ಲಾ ಕಡಿದುಕೊಂಡಿರುವುದಾಗಿ ಘೋಷಣೆ ಮಾಡಿದ್ದಾರೆ. 

ಅಲ್ಲದೇ ಇನ್ನು ಮುಂದೆ ‘ದೀದಿ ಮಾ‘ ಎಂದಷ್ಟೇ ಕರೆಸಿಕೊಳ್ಳುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಎಲ್ಲಾ ವೈಯಕ್ತಿಕ ಸಂಬಂಧ ಹೆಸರನ್ನೆಲ್ಲಾ ತ್ಯಜಿಸಬೇಕು ಎಂದು ನನಗೆ  ಜೈನ ಮುನಿ ಆಚಾರ್ಯ ವಿದ್ಯಾಸಾಗರ್‌ ಅವರು ಆದೇಶ ಮಾಡಿದ್ದಾರೆ. ಹೀಗಾಗಿ ನಾನು ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದೇನೆ. ಇನ್ನು ಮುಂದೆ ‘ದೀದಿ ಮಾ‘ ಎಂದಷ್ಟೇ ಕರೆಸಿಕೊಳ್ಳಲಿದ್ದೇನೆ. ಇಡೀ ಜಗತ್ತು ಇನ್ನು ಮುಂದೆ ನನ್ನ ಕುಟುಂಬವಾಗಿರಲಿದೆ‘ ಎಂದು ‌ಅವರು ಹೇಳಿದ್ದಾರೆ.

1. मेरी संन्यास दीक्षा के समय पर मेरे गुरु ने मुझसे एवं मैंने अपने गुरु से 3 प्रश्न किए उसके बाद ही मेरी संन्यास की दीक्षा हुई।

‘ನಾನು ಸನ್ಯಾಸ ದೀಕ್ಷೆ ತೆಗೆದುಕೊಂಡ 30 ವ‌ರ್ಷಗಳ ಬಳಿಕ ವಿದ್ಯಾಸಾಗರ್‌ ಅವರ ಮಾತನ್ನು ಪಾಲಿಸಲು ಆರಂಭಿಸಿದ್ದೇನೆ. 2022ರ ಮಾರ್ಚ್‌ 17ರಂದು ಎಲ್ಲಾ ಸನ್ಯಾಸಿಗಳ ಸಮ್ಮುಖದಲ್ಲಿ ನನಗೆ ಅವರು ಆದೇಶ ಮಾಡಿದ್ದಾರೆ. ಅಂದಿನಿಂದ ನಾನು ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು, ಬಿಡುಗಡೆಯಾಗಿದ್ದೇನೆ. ನನ್ನ ಪ‍್ರಪಂಚ ‌ಹಾಗೂ ಕುಟುಂಬ ಈಗ ಮತ್ತಷ್ಟು ವಿಸ್ತಾರವಾಗಿದೆ.  ನಾನೀಗ ಇಡೀ ವಿಶ್ವ ಸಮುದಾಯದ ‘ದೀದಿ ಮಾ‘. ನನಗೆ ಯಾವುದೇ ವೈಯಕ್ತಿಕ ಕುಟುಂಬಗಳು ಇಲ್ಲ‘ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಬೇಸರ

ಇನ್ನು ಸರಣಿ ಟ್ವೀಟ್‌ಗಳಲ್ಲಿ ಬಿಜೆ‍ಪಿ ವಿರುದ್ಧವೂ ಅವರು ಅಸಮಾಧಾನ ಹೊರ ಹಾಕಿದ್ದಾರೆ. ‘ನನ್ನ ಕುಟುಂಬ, ನನ್ನ ಸಹೋದರರು,  ಸೋದರಳಿಯರು, ಸೊಸೆಯಂದಿರು ತಮ್ಮ ಜೀವವನ್ನು ಒತ್ತೆ ಇಟ್ಟು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಸುಳ್ಳು ಮೊಕದ್ದಮೆಗಳಿಂದ ನಾನು ಬಸವಳಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳಿಂದಲೂ, ಶೋಷಣೆ ‌ಹಾಗೂ ಹಲವು ಕಷ್ಟಗಳನ್ನು ಅನುಭವಿಸಿದೆ‘ ಎಂದು ಅವರು ಹೇಳಿಕೊಂಡಿದ್ದಾರೆ.

‘ಪೋಷಕರಿಂದ ನನಗೆ ಸಿಕ್ಕಿದ ಅತ್ಯಮೂಲ್ಯ ಮೌಲ್ಯಗಳು, ಗುರುಗಳಿಂದ ಲಭಿಸಿದ ಸಲಹೆಗಳು, ನನ್ನ ಜಾತಿ ಹಾಗೂ ಕುಲದ ಗೌರವ, ನನ್ನ ಪಕ್ಷದ ತತ್ವ ಸಿದ್ಧಾಂತ, ದೇಶದ ಕರ್ತವ್ಯ ಮುಂತಾದವುಗಳಿಂದ ನನ್ನನ್ನು ನಾನು ಬಿಡಿಸಿಕೊಳ್ಳಲಾರೆ‘ ಎಂದು ಅವರು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಉಮಾ ಭಾರತಿ ಅವರು, ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಕೆಲ ವರ್ಷಗಳಿಂದ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು