ಅಹಮದಾಬಾದ್: ಊನಾ ದಲಿತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಸಿ ಟಿವಿ ದೃಶ್ಯಾವಳಿ, ವಿಡಿಯೊ ಕ್ಲಿಪ್ಲಿಂಗ್‌ಗಳು ಸೇರಿದಂತೆ ಎಲ್ಲ ಸಾಕ್ಷ್ಯ ಮತ್ತು ದಾಖಲೆಗಳನ್ನು ಸಂತ್ರಸ್ತರಿಗೆ ನೀಡುವಂತೆ ಗುಜರಾತ್ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ದಾಖಲೆಗಳನ್ನು ಒದಗಿಸುವಂತೆ ಕೋರಿ ಸಂತ್ರಸ್ತರಲ್ಲಿ ಒಬ್ಬರಾದ ಅರ್ಜಿದಾರರು ವಿಚಾರಣಾ ನ್ಯಾಯಾಲಯಕ್ಕೆ ಎರಡು ಬಾರಿ ಸಲ್ಲಿಸಿದ್ದ ಮನವಿಯನ್ನು ಈ ಹಿಂದೆ ತಿರಸ್ಕರಿಸಲಾಗಿತ್ತು. ಬಳಿಕ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿ ಸಮೀರ್ ದವೆ ಅವರು, ನ್ಯಾಯಾಲಯದಲ್ಲಿ ಸಲ್ಲಿಸಲಾದ ಮತ್ತು ಪ್ರಾಸಿಕ್ಯೂಷನ್ ಅವರು ಅವಲಂಬಿಸಿರುವ ಸಾಕ್ಷ್ಯದ ಪ್ರತಿಯನ್ನು ಪಡೆಯಲು ಅರ್ಜಿದಾರರಾದ ವಸ್ರಾಂ ಸರವೇಯ ಅವರಿಗೆ ಅವಕಾಶ ಕಲ್ಪಿಸಿದರು. ಸರ್ಕಾರದ ಪರ ವಕೀಲರಾದ ಮಿತೇಶ್ ಅಮಿನ್ ಅವರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ ಬಳಿಕ ನ್ಯಾಯಮೂರ್ತಿ ದವೆ ಅವರು, ಸಂತ್ರಸ್ತರಿಗೆ ಎಲ್ಲ ಸಾಕ್ಷ್ಯ ಮತ್ತು ದಾಖಲೆಗಳನ್ನು ಒದಗಿಸಲು ಆದೇಶ ನೀಡಿದರು.
ಅರ್ಜಿದಾರರ ಪರ ಹಾಜರಾದ ವಕೀಲರಾದ ಮೇಘಾ ಜಾನಿ ಅವರು, ‘ಸಾಮಾನ್ಯವಾಗಿ ಸಂತ್ರಸ್ತರಾಗಿರುವ ಅರ್ಜಿದಾರರಿಗೆ ವಿಶೇಷ ಅಟ್ರಾಸಿಟಿ ಕಾನೂನಿನಡಿಯಲ್ಲಿ ಯಾವುದೇ ಅರ್ಜಿಯಿಲ್ಲದೆ ಎಲ್ಲಾ ಪ್ರಕರಣದ ದಾಖಲೆಗಳನ್ನು ನೀಡಬೇಕಾಗಿತ್ತು. ಆದರೆ, ಅರ್ಜಿಗಳನ್ನು ಎರಡು ಬಾರಿ ತಿರಸ್ಕರಿಸಲಾಗಿದೆ. ಆದ್ದರಿಂದ ಅರ್ಜಿದಾರರು ಹೈಕೋರ್ಟ್ ಅನ್ನು ಸಂಪರ್ಕಿಸಬೇಕಾಯಿತು’ ಎಂದು ವಾದ ಮಂಡಿಸಿದರು.
ಏನಿದು ಪ್ರಕರಣ: ಸಿಂಹದಿಂದ ಹತ್ಯೆಗೀಡಾಗಿದ್ದ ಹಸುವೊಂದರ ಚರ್ಮವನ್ನು ಸುಲಿದಿದ್ದಕ್ಕಾಗಿ, ಸ್ವಯಂಘೋಷಿತ ಗೋರಕ್ಷಕರ ಗುಂಪೊಂದು ಅರ್ಜಿದಾರ ವಸ್ರಾಂ ಸರವೇಯ ಸೇರಿದಂತೆ ಇತರರನ್ನು ವಿವಸ್ತ್ರಗೊಳಿಸಿ ಊನಾ ಪಟ್ಟಣದಲ್ಲಿ ಸಾರ್ವಜಿಕವಾಗಿ ಥಳಿಸಲಾಗಿತ್ತು. ಈ ಘಟನೆಯು 2016ರಲ್ಲಿ ನಡೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.