ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕಾಂಗ ಪಕ್ಷದ ಸಭೆಗೆ ಬಂದ ಮಾಂಡವೀಯ: ಗುಜರಾತ್ ಹೊಸ ಸಿಎಂ ಆಗುವುದು ಪಕ್ಕಾ?

Last Updated 12 ಸೆಪ್ಟೆಂಬರ್ 2021, 10:03 IST
ಅಕ್ಷರ ಗಾತ್ರ

ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿ ಅವರು ರಾಜೀನಾಮೆ ಸಲ್ಲಿಸಿದ ಬಳಿಕ ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ಬಿಜೆಪಿ ಪಾಳಯದಲ್ಲಿ ಜೋರಾಗಿ ನಡೆದಿದೆ.

ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಭಾನುವಾರವೇ ನೂತನ ಮುಖ್ಯಮಂತ್ರಿಯ ಹೆಸರನ್ನುಬಿಜೆಪಿ ಹೈಕಮಾಂಡ್ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ.

ಸದ್ಯದ ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಮನ್‌ಸುಖ್ ಮಾಂಡವೀಯ ಶಾಸಕಾಂಗ ‍ಪಕ್ಷದ ಸಭೆಯಲ್ಲಿ ಭಾಗವಹಿಸಲು ಗಾಂಧಿನಗರಕ್ಕೆ ಬಂದಿದ್ದು, ಅವರು ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಊಹಾಪೋಹಕ್ಕೆ ಪುಷ್ಠಿ ನೀಡಿದೆ.

ಮುಂದಿನ ವರ್ಷ ಡಿಸೆಂಬರ್‌ ವೇಳೆಗೆ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು ಪಾಟೀದಾರ್ ಸಮುದಾಯದವರನ್ನು ಸಿಎಂ ಮಾಡಬೇಕು ಎಂದು ಬಿಜೆಪಿ ಹೈಕಮಾಂಡ್ ಎಣಿಸುತ್ತಿದೆ. ಹೀಗಾಗಿ ಪಾಟೀದಾರ್ ಸಮುದಾಯಕ್ಕೆ ಸೇರಿದ ರಾಜ್ಯಸಭೆ ಸದಸ್ಯ ಮನ್‌ಸುಖ್‌ ಮಾಂಡವೀಯ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೇಂದ್ರದ ವೀಕ್ಷಕರಾಗಿರುವ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಲ್ಹಾದ ಜೋಷಿ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಅವರು ಈಗಾಗಲೇ ಗಾಂಧಿನಗರಕ್ಕೆ ಆಗಮಿಸಿದ್ದಾರೆ.

‘ನೂತನ ಮುಖ್ಯಮಂತ್ರಿ ಬಗ್ಗೆ ಇನ್ನಷ್ಟು ಚರ್ಚೆ ನಡೆಸುವ ಸಲುವಾಗಿ ನಾವು ಇಲ್ಲಿಗೆ ಬಂದಿದ್ದೇವೆ’ ಎಂದು ವಿಮಾನನಿಲ್ದಾಣದಲ್ಲಿ ತೋಮರ್ ಅವರು ಹೇಳಿದರೆ, ‘ನಾವು ಗುಜರಾತ್‌ ನಾಯಕರೊಂದಿಗೆ ಚರ್ಚಿಸಲಿದ್ದೇವೆ, ಬಳಿಕ ಕೇಂದ್ರ ನಾಯಕತ್ವ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ’ ಎಂದು ಪ್ರಲ್ಹಾದ ಜೋಷಿ ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ, ದಾದ್ರ ಮತ್ತು ನಗರ ಹವೇಲಿ, ದಮನ್‌ ಮತ್ತು ಡಿಯು ಆಡಳಿತಾಧಿಕಾರಿ ಪ್ರಫುಲ್‌ ಖೋಡಾ ಪಟೇಲ್‌ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ. ಕೇಂದ್ರ ಸಚಿವರಾದ ಪುರುಷೋತ್ತಮ ರೂಪಾಲ ಅವರ ಹೆಸರು ಕೇಳಿಬರುತ್ತಿದೆ. ಉಪಮುಖ್ಯಮಂತ್ರಿ ನಿತಿನ್ ಪಟೇಲ್‌ ಮತ್ತು ಕೃಷಿ ಸಚಿವ ಆರ್‌.ಸಿ.ಫಾಲ್ದು ಅವರ ಹೆಸರೂ ಕೇಳಿಬರುತ್ತಿದೆ.

ಎರಡು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿರುವ ವಿಜಯ್‌ ರೂಪಾಣಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT