ಗುರುವಾರ , ಮಾರ್ಚ್ 23, 2023
28 °C
2022ರ ಚುನಾವಣೆ ಮೇಲೆ ಕಣ್ಣು; ಪಾಟೀದಾರ್ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ಸಾಧ್ಯತೆ

ಪಾಟೀದಾರ್ ಸಮುದಾಯದ ಪ್ರಬಲ ವ್ಯಕ್ತಿಗೆ ಗುಜರಾತ್ ಮುಖ್ಯಮಂತ್ರಿಗಾದಿ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಈ ಮೂಲಕ, ನಾಯಕತ್ವ ಬದಲಾವಣೆ ಬಗ್ಗೆ ಕೆಲವು ದಿನಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

2022ರ ಕೊನೆಯಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೂಪಾಣಿ ಅವರ ಬದಲಿಗೆ ಪಾಟೀದಾರ್ ಸಮುದಾಯಕ್ಕೆ ಸೇರಿದ ಪ್ರಬಲ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ ಎಂದು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಪಾಟೀದಾರ್ ಸಮುದಾಯವನ್ನು ಓಲೈಸುವ ಉದ್ದೇಶ ಇದರಲ್ಲಿದೆ. 

ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ರೂಪಾಣಿ ಅವರ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ. 

’ಗುಜರಾತ್‌ಗೆ ಹೊಸ ಶಕ್ತಿಯುತ ನಾಯಕತ್ವದ ಅಗತ್ಯವಿದೆ ಎಂದುಕೊಂಡಿದ್ದೇನೆ. ಹೀಗಾಗಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ’ ಎಂದು ರಾಜಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೂಪಾಣಿ ಹೇಳಿದರು.

ಬದಲಾವಣೆ ಹಿಂದಿನ ಕಾರಣಗಳು

ಪಾಟೀದಾರ್ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಬೇಕು ಎಂದು ಸಮುದಾಯದ ಮುಖಂಡ ನರೇಶ್ ಪಟೇಲ್ ಇತ್ತೀಚೆಗೆ ಹೇಳಿದ್ದರು. ಸಮುದಾಯದ ‘ಲೆವುವಾ’ ಮತ್ತು ‘ಕಡವಾ ಪಟೇಲ್ಸ್’ ಪಂಗಡಗಳು ಒಂದಾಗಿ ಇಟ್ಟಿದ್ದ ಈ ಬೇಡಿಕೆಯನ್ನು ನಿರ್ಲಕ್ಷಿಸುವುದು ಬಿಜೆಪಿಗೆ ಸಾಧ್ಯವಿರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿದೆ.

ರೂಪಾಣಿ ಅವರನ್ನು ಬದಲಿಸುವುದರ ಹಿಂದೆ ಇನ್ನೂ ಇತರ ಕಾರಣಗಳಿವೆ. ಅವರಿಗೆ ಇರುವ ‘ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ’ ಎಂಬ ಇಮೇಜ್ ಕೂಡ ಅದರಲ್ಲೊಂದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ‘ಸೂಪರ್ ಸಿಎಂ’ ರೀತಿ ವರ್ತಿಸುತ್ತಿದ್ದು, ಐಎಎಸ್ ಅಧಿಕಾರಿಗಳು ಸಚಿವರಿಗಿಂತ ಪ್ರಬಲವಾಗಿದ್ದಾರೆ ಎಂಬ ಮಾತುಗಳಿಗೆ ಹಾಗೂ ರೂಪಾಣಿ ಅವರು ಕೋವಿಡ್ ನಿರ್ವಹಿಸಿದ ಬಗ್ಗೆ ಜನರಲ್ಲಿ ಕೋಪವಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು