ಸೋಮವಾರ, ಮಾರ್ಚ್ 1, 2021
17 °C
ಮೂವರು ಕೇಂದ್ರ ಸಚಿವರು ಮತ್ತು 40 ರೈತ ಸಂಘಟನೆಗಳ ಪ್ರತಿನಿಧಿಗಳು ಭಾಗಿ

ಮೂರು ಕೃಷಿ ಕಾಯ್ದೆಗಳ ಕುರಿತು ರೈತರು-ಸರ್ಕಾರದ ನಡುವೆ ಇಂದು 9ನೇ ಸುತ್ತಿನ ಮಾತುಕತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರದ ಮೂವರು ಸಚಿವರು ಶುಕ್ರವಾರ (ಇಂದು) ಮಧ್ಯಾಹ್ನ ಒಂಬತ್ತನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಇಲ್ಲಿನ ವಿಜ್ಞಾನ ಭವನದಲ್ಲಿ ಸುಮಾರು 40 ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪೀಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದ ಹಾಗೂ ಕೇಂದ್ರ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ಮಾತುಕತೆ ನಡೆಸಲಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮೂರು ಕಾಯ್ದೆಗಳ ರದ್ದತಿಗೆ ಆಗ್ರಹಿಸಿ, ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳ ಸಾವಿರಾರು ರೈತರು ದೆಹಲಿಯ ವಿವಿಧ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

‘ನಿಗದಿಯಂತೆ ಪ್ರತಿಭಟನಾ ನಿರತ ರೈತ ಸಂಘಗಳ ಮುಖಂಡರೊಂದಿಗೆ ಸರ್ಕಾರ ಒಂಬತ್ತನೇ ಸುತ್ತಿನ ಮಾತುಕತೆ ನಡೆಸುತ್ತಿದೆ. ಈ ಮಾತುಕತೆಯಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ ಎಂಬ ವಿಶ್ವಾಸ ಕೇಂದ್ರ ಸರ್ಕಾರದ್ದು‘ ಎಂದು ತೋಮರ್ ಗುರುವಾರ ಹೇಳಿದ್ದರು.

ಇತ್ತೀಚೆಗೆ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಮುಂದಿನ ಆದೇಶದವರೆಗೆ ಕಾಯ್ದೆಗಳ ಅನುಷ್ಠಾನಕ್ಕೆ ತಡೆ ನೀಡಿತ್ತು. ಜತೆಗೆ, ರೈತರು ಮತ್ತು ಸರ್ಕಾರದ ನಡುವೆ ಉದ್ಭವಿಸಿರುವ ಸಮಸ್ಯೆ ಬಗೆಹರಿಸಲು ನಾಲ್ವರು ಸದಸ್ಯರ ಸಮಿತಿಯನ್ನು ನೇಮಿಸಿತ್ತು. 

ಸುಪ್ರೀಂ ಕೊರ್ಟ್‌ ನೇಮಿಸಿದ್ದ ಸಮಿತಿಯಲ್ಲಿ ಒಬ್ಬರಾಗಿದ್ದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್ ಅವರು, ಸದಸ್ಯತ್ವ ಸ್ಥಾನದಿಂದ ಹಿಂದೆ ಸರಿದಿದ್ದರು. ಉಳಿದಂತೆ ಮಹಾರಾಷ್ಟ್ರದ ಶೆಟ್ಕಾರಿ ಸಂಘಟನಾ ಅಧ್ಯಕ್ಷ ಘನ್ವಾತ್, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಮೋದ್ ಕುಮಾರ್ ಜೋಶಿ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಅವರು ಸಮಿತಿಯ ಇತರ ಮೂವರು ಸದಸ್ಯರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು