ಸೋಮವಾರ, ಡಿಸೆಂಬರ್ 5, 2022
24 °C
ಅವಿವಾಹಿತೆಗೂ ಗರ್ಭಪಾತದ ಹಕ್ಕು

‘ಸುಪ್ರೀಂ’ ಮಹತ್ವದ ಆದೇಶ: ಮಗು ಬೇಕೇ ಬೇಡವೇ ಎಂಬ ನಿರ್ಧಾರ ಮಹಿಳೆಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಅವಿವಾಹಿತ ಮಹಿಳೆಯರು ಸೇರಿದಂತೆ ಎಲ್ಲ ಮಹಿಳೆಯರೂ ಭ್ರೂಣಕ್ಕೆ 24 ವಾರ ತುಂಬುವವರೆಗೆ ಸುರಕ್ಷಿತವಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ಆದೇಶ ನೀಡಿದೆ. ಹೆಂಡತಿಯ ಸಮ್ಮತಿ ಇಲ್ಲದೆ ನಡೆಯುವ ಲೈಂಗಿಕ ಸಂ‍ಪರ್ಕವನ್ನು ಗರ್ಭಪಾತದ ವಿಚಾರಕ್ಕೆ ಸೀಮಿತವಾಗಿ ಅತ್ಯಾಚಾರ ವೆಂದು ಪರಿಗಣಿಸಬಹುದು ಎಂದು ಕೋರ್ಟ್‌ ಹೇಳಿದೆ. 

ಆರೋಗ್ಯದ ಹಕ್ಕು ಅದರಲ್ಲೂ ವಿಶೇಷವಾಗಿ ವ್ಯಕ್ತಿಗಳ ಸಂತಾನೋತ್ಪತ್ತಿ ಆರೋಗ್ಯದ ಹಕ್ಕನ್ನು ರಕ್ಷಿಸುವ ಹೊಣೆಗಾರಿಕೆಯು ಸರ್ಕಾರಕ್ಕೆ ಇದೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ಹೇಳಿದೆ. 

ಸಹಮತದ ಸಂಬಂಧದಿಂದ ಗರ್ಭ ಧರಿಸಿದ ಮಣಿಪುರದ ಅವಿವಾಹಿತ ಮಹಿಳೆಯೊಬ್ಬರಿಗೆ ಗರ್ಭಪಾತದ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ವಿಷಮ ಸಂಬಂಧದಿಂದಾಗುವ ಬಲವಂತದ ಗರ್ಭಧಾರಣೆ ಸೇರಿ ವಿವಿಧ ವಿಚಾರಗಳ ಪರಿಶೀಲನೆ ನಡೆಸಿತ್ತು. 

ಸಂತಾನೋತ್ಪತ್ತಿಯಲ್ಲಿ ಸ್ವಾಯತ್ತೆ, ಘನತೆ ಮತ್ತು ಖಾಸಗಿತನದ ಹಕ್ಕುಗಳು, ಮಗುವನ್ನು ಹೊಂದಬೇಕೋ ಬೇಡವೋ ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನು ಅವಿವಾಹಿತ ಮಹಿಳೆಗೂ ನೀಡುತ್ತವೆ. ಈ ವಿಚಾರದಲ್ಲಿ ವಿವಾಹಿತ ಮಹಿಳೆಗೆ ಇರುವ ಹಕ್ಕುಗಳು ಅವಿವಾಹಿತೆಗೂ ಇರುತ್ತವೆ ಎಂದು ವೈದ್ಯಕೀಯ ಗರ್ಭಪಾತ ಕಾಯ್ದೆ ಮತ್ತು ನಿಯಮಗಳನ್ನು ವ್ಯಾಖ್ಯಾನಿಸಿ ಪೀಠವು ಹೇಳಿದೆ. 

‘ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದ ಸಂತ್ರಸ್ತೆಯರ ವರ್ಗದಲ್ಲಿ ವಿವಾಹಿತೆಯರೂ ಇರಬಹುದು. ಸಂಗಾತಿಯಿಂದಲೇ ಮಹಿಳೆಯರು ಹಿಂಸೆಗೆ ಒಳಗಾಗುತ್ತಿದ್ದಾರೆ ಮತ್ತು ಅದು ಅತ್ಯಾಚಾರದ ರೂಪವನ್ನೂ ಪಡೆದುಕೊಳ್ಳಬಹುದು ಎಂಬುದನ್ನು ಗುರುತಿಸ
ದಿರುವುದು ಉಪೇಕ್ಷೆ ಎನಿಸಿಕೊಳ್ಳಬಹುದು. ಅತ್ಯಾಚಾರ ಅಥವಾ ಲಿಂಗ ಆಧಾರಿತ ಹಿಂಸೆಗೆ ಸಂಪೂರ್ಣವಾಗಿ ಅಥವಾ ಹೆಚ್ಚಾಗಿ ಅಪರಿಚಿತರೇ ಕಾರಣ ಎಂಬ ತಪ್ಪು ಗ್ರಹಿಕೆಯು ವಿಷಾದನೀಯ’ ಎಂದು ಪೀಠವು ವಿವರಿಸಿದೆ. 

ಅವಿವಾಹಿತೆಯರು ಗರ್ಭಪಾತ ಮಾಡಿಸಿಕೊಳ್ಳಬೇಕಿದ್ದರೆ, ಅತ್ಯಾಚಾರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿರಬೇಕು ಅಥವಾ ಅತ್ಯಾಚಾರ ನಡೆದಿರುವುದು ನ್ಯಾಯಾಲಯದಲ್ಲಿ ಸಾಬೀತಾಗಬೇಕು ಎಂದೇನೂ ಇಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಮತ್ತು ಜೆ.ಬಿ. ಪಾರ್ದೀವಾಲಾ ಅವರೂ ಇದ್ದ ಪೀಠವು ಹೇಳಿದೆ. 

ಗಂಡನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಮಹಿಳೆಯು ಗರ್ಭ ಧರಿಸಬಹುದು ಎಂಬುದು ನಂಬಲಾಗದಂತಹ ವಿಚಾರ ಏನಲ್ಲ. ಮದುವೆಯಾಗಿದೆ ಎಂಬ ಕಾರಣಕ್ಕೆ ಲೈಂಗಿಕ ಹಿಂಸೆ ಮತ್ತು ಸಮ್ಮತಿಯ ಸ್ವರೂಪದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಘನತೆಯ ಹಕ್ಕು ಎಂಬುದರಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವ ಪ್ರತಿ ಮಹಿಳೆಯ ಸಾಮರ್ಥ್ಯ ಮತ್ತು ಅಧಿಕಾರವೂ ಸೇರುತ್ತದೆ. ಗರ್ಭಪಾತ ಮಾಡಿಕೊಳ್ಳುವ ನಿರ್ಧಾರವೂ ಅದರಲ್ಲಿ ಸೇರಿದೆ ಎಂದು ಪೀಠವು ಹೇಳಿದೆ.

ವೈವಾಹಿಕ ಸ್ಥಿತಿಯ ಬದಲಾವಣೆ ಯಿಂದಾಗಿ ಗರ್ಭವು ಅನಪೇಕ್ಷಿತ ಅನಿಸಿದರೆ, ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್‌ 3(2) (ಬಿ) ಮತ್ತು 3ಬಿ ನಿಯಮ ಅವಕಾಶ ಕೊಡುತ್ತದೆ. ವಿವಾಹಿತೆಯರಿಗೆ ಮಾತ್ರ ಅನ್ವಯ ಎಂದು ನಿಯಮ 3 ಬಿಯನ್ನು ವ್ಯಾಖ್ಯಾನಿಸುವುದು ಸಂಕುಚಿತ ಎನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಅವಿವಾಹಿತೆಯರನ್ನು ತಾರತಮ್ಯದಿಂದ ನೋಡಿದಂತಾಗುತ್ತದೆ ಎಂದು ಪೀಠವು ವಿವರಿಸಿದೆ.

ನಿಯಮ 3 ಬಿಯ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಆಗಿದೆ ಎಂಬುದನ್ನು ಸಾಬೀತು ಮಾಡುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಹಿಳಾ ಹಕ್ಕು ಕಾರ್ಯಕರ್ತೆಯರ ಸಂತಸ

ಸುಪ್ರೀಂ ಕೋರ್ಟ್‌ ಆದೇಶವನ್ನು ವಕೀಲರು ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರರು ಸ್ವಾಗತಿಸಿದ್ದಾರೆ. ಹೆಂಡತಿಯ ಸಮ್ಮತಿಯಿಲ್ಲದೆ ನಡೆಸುವ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಗರ್ಭಪಾತಕ್ಕೆ ಸೀಮಿತವಾಗಿ ಪರಿಗಣಿಸಿದ್ದು ಉತ್ತಮ ನಿರ್ಧಾರ ಎಂದು ಬಣ್ಣಿಸಲಾಗಿದೆ. ಆದರೆ, ಅದನ್ನು ಅಪರಾಧ ಎಂದು ಪರಿಗಣಿಸಲಾಗಿಲ್ಲ.  

ಮಗುವನ್ನು ಹೊಂದಬೇಕೇ ಬೇಡವೇ ಎಂದು ನಿರ್ಧರಿಸುವ ಹಕ್ಕನ್ನು ಮಹಿಳೆಗೆ ನೀಡಿರುವುದು ಮಹತ್ವದ ಆದೇಶ ಎಂದು ಹಿರಿಯ ವಕೀಲೆ ಶಿಲ್ಪಿ ಜೈನ್‌ ಹೇಳಿದ್ದಾರೆ. ಮಗುವನ್ನು ಹೊಂದಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವಲ್ಲಿ ಪುರುಷ ಸಂಗಾತಿಗೆ ಏನನ್ನೂ ಹೇಳುವ ಅಧಿಕಾರ ಇಲ್ಲ. ಗರ್ಭಪಾತ ಮಾಡಿಸಿಕೊಳ್ಳಲು ಗಂಡ ಅಥವಾ ಸಂಗಾತಿಯ ಅನುಮತಿಯ ಅಗತ್ಯವೂ ಇಲ್ಲ ಎಂದು ಶಿಲ್ಪಿ ಅವರು ಆದೇಶವನ್ನು ವಿವರಿಸಿದ್ದಾರೆ. 

ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಕೊಡುವ ಮೂಲಕ ಭಾರತೀಯ ಮಹಿಳೆಯ ಹಕ್ಕನ್ನು ಪುನರುಚ್ಚರಿಸಲಾಗಿದೆ. ಅದರ ಜತೆಗೆ, ಹೆಂಡತಿಯ ಸಮ್ಮತಿ ಇಲ್ಲದ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಿದ್ದು ಕೂಡ ಮಹತ್ವದ್ದಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ರಂಜನಾ ಕುಮಾರಿ ಹೇಳಿದ್ದಾರೆ. 

ಓದಿ... 

ಗರ್ಭಪಾತಕ್ಕೆ ಅನುಮತಿ: ಅವಿವಾಹಿತೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ 

ವಿಶ್ಲೇಷಣೆ: ಗರ್ಭಪಾತ ಮತ್ತು ಆಯ್ಕೆ ಹಕ್ಕು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು