UP Elections: ಎಸ್‌ಪಿ ಭದ್ರಕೋಟೆ ಕರ್ಹಲ್‌ನಿಂದ ಅಖಿಲೇಶ್ ಸ್ಪರ್ಧೆ

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೈನ್‌ಪುರಿ ಜಿಲ್ಲೆಯಲ್ಲಿರುವ ಕರ್ಹಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮೈನ್‌ಪುರಿ ಜಿಲ್ಲೆಯು ಅಖಿಲೇಶ್ ಕುಟುಂಬದ ಭದ್ರಕೋಟೆ. ಅಖಿಲೇಶ್ ಅವರ ತವರು ಗ್ರಾಮ ಸೈಫೈನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಕರ್ಹಲ್ ಇದೆ. ಅಖಿಲೇಶ್ ಅವರು ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಕರ್ಹಲ್‌ನಿಂದ ಅಖಿಲೇಶ್ ಅವರ ಸ್ಪರ್ಧೆಯನ್ನು ಎಸ್‌ಪಿ ರಾಜ್ಯಸಭಾ ಸದಸ್ಯ ರಾಮ್‌ಗೋಪಾಲ್ ಯಾದವ್ ಅವರು ದೃಢಪಡಿಸಿದ್ದಾರೆ.
2002ರ ಚುನಾವಣೆ ಹೊರತುಪಡಿಸಿ 1993ರಿಂದ ನಂತರದ ಎಲ್ಲ ಚುನಾವಣೆಯಲ್ಲಿಯೂ ಕರ್ಹಲ್‌ನಲ್ಲಿ ಎಸ್‌ಪಿ ಗೆದ್ದಿದೆ. 2002ರಲ್ಲಿ ಇಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, 2007ರಲ್ಲಿ ಈ ಕ್ಷೇತ್ರವನ್ನು ಎಸ್‌ಪಿ ಗೆದ್ದುಕೊಂಡಿತು. ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಐದು ಬಾರಿ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಮೈನ್‌ಪುರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ಹಲ್ ಇದೆ.
ಐ.ಟಿ ಕ್ಷೇತ್ರಕ್ಕೆ ಒತ್ತು: ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದಲ್ಲಿ 22 ಲಕ್ಷ ಯುವ ಜನರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗುವುದು ಎಂದು ಅಖಿಲೇಶ್ ಶನಿವಾರ ಭರವಸೆ ಕೊಟ್ಟಿದ್ದಾರೆ.
‘ಈ ಹಿಂದೆ ಅಧಿಕಾರದಲ್ಲಿ ಇದ್ದ ಎಸ್‌ಪಿ ಸರ್ಕಾರವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಮುಂದೆ ಬರಲು ಬೇಕಾದ ಪ್ರಯತ್ನಗಳನ್ನು ಮಾಡಿತ್ತು. ಎಸ್‌ಪಿ ಸರ್ಕಾರ ಆರಂಭಿಸಿದ್ದ ಕೆಲಸಗಳನ್ನು ಪೂರ್ಣಗೊಳಿಸಿದ್ದರೆ ಲಖನೌ ಈಗ ಮಾಹಿತಿ ತಂತ್ರಜ್ಞಾನ ಕೇಂದ್ರ ಎಂದು ಗುರುತಿಸಿಕೊಳ್ಳುತ್ತಿತ್ತು’ ಎಂದು ಅವರು ಹೇಳಿದ್ದಾರೆ. 2012–2017ರ ಅವಧಿಯಲ್ಲಿ ಅಖಿಲೇಶ್ ನೇತೃತ್ವದ ಸರ್ಕಾರ ಇತ್ತು.
ಕಾಂಗ್ರೆಸ್ ಅಭ್ಯರ್ಥಿಗೆ ಎಸ್‌ಪಿ ಟಿಕೆಟ್
ಕಾಂಗ್ರೆಸ್‌ನ ಮಾಜಿ ಸಂಸದ ಪ್ರವೀಣ್ ಸಿಂಗ್ ಆರೊನ್ ಮತ್ತು ಅವರ ಹೆಂಡತಿ ಸುಪ್ರಿಯಾ ಅವರು ಅಖಿಲೇಶ್ ಸಮ್ಮುಖದಲ್ಲಿ ಎಸ್‌ಪಿ ಸೇರ್ಪಡೆ ಆಗಿದ್ದಾರೆ.
ಬರೇಲಿ ಕಂಟೋನ್ಮೆಂಟ್ ಕ್ಷೇತ್ರದಿಂದ ಸುಪ್ರಿಯಾ ಅವರನ್ನು ಕಣಕ್ಕೆ ಇಳಿಸುವುದಾಗಿ ಕಾಂಗ್ರೆಸ್ ಪ್ರಕಟಿಸಿತ್ತು. ಆದರೆ, ಈಗ ಅವರು ಎಸ್‌ಪಿ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ಧಾರೆ.
ಈ ಕ್ಷೇತ್ರದಿಂದ ರಾಜೇಶ್ ಅಗರ್‌ವಾಲ್ ಅವರನ್ನು ಕಣಕ್ಕೆ ಇಳಿಸುವುದಾಗಿ ಎಸ್‌ಪಿ ಘೋಷಿಸಿತ್ತು. ಅವರ ಬದಲಿಗೆ ಸುಪ್ರಿಯಾ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ಘೋಷಿಸಿದ್ದ 125 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸುಪ್ರಿಯಾ ಹೆಸರು ಇತ್ತು. ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್ ನೀಡುವ ಭರವಸೆಯ ಭಾಗವಾಗಿ ಮೊದಲ ಪಟ್ಟಿಯಲ್ಲಿ 50 ಮಹಿಳೆಯರನ್ನು ಹೆಸರಿಸಲಾಗಿತ್ತು. ಬರೇಲಿಯ ಮಾಜಿ ಮೇಯರ್ ಆಗಿರುವ ಸುಪ್ರಿಯಾ ಅವರು 2012ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.
‘ನಾನು ಹುಡುಗಿ, ಹೋರಾಡಬಲ್ಲೆ’ ಎಂಬ ಘೋಷಣೆಯ ಅಡಿಯಲ್ಲಿ, ಬರೇಲಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಸುಪ್ರಿಯಾ ಅವರು ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಲ್ಲಿನ ಘಟನೆಯನ್ನು ವೈಷ್ಣೋದೇವಿಯಲ್ಲಿ ನಡೆದ ಕಾಲ್ತುಳಿತಕ್ಕೆ ಹೋಲಿಸಿ ಅವರು ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.