ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ: ವಿರೋಧ ಪಕ್ಷಗಳ ನಿದ್ದೆ ಕದ್ದ ಕಾಂಗ್ರೆಸ್ ಭರವಸೆಗಳು!

Last Updated 24 ಅಕ್ಟೋಬರ್ 2021, 22:30 IST
ಅಕ್ಷರ ಗಾತ್ರ

ಲಖನೌ: ಮುಂದಿನ ವರ್ಷಾರಂಭದಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಕೃಷಿ ಸಾಲ ಮನ್ನಾ, ವಿದ್ಯುತ್‌ ಶುಲ್ಕ ಕಡಿತ, ಸರ್ಕಾರಿ ಉದ್ಯೋಗ, ಕೋವಿಡ್‌ ಸಂಕಷ್ಟದ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಿದವರಿಗೆ ಹಣಕಾಸು ಸಹಾಯದಂಥ ಭರವಸೆಗಳನ್ನುಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೀಡುತ್ತಿರುವುದು ಇತರ ಪಕ್ಷಗಳನ್ನು ಫಜೀತಿಗೆ ಕೆಡವಿದೆ. ಈಗ ಅವುಗಳಿಗೂ ತಮ್ಮ ಚುನಾವಣಾ ಕಾರ್ಯತಂತ್ರವನ್ನು ಮರುಪರಿಶೀಲಿಸುವ ಅನಿವಾರ್ಯತೆ ಎದುರಾಗಿದೆ.

ಪ್ರಿಯಾಂಕಾ ಅವರ ಭರವಸೆಗಳನ್ನು‘ಚುನಾವಣಾ ತಂತ್ರ’ ಎಂದು ಬಿಜೆಪಿ ಟೀಕಿಸಿದೆ. ಅದೇ ವೇಳೆಗೆ, ಪ್ರಿಯಾಂಕಾ ಅವರನ್ನು ಎದುರಿಸುವುದಕ್ಕಾಗಿ ರಾಜ್ಯ ಸರ್ಕಾರದ ಸಾಧನೆಗಳ ದಾಖಲೆಗಳನ್ನು ಒಳಗೊಂಡ ಕಡತ ಸಿದ್ಧಪಡಿಸುತ್ತಿದೆ.

ತಮ್ಮ ಸರ್ಕಾರದ ಈ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಒದಗಿಸಿದ ಸರ್ಕಾರಿ ಉದ್ಯೋಗಗಳ ಸಂಖ್ಯೆ, ರೈತರು ಹಾಗೂ ಮಹಿಳೆಯರಿಗೆ ಅನುಕೂಲವಾಗುವ ದಿಸೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸದ್ಯದಲ್ಲೇ ವಿವರ ಮಾಹಿತಿ ನೀಡುವುದಾಗಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಭಾನುವಾರ ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಕೂಡ ಮಹಿಳೆಯರಿಗೆ ಮೀಸಲಾತಿ ನಿಗದಿ ಮಾಡಲಿದೆಯೇ ಎಂಬ ಪ್ರಶ್ನೆಗೆ, ಬಿಜೆಪಿಯು ಯಾವಾಗಲೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದೆ ಎಂದಷ್ಟೇ ಹೇಳಿದರು.

ಕಾಂಗ್ರೆಸ್‌ ನೀಡಿರುವ ಭರವಸೆಗಳ ಬಗ್ಗೆ ಸಮಾಜವಾದಿ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಆ ಪಕ್ಷ ಕೂಡ ರೈತರ ಸಾಲ ಮನ್ನಾ, ವಿದ್ಯುತ್‌ ಶುಲ್ಕ ಕಡಿತ ಹಾಗೂ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಿದ ಕುಟುಂಬದವರಿಗೆ ಹಣಕಾಸು ನೆರವು ನೀಡುವುದಕ್ಕೆ ಸಂಬಂಧಿಸಿದ ವಿಷಯಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವುದರ ಬಗ್ಗೆ ಚಿಂತನೆ ನಡೆಸಿದೆ.

ಇನ್ನಷ್ಟು ಭರವಸೆಗಳು
ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆ ಅಂತಿಮ ಹಂತದಲ್ಲಿದ್ದು, ಇನ್ನಷ್ಟು ಘೋಷಣೆ, ಭರವಸೆಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ಅನಿಲ್‌ ಕುಮಾರ್‌ ಲಲ್ಲು ಹೇಳಿದ್ದಾರೆ. ‘ಅವು ಬರೀ ಭರವಸೆಗಳಲ್ಲ. ನಮ್ಮ ವಚನಗಳು. ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ, ಅವುಗಳನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ’ ಎಂದು ಅವರು ತಿಳಿಸಿದರು.

ರೈತರ ಸಾಲ ಮನ್ನಾ, ರಾಜ್ಯದ 20 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ, ವಿದ್ಯುತ್‌ ಶುಲ್ಕದಲ್ಲಿ ಅರ್ಧದಷ್ಟು ಇಳಿಕೆ, ಭತ್ತ, ಗೋಧಿ ಹಾಗೂ ಕಬ್ಬು ಬೆಳೆಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇ 40ರಷ್ಟು ಹೆಚ್ಚಳ ಹಾಗೂ ಬರಲಿರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್‌ ಮೀಸಲಿಡುವುದಾಗಿ ಪ್ರಿಯಾಂಕಾ ಭರವಸೆ ನೀಡಿದ್ದಾರೆ. ಇದರೊಂದಿಗೆ 12ನೇ ತರಗತಿ ಉತ್ತೀರ್ಣರಾದ ಬಾಲಕಿಯರಿಗೆ ಸ್ಮಾರ್ಟ್‌ಫೋನ್‌ ಹಾಗೂ ಪದವೀಧರೆಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ನೀಡುವುದಾಗಿಯೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT