ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ: ಆಂಧ್ರ ಮತ್ತೆ ತಗಾದೆ; ನ್ಯಾಯಮಂಡಳಿ ತೀರ್ಪು ಉಲ್ಲಂಘಿಸಿದ ಆರೋಪ

ನ್ಯಾಯಮಂಡಳಿ ತೀರ್ಪನ್ನು ಕರ್ನಾಟಕ ಉಲ್ಲಂಘಿಸಿದ ಆರೋಪ
Last Updated 6 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ನವದೆಹಲಿ: ಹನಿ ನೀರಾವರಿ ಮೂಲಕಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರುಣಿಸುವಭದ್ರಾ ಮೇಲ್ದಂಡೆ ಯೋಜನೆಗೆ ಆಂಧ್ರ ಪ್ರದೇಶ ಸರ್ಕಾರ ಮತ್ತೆ ತಗಾದೆ ತೆಗೆದಿದೆ.

ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಮಂಡಳಿ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದು ಸಂಪೂರ್ಣವಾಗಿ ಅನುಷ್ಠಾನಗೊಂಡರೆ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಆಂಧ್ರ ಪ್ರದೇಶದ ಮೂರು ನೀರಾವರಿ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ ಎಂಬುದು ಆಂಧ್ರ ಪ್ರದೇಶ ಸರ್ಕಾರದ ತಕರಾರು.

ತಿರುವನಂತಪುರ ಇತ್ತೀಚೆಗೆ ನಡೆದ ಕೇಂದ್ರ ಗೃಹ ಸಚಿವಾಲಯದ ಅಂತರ್‌ ರಾಜ್ಯ (ದಕ್ಷಿಣ ವಲಯ) ಪರಿಷತ್ತಿನ ಸ್ಥಾಯಿ ಸಮಿತಿ ಸಭೆಯಲ್ಲಿ ಆಂಧ್ರ ಪ್ರದೇಶ ಸರ್ಕಾರವು ಯೋಜನೆಯ ಬಗ್ಗೆ ತಕರಾರು ಎತ್ತಿದೆ. ಈ ಯೋಜನೆಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರ ನೀಡುವಂತೆ ಸೂಚಿಸಿ ಗೃಹ ಸಚಿವಾಲಯದ ಅಂತರ್‌ ರಾಜ್ಯ ಪರಿಷತ್ತಿನ ಕಾರ್ಯದರ್ಶಿ ಅನುರಾಧ ಚೌಧರಿ ಅವರು ಕರ್ನಾಟಕ ಸರ್ಕಾರಕ್ಕೆ ಆಗಸ್ಟ್‌ 4ರಂದು ಪತ್ರ ಬರೆದಿದ್ದಾರೆ. ಸಭೆಯ ನಡಾವಳಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸಭೆಯ ನಡಾವಳಿಯ ಸಾರ:ಸ್ಥಾಯಿ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಪರಿಷತ್ತಿನ ಕಾರ್ಯದರ್ಶಿ, ಈ ಯೋಜನೆಯ ಬಗ್ಗೆ ಆಂಧ್ರ ಪ್ರದೇಶ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಗಮನ ಸೆಳೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದಜಲಶಕ್ತಿ ಸಚಿವಾಲಯದ ಪ್ರತಿನಿಧಿ, ‘ಈ ಯೋಜನೆಗೆ ಸಚಿವಾಲಯದ ತಾಂತ್ರಿಕ ಸಲಹಾ ಸಮಿತಿ 2020ರಲ್ಲಿ ಒ‌ಪ್ಪಿಗೆ ನೀಡಿದೆ. ಒಪ್ಪಿಗೆ ನೀಡುವ ವೇಳೆ ಅಂತರ್‌ ರಾಜ್ಯಗಳ ವಾದಗಳನ್ನು ಪರಿಗಣಿಸಲಾಗಿದೆ. ಕೃಷ್ಣಾ ನದಿ ನೀರು ನ್ಯಾಯಮಂಡಳಿತೀರ್ಪಿನ ಅನ್ವಯವೇ ಕರ್ನಾಟಕ ಸರ್ಕಾರ ಯೋಜನೆ ಕೈಗೆತ್ತಿಕೊಂಡಿದೆ. ಆಂಧ್ರ ಪ್ರದೇಶದ ಆಕ್ಷೇಪಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಕೇಂದ್ರ ಜಲ ಆಯೋಗವು ಈ ಯೋಜನೆಗೆ ಒಪ್ಪಿಗೆ ನೀಡಿದ್ದು, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು 2022ರ ಮಾರ್ಚ್‌ನಲ್ಲಿ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಆಂಧ್ರ ಸರ್ಕಾರಕ್ಕೆ ವಿಸ್ತೃತ ಪ್ರತಿಕ್ರಿಯೆ ನೀಡಲಾಗಿದೆ’ ಎಂದು ಉತ್ತರ ನೀಡಿದ್ದರು.

ಆಂಧ್ರ ಪ್ರದೇಶ ಸರ್ಕಾರದ ಪ್ರತಿನಿಧಿ, ‘ಕೇಂದ್ರದ ಪ್ರತಿಕ್ರಿಯೆ ನಮಗೆ ಲಭ್ಯ ಆಗಿಲ್ಲ. ನೀರಿನಹಂಚಿಕೆಯಲ್ಲಿ ಯಾವುದೇ ಮಾರ್ಪಾಡು ಇದ್ದಲ್ಲಿ ಆ ಕುರಿತು ಹೊಸ ಡಿಪಿಆರ್‌ ತಯಾರಿಸಬೇಕು ಮತ್ತು ಅದಕ್ಕೆ ಅನುಮೋದನೆ ಪಡೆಯಬೇಕು. ಆದರೆ, ಈವರೆಗೆ ಹೊಸ ಡಿಪಿಆರ್ ಸಲ್ಲಿಕೆ ಆಗಿಲ್ಲ. ಮುಂದಿನ ಸ್ಥಾಯಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕು’ ಎಂದು ಮನವಿ ಮಾಡಿದ್ದರು.

ಇದಕ್ಕೆ ಉತ್ತರಿಸಿದ್ದಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ‘ಕೇಂದ್ರ ಜಲ ಆಯೋಗವು ಅಂತರ್‌ ರಾಜ್ಯ ಆಯಾಮಗಳನ್ನು ಪರಿಶೀಲಿಸಿದೆ. ಆಂಧ್ರ ಸರ್ಕಾರದಆಕ್ಷೇಪ ಸೇರಿ ಎಲ್ಲ ಅಂಶಗಳನ್ನು ಪರಿಶೀಲಿಸಿ ಯೋಜನೆಗೆ ಒಪ್ಪಿಗೆ ನೀಡಿದೆ’ ಎಂದು ಉತ್ತರಿಸಿದ್ದರು.

ಈ ವಿಚಾರ ಇತ್ತೀಚೆಗೆಯಷ್ಟೇ ಅಂತರ್‌ ರಾಜ್ಯ ಪರಿಷತ್ತಿನ ಮುಂದೆ ಬಂದಿದ್ದು, ಮುಂದಿನ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಕೇಂದ್ರ ಸಂಪುಟದ ಒಪ್ಪಿಗೆ ಬಾಕಿ:ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 29.90 ಟಿಎಂಸಿ ಅಡಿ ನೀರು (ತುಂಗಾ ನದಿಯಿಂದ 17.40 ಟಿಎಂಸಿ ಅಡಿ ಹಾಗೂ ಭದ್ರಾ ಜಲಾಶಯದಿಂದ 12.50 ಟಿಎಂಸಿ ಅಡಿ) ಬಳಕೆ ಮಾಡಲಾಗುತ್ತದೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಸೂಕ್ಷ್ಮ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಜಿಲ್ಲೆಗಳ 367 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ತುಂಬಿಸುವ ಯೋಜನೆ ಇದಾಗಿದೆ. ಇದನ್ನುರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ.ಈ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ಸಿಗಲು ಕೇಂದ್ರ ಸರ್ಕಾರದ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಈ ಯೋಜನೆಗೆ ತಗಲುವ ಒಟ್ಟಾರೆ ವೆಚ್ಚ ₹21,473 ಕೋಟಿ. ರಾಷ್ಟ್ರೀಯ ಯೋಜನೆಯಾಗಿ ಪರಿಗಣಿತವಾದ ನಂತರ ಕೇಂದ್ರ ಸರ್ಕಾರ ಈ ಯೋಜನೆಗೆ ₹9,675 ಕೋಟಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT