ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ವಯೋಮಿತಿ ಮೀರದವರಿಗಷ್ಟೇ ಮತ್ತೊಂದು ಅವಕಾಶ

ಸುಪ್ರೀಂಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ
Last Updated 9 ಫೆಬ್ರುವರಿ 2021, 14:52 IST
ಅಕ್ಷರ ಗಾತ್ರ

ನವದೆಹಲಿ: ‘2020ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯ ಕೊನೆಯ ಪ್ರಯತ್ನವನ್ನು ಕೋವಿಡ್‌ ಕಾರಣಕ್ಕೆ ತಪ್ಪಿಸಿಕೊಂಡ ಅಭ್ಯರ್ಥಿಗಳಿಗೆ ಮತ್ತೊಂದು ಷರತ್ತುಬದ್ಧ ಅವಕಾಶ ನೀಡಿರುವುದು ವಯೋಮಿತಿ ಮೀರದವರಿಗೆ ಮಾತ್ರ. ಇದು ಪರೀಕ್ಷೆ ಬರೆಯಲು ನಿಗದಿಪಡಿಸಿದ ವಯೋಮಿತಿ ಮೀರಿದವರಿಗಲ್ಲ’ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

2020ರ ಸಾಲಿನ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಕೊನೆಯ ಪ್ರಯತ್ನ ಹೊಂದಿದ್ದ ಅಭ್ಯರ್ಥಿಗಳು ಕೊರೊನಾ ಸಾಂಕ್ರಾಮಿಕದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕಾರಣಕ್ಕೆ ಮತ್ತೊಂದು ಅವಕಾಶ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪೀಠಕ್ಕೆ ತಿಳಿಸಿದೆ. ಈ ಪ್ರಕರಣದ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಎಸ್.ವಿ. ರಾಜು ಅವರು, ಸರ್ಕಾರವು ಆರಂಭದಲ್ಲಿ ಹೆಚ್ಚುವರಿ ಅವಕಾಶ ನೀಡಲು ಸಿದ್ಧವಿರಲಿಲ್ಲ. ಪೀಠವು ನೀಡಿದ ಸಲಹೆಯನ್ನು ಪರಿಗಣಿಸಿ ಮತ್ತೊಂದು ಅವಕಾಶ ಕಲ್ಪಿಸುವ ತೀರ್ಮಾನಕ್ಕೆ ಬಂದಿತು ಎಂದು ಹೇಳಿದರು.

‘ಇದು ಕೊನೆ ನಿಮಿಷದಲ್ಲಿ ತಯಾರಿ ನಡೆಸಿಕೊಳ್ಳುವ ಪರೀಕ್ಷೆಯಲ್ಲ. ಇದಕ್ಕಾಗಿ ಅಭ್ಯರ್ಥಿಗಳು ವರ್ಷಾನುಗಟ್ಟಲೇ ತಯಾರಿ ನಡೆಸಿಕೊಂಡಿರುತ್ತಾರೆ. ನಾವು ಉಳಿದವರ ಬಗ್ಗೆಯೂ ಯೋಚಿಸಬೇಕು’ ಎಂದು ಹೇಳಿದರು.

ಅರ್ಜಿದಾರರ ಪರವಾಗಿ ಸೋಮವಾರ ನ್ಯಾಯಪೀಠದ ಮುಂದೆ ಹಾಜರಾಗಿದ್ದ ವಕೀಲರು, ಪರೀಕ್ಷೆ ಆಕಾಂಕ್ಷಿಗಳಿಗೆ ವಯಸ್ಸಿನ ಮಿತಿಯಲ್ಲಿ ಒಂದು ಬಾರಿ ವಿನಾಯಿತಿ ನೀಡಬೇಕು ಎಂದು ವಾದಿಸಿದ್ದರು.

ಇದೇ 5ರಂದು ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರವು, 2020ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಗೆ ಕೊನೆಯ ಪ್ರಯತ್ನದಲ್ಲಿ ಹಾಜರಾದ ಮತ್ತು ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶವನ್ನು ಷರತ್ತುಬದ್ಧವಾಗಿ ನೀಡಲು ಒಪ್ಪಿರುವುದಾಗಿ ಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT