ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಗುಜ್ಜರ್‌ ಸಮುದಾಯದತ್ತ ಬಿಜೆಪಿ ಚಿತ್ತ

Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಜಾಟ್‌ ಸಮುದಾಯದ ಬೆಂಬಲ ಗಳಿಸುವ ಗಟ್ಟಿ ವಿಶ್ವಾಸ ಬಿಜೆಪಿಗೆ ಇಲ್ಲ. ಏಕೆಂದರೆ, ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಮುಂಚೂಣಿಯಲ್ಲಿ ಈ ಸಮುದಾಯವೇ ಇದೆ. ಹಾಗಾಗಿ, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿರುವ ಗುಜ್ಜರ್‌ ಸಮುದಾಯದ ಮೇಲೆ ಗಮನ ಕೇಂದ್ರೀಕರಿಸಲು ಬಿಜೆಪಿ ಮುಂದಾಗಿದೆ.

9ನೇ ಶತಮಾನದ ದೊರೆ, ‘ಗುರ್ಜರ್‌–ಪ್ರತಿಹಾರ್‌’ ಸಮುದಾಯದ ಮಿಹಿರ್‌ಭೋಜಾ ಅವರ ಗೌರವಾರ್ಥ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ. ಮಿಹಿರ್‌ಭೋಜಾ ಅವರ 12 ಅಡಿ ಎತ್ತರದ ಪ್ರತಿಮೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅನಾವರಣಗೊಳಿಸಲಿದ್ದಾರೆ. ಗೌತಮ ಬುದ್ಧ ನಗರದ ಪದವಿ ಕಾಲೇಜು ಆವರಣದಲ್ಲಿ ಈ ಪ್ರತಿಮೆ ಸ್ಥಾಪನೆ ಆಗಲಿದೆ. ಬುಧವಾರ ಈ ಕಾರ್ಯಕ್ರಮವು ನಡೆಯಲಿದೆ.

ಯೋಗಿ ಅವರು ಪ್ರತಿಮೆ ಅನಾವರಣದ ಬಳಿಕ ಗುಜ್ಜರ್‌ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಲಿದ್ದಾರೆ.

ಗುಜ್ಜರ್‌ ಸಮುದಾಯವು ಅತಿ ಹೆಚ್ಚು ಗೌರವದಿಂದ ಕಾಣುವ ವ್ಯಕ್ತಿಗಳಲ್ಲಿ ಮಿಹಿರ್‌ಭೋಜಾ ಮುಖ್ಯವಾಗಿದ್ದಾರೆ. ಮಿಹಿರ್‌ಭೋಜಾ ಹೆಸರಿನಲ್ಲಿ ಹಲವು ವಿದ್ಯಾಸಂಸ್ಥೆಗಳು ಇವೆ. ಉತ್ತರ ಪ್ರದೇಶದ ಪಶ್ಚಿಮದ ಜಿಲ್ಲೆಗಳಾದ ಭಾಗ್‌ಪತ್‌, ಶಾಮ್ಲಿ ಮತ್ತು ಗಾಜಿಯಾಬಾದ್‌ನಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

‘ಹಿಂದೂ ಧರ್ಮವನ್ನು ರಕ್ಷಿಸಲು ಹೋರಾಡಿದ ಹಿಂದೂ ದೊರೆಗಳನ್ನು ಗೌರವಿಸಲು ನಮ್ಮ ಸರ್ಕಾರವು ಬದ್ಧವಾಗಿದೆ’ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಅವರು ಗುಜ್ಜರ್‌ ಸಮುಯದಾವರು.

ಮಿಹಿರ್‌ಭೋಜಾ ಅವರ ಪ್ರತಿಮೆ ಸ್ಥಾಪನೆಯಲ್ಲಿ ರಾಜಕೀಯ ಉದ್ದೇಶವೇನೂ ಇಲ್ಲ ಎಂದು‍ ಅವರು ಹೇಳಿದ್ದಾರೆ. ಆದರೆ, ಇದು ಚುನಾವಣಾ ತಂತ್ರ ಎಂದು ಸಮಾಜವಾದಿ ಪಕ್ಷವು ಹೇಳಿದೆ. ‘ಚುನಾವಣೆ ಹತ್ತಿರ ಬಂದಾಗ ಮಹಾನ್‌ ವ್ಯಕ್ತಿಗಳೆಲ್ಲರೂ ಬಿಜೆಪಿಗೆ ನೆನಪಾಗುತ್ತಾರೆ’ ಎಂದು ಎಸ್‌ಪಿ ಮುಖಂಡರೊಬ್ಬರು ಟೀಕಿಸಿದ್ದಾರೆ.

ಗುಜ್ಜರ್‌ ಅಲ್ಲವೇ?
ಮಿಹಿರ್‌ಭೋಜಾ ಅವರು ಗುಜ್ಜರ್‌ ಸಮುದಾಯಕ್ಕೆ ಸೇರಿದವರು ಅಲ್ಲ. ಅವರು ರಜಪೂತ ಎಂದು ರಜಪೂತ ಸಮುದಾಯದ ಸಂಘಟನೆ ಕರ್ನಿ ಸೇನಾ ಹೇಳಿದೆ. ಮಿಹಿರ್‌ಭೋಜಾ ಅವರು ಗುಜ್ಜರ್‌ ಸಮುದಾಯದವರು ಎಂದು ಹೇಳಿ ಅವರ ಪ್ರತಿಮೆ ಸ್ಥಾಪಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಈ ಸಂಘಟನೆಯು ಎಚ್ಚರಿಕೆ ಕೊಟ್ಟಿದೆ.

ಜಾಟ್‌ ದೊರೆ ಮಹೇಂದ್ರ ಪ್ರತಾಪ ಸಿಂಗ್‌ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ದಿನಗಳ ಹಿಂದೆ ಅಲಿಗಡದಲ್ಲಿ ಅನಾವರಣಗೊಳಿಸಿದ್ದರು.

‘ಸಾಧನೆ’ ಬಿಚ್ಚಿಟ್ಟ ಯೋಗಿ
ಉತ್ತರ ಪ್ರದೇಶವು ತಮ್ಮ ಆಳ್ವಿಕೆಯಲ್ಲಿ ಆಮೂಲಾಗ್ರವಾಗಿ ಬದಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. 2017ರ ಬಳಿಕ ರಾಜ್ಯದಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ ಎಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳಿರುವ ಈ ಸಂದರ್ಭದಲ್ಲಿ ಯೋಗಿ ಅವರು ಸರ್ಕಾರದ ‘ಸಾಧನೆ’ಗಳನ್ನು ಹೇಳಿಕೊಂಡಿದ್ದಾರೆ.

ಕೇಂದ್ರದ 44 ಯೋಜನೆಗಳ ಅನುಷ್ಠಾನದಲ್ಲಿ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದೆ. ಮೊದಲು ಇದ್ದ ಹಾಗೆ ಗಲಭೆಗಳು ಮತ್ತು ಕಾನೂನು ಸುವ್ಯವಸ್ಥೆ ರಹಿತ ಸ್ಥಿತಿ ಈಗ ರಾಜ್ಯದಲ್ಲಿ ಇಲ್ಲ. ಆಡಳಿತವು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿದೆ ಎಂದೂ ಅವರು ಹೇಳಿದ್ದಾರೆ.

ಆದರೆ, ಯೋಗಿ ಅವರು ನೀಡಿರುವ ‘ಸಾಧನೆಗಳ ವರದಿ’ಯು ಸುಳ್ಳುಗಳ ಕಂತೆ ಎಂದು ವಿರೋಧ ಪಕ್ಷಗಳಾದ ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT