ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಯೋಗಿ ನಾಯಕತ್ವಕ್ಕೆ ಕುತ್ತು?

ಉತ್ತರ ಪ್ರದೇಶ ಗೆಲುವಿಗಾಗಿ ಬಿಜೆಪಿಯ ‘ಆಟ’..!
Last Updated 10 ಜೂನ್ 2021, 21:55 IST
ಅಕ್ಷರ ಗಾತ್ರ

ನವದೆಹಲಿ: ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಚರ್ಚೆ ಕರ್ನಾಟಕದಲ್ಲಿ ಮಾತ್ರವಲ್ಲದೆ, ಉತ್ತರ ಪ್ರದೇಶದಲ್ಲೂ ಮುಂಚೂಣಿಗೆ ಬಂದಿದೆ. ಕಳೆದ ವಾರಲಕ್ನೋದಲ್ಲಿ ಮುಖಂಡರಾದ ರಾಧಾಮೋಹನ್‌ ಸಿಂಗ್‌ ಹಾಗೂ ಬಿ.ಎಲ್‌. ಸಂತೋಷ್‌ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಸಚಿವರ ಮತ್ತು ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಂಪುಟದ ಪುನರ್‌ರಚನೆ, ಮತ್ತೊಬ್ಬ ಉಪ ಮುಖ್ಯಮಂತ್ರಿ ನೇಮಕ ಕುರಿತೂ ವದಂತಿ ಹಬ್ಬಿದೆ. ಕೇಶವಪ್ರಸಾದ್‌ ಮೌರ್ಯ ಅವರನ್ನು ಯೋಗಿ ಸ್ಥಾನದಲ್ಲಿ ಕೂರಿಸಿ, ಮೋದಿ ಪರಮಾಪ್ತರೊಬ್ಬರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತರಲಾಗುತ್ತಿದೆ ಎಂಬ ಮಾತುಗಳೂ ಆರು ತಿಂಗಳಿಂದ ಕೇಳಿಬರುತ್ತಿವೆ.

ಆದರೆ, ಪಕ್ಷದ ಪ್ರಮುಖರನ್ನು ಭೇಟಿ ಮಾಡಿ ಚರ್ಚಿಸಲೆಂದೇ ಯೋಗಿ ಗುರುವಾರ ದೆಹಲಿಗೆ ದೌಡಾಯಿಸಿದ್ದಾರೆ. ನಾಯಕತ್ವ ಮತ್ತು ಪಕ್ಷ ಸಂಘಟನೆಯಲ್ಲಿನ ಬದಲಾವಣೆಯ ಸಾಧ್ಯತೆಯನ್ನು ವರಿಷ್ಠರು ಯಥಾರೀತಿ ನಿರಾಕರಿಸಿಯಾಗಿದೆ.

ಪಕ್ಷದ ಹೈಕಮಾಂಡ್‌ಗೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೋಗಿ ಅವರ ಸಾಮರ್ಥ್ಯದ ಬಗ್ಗೆ ಇದ್ದ ವಿಶ್ವಾಸ ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿರುವುದೇ, ಚುನಾವಣೆಯ ಹೊಸ್ತಿಲಲ್ಲಿ ನಾಯಕತ್ವ ಬದಲಾಗುವ ಸಾಧ್ಯತೆಯ ವದಂತಿ ಬಿತ್ತರವಾಗಲು ಕಾರಣ.

ನಿವೃತ್ತ ಐಎಎಸ್‌ ಅಧಿಕಾರಿಯ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಒಲವು ಇದೆ. ಆದರೆ ಯೋಗಿ ಅವರಿಗೆ ಮೋದಿ ಅವರ ಆಪ್ತನಿಗೆ ಹೆಚ್ಚಿನ ಸ್ಥಾನಮಾನ ನೀಡುವ ಯೋಜನೆ ರುಚಿಸಿಲ್ಲ ಎಂದು ಹೇಳಲಾಗುತ್ತಿದೆ.

ಮೋದಿ ಆಪ್ತನ ಸೇರ್ಪಡೆ:

ಐಎಎಸ್‌ನ ಗುಜರಾತ್‌ ಕೇಡರ್‌ ಅಧಿಕಾರಿಯಾಗಿದ್ದ ಅರವಿಂದ ಕುಮಾರ್‌ ಶರ್ಮಾ ಅವರೇ ಆ ವ್ಯಕ್ತಿ. ಕಳೆದ ಜನವರಿಯಲ್ಲಿ ಸರ್ಕಾರಿ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಿಸಿ ಬಿಜೆಪಿ ಸೇರಿರುವ ಇವರು, ಉತ್ತರ ಪ್ರದೇಶದ ವಿಧಾನ ಪರಿಷತ್‌ಗೂ ಆಯ್ಕೆಯಾಗಿದ್ದಾರೆ. ಪರಿಷತ್‌ಗೆ ಆಯ್ಕೆಯಾದ ಬೆನ್ನಲ್ಲೇ ಲಕ್ನೋದಲ್ಲಿನ ಹಿರಿಯ ಸಚಿವರಿಗೆ ಮೀಸಲಿರುವ ಪ್ರದೇಶದಲ್ಲೇ ಸರ್ಕಾರಿ ಬಂಗಲೆ ಪಡೆದ ಶರ್ಮಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಅಥವಾ ಉಪ ಮುಖ್ಯಮಂತ್ರಿ ಸ್ಥಾನವನ್ನೇ ನೀಡಬಹುದು ಎಂಬ ಗುಲ್ಲೂ ಎದ್ದಿದೆ.

ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಅಷ್ಟೂ ಅವಧಿಗೆ ಅವರ ಜೊತಗೇ ಇದ್ದುದಲ್ಲದೆ, 2014ರಿಂದ ಈಚಿನವರೆಗೂ ಪ್ರಧಾನಿ ಕಚೇರಿಯಲ್ಲೇ ಕಾರ್ಯ ನಿರ್ವಹಿಸಿರುವ ಶರ್ಮಾ ಉತ್ತರ ಪ್ರದೇಶದ ಪೂರ್ವ ಭಾಗದವರು ಎಂಬುದೂ ವದಂತಿಗಳಿಗೆ ರೆಕ್ಕೆ–ಪುಕ್ಕ ಮೂಡಿಸಿದೆ.

ಅಧಿಕಾರಿಗಳದ್ದೇ ದರ್ಬಾರ್‌:

ಯೋಗಿ ಆಡಳಿತದಲ್ಲಿ ಬಿಜೆಪಿಯಿಂದಲೇ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಆಟವೂ ನಡೆಯುತ್ತಿಲ್ಲ. ಬದಲಿಗೆ, ಆಡಳಿತಶಾಹಿಯ ಮಾತಿಗೇ ಮನ್ನಣೆ ನೀಡಲಾಗುತ್ತಿದೆ ಎಂಬುದೂ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುವುದಕ್ಕೆ ಪ್ರಮುಖ ಅಂಶವಾಗಿದೆ.

‘ನಮ್ಮ ಮಾತಿಗೆ ಮನ್ನಣೆ ನೀಡದ ಯೋಗಿ, ಅಧಿಕಾರಿಗಳ ಕೈಗೊಂಬೆಯಾಗಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಬಿಜೆಪಿ ಶಾಸಕರು ವರಿಷ್ಠರೆದುರು ಅಲವತ್ತುಕೊಂಡಿದ್ದಾರೆ.

ಆರ್‌ಎಸ್‌ಎಸ್‌ ಬೆಂಬಲ:

ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಯೋಗಿ ಆಸ್ಪದ ನೀಡಿದವರಲ್ಲ. ಇದನ್ನು ಅರಿತಿರುವ ಆರ್‌ಎಸ್‌ಎಸ್‌ ಅವರ ಬೆಂಬಲಕ್ಕೆ ನಿಂತಿದೆ. ನಾಯಕನ ಕಾರ್ಯವೈಖರಿ ಬಗ್ಗೆ ಕೆಲವರಲ್ಲಿ ಅಸಮಾಧಾನ ಇರುವುದು ಸಹಜ. ಹಾಗಂತ ಬದಲಾವಣೆ ಸೂಕ್ತವೂ ಅಲ್ಲ ಎಂಬುದು ಆರ್‌ಎಸ್‌ಎಸ್‌ ಮುಖಂಡರ ಅಭಿಪ್ರಾಯ.

ಮೋದಿ ಉತ್ತರಾಧಿಕಾರಿ:

ಬಿಜೆಪಿಯಲ್ಲಿ ಮೋದಿ ಅವರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಉದ್ಭವಿಸಿದಾಗಲೆಲ್ಲ, ‘ಯೋಗಿ’ ಎಂಬ ಉತ್ತರ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಲೇ ಇದೆ. ಖಟ್ಟರ್‌ ಹಿಂದುತ್ವವಾದಿಯಾಗಿರುವ ಯೋಗಿ, ಗೋರಖ್‌ಪುರದಿಂದ ನಾಲ್ಕು ಬಾರಿ ಸಂಸದರಾಗಿದ್ದೂ ಹಿಂದುತ್ವದ ಬಲದಿಂದಲೇ.

ಚುನಾವಣಾ ಸಿದ್ಧತೆಯೇ?:

20 ಕೋಟಿಗೂ ಅಧಿಕ ಜನಸಂಖ್ಯೆಯ, 403 ವಿಧಾನಸಭೆ ಕ್ಷೇತ್ರಗಳಿರುವ ಉತ್ತರ ಪ್ರದೇಶವು 2017ರ ಆರಂಭದಲ್ಲಿ ಎದುರಿಸಿದ್ದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 300ಕ್ಕೂ ಅಧಿಕ ಸ್ಥಾನಗಳನ್ನು ಜಯಿಸಿ ಬೀಗಿತ್ತು.

ಹೇಳಿಕೊಳ್ಳುವಂಥ ಮುಖಗಳಿಲ್ಲದಿದ್ದರೂ, ನೋಟು ರದ್ದತಿ ಮತ್ತು ಮೋದಿ ಜನಪ್ರಿಯತೆಯ ಬಲದಿಂದ ಅಧಿಕಾರದ ಗದ್ದುಗೆಯ ಸಮೀಪಕ್ಕೆ ಬಂದಿದ್ದ ಬಿಜೆಪಿ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ‘ಅನಿರೀಕ್ಷಿತ’ ಆಯ್ಕೆಯಾಗಿ ಹೊರಹೊಮ್ಮಿದ್ದ ‘ಗೋರಖ್‌ಪುರದ ಸಂತ’ ಯೋಗಿ ಆದಿತ್ಯನಾಥ್, ಮುಂದಿನ ಆರೇಳು ತಿಂಗಳುಗಳ ನಂತರ ನಡೆಯಲಿರುವ ಚುನಾವಣೆಯ ಸಾರಥ್ಯ ವಹಿಸುವರೇ? ಅಥವಾ ಇಲ್ಲವೇ? ಎಂಬ ಪ್ರಶ್ನೆ ಈಗ ಎದುರಾಗಿದೆ.

ಗ್ರಾಮ ಪಂಚಾಯ್ತಿಗಳಿಗೆ ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿನ ಸೋಲು, ಗಂಗಾ ನದಿಗುಂಟ ತೇಲಿದ ಶವಗಳು, ಕೋವಿಡ್‌ನ ಕಳಪೆ ನಿರ್ವಹಣೆಯ ಆರೋಪಗಳ ಹೊರತಾಗಿಯೂ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರ ಹಿಡಿಯುವ ಕನಸನ್ನು ಬಿಜೆಪಿ ಕಾಣುತ್ತಿದೆ.

ಮುಖ್ಯವಾಗಿ ಉತ್ತರ ಪ್ರದೇಶ ಚುನಾವಣೆಯ ಗೆಲುವನ್ನೇ ದೃಷ್ಟಿಯಲ್ಲಿರಿಸಿಕೊಂಡೇ 2016ರ ನವೆಂಬರ್‌ನಲ್ಲಿ ನೋಟು ರದ್ದತಿಯ ನಿರ್ಧಾರ ಪ್ರಕಟಿಸಲಾಗಿತ್ತು. ಅದೇ ರೀತಿ ಈಗಲೂ ಉತ್ತರ ಪ್ರದೇಶದ ಮತದಾರರ ಗಮನ ಬೇರೆಡೆ ಹೊರಳದಂತೆ ತಡೆಯುವುದಕ್ಕೇ ಬಿಜೆಪಿಯ ವಿಶಿಷ್ಟ ‘ಆಟ’ ಶುರುವಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ತಣ್ಣಗೆ ಪ್ರತಿಕ್ರಿಯೆ ನೀಡಿರುವ ಯೋಗಿ, ‘ನಮ್ಮ ಗಮನ ಕೋವಿಡ್‌–19ರ ಮೂರನೇ ಅಲೆಯನ್ನು ನಿಯಂತ್ರಿಸುವುದಾಗಿದೆ. ನಾಯಕತ್ವ ಬದಲಾವಣೆ ಎಂಬುದು ಕೇವಲ ವದಂತಿಯಷ್ಟೇ ಎಂದು ಹೇಳಿಕೊಂಡಿದ್ದಾರೆ.

ಕೋವಿಡ್‌ ದ್ವಿತೀಯ ಅಲೆಯ ಅಬ್ಬರ ಕಮ್ಮಿ ಆಗುವ ಮೊದಲೇ ಕೇಂದ್ರ ಚುನಾವಣಾ ಆಯುಕ್ತರು, ‘ನಿಗದಿಯಂತೆಯೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆಗಳು ನಡೆಯಲಿವೆ’ ಎಂದು ಸಾರಿದ್ದಾರೆ. ಅವರ ಪ್ರಕಾರ, ಡಿಸೆಂಬರ್‌ ಅಂತ್ಯಕ್ಕೆ ಚುನಾವಣೆ ಘೋಷಣೆ ಆಗಲಿದ್ದು, ಮಾರ್ಚ್‌ ಅಂತ್ಯದ ವೇಳೆಗೆ ಹೊಸ ಸರ್ಕಾರಗಳು ಅಧಿಕಾರಕ್ಕೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT