ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ: ಇಂದು ಮೊದಲ ಹಂತದ ಮತದಾನ: ಬಿಜೆಪಿ ಸಚಿವರ ಭವಿಷ್ಯ ನಿರ್ಧಾರ

Last Updated 9 ಫೆಬ್ರುವರಿ 2022, 20:10 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ, ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಮತದಾನವು, ಸಮಾಜವಾದಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿರುವರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಮತ್ತು ಯೋಗಿ ಆದಿತ್ಯನಾಥ ಅವರ ಸಂಪುಟದ 9 ಸಚಿವರ ಭವಿಷ್ಯವನ್ನು ನಿರ್ಧರಿಸಲಿದೆ.

2017ರ ಚುನಾವಣೆಯಲ್ಲಿ ಬಿಜೆಪಿಯು ಈ 58 ಕ್ಷೇತ್ರಗಳಲ್ಲಿ, 53 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಈ ಭಾಗದಲ್ಲಿ ಜಾಟ ಸಮುದಾಯದವರು ಬಹುಸಂಖ್ಯಾತರಾಗಿದ್ದು, ಅವರೆಲ್ಲರೂ ಬಿಜೆಪಿಯನ್ನು ಬೆಂಬಲಿಸಿದ್ದರು. ಜತೆಗೆ ಯಾದವರನ್ನು ಹೊರತುಪಡಿಸಿದ ಇತರೆ ಹಿಂದುಳಿದ ವರ್ಗಗಳ ಮತದಾರರೂ ಬಿಜೆಪಿಯನ್ನು ಬೆಂಬಲಿಸಿದ್ದರು. ಹೀಗಾಗಿ ಬಿಜೆಪಿ ಜಯಭೇರಿ ಬಾರಿಸಿತ್ತು.

ಆದರೆ ಈಗ, ಈ ಪ್ರದೇಶದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೇಂದ್ರದ ಕೃಷಿ ಕಾಯ್ದೆಗಳ ಕಾರಣ, ಜಾಟರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. ಜಾಟರ ಸಂಪೂರ್ಣ ಬೆಂಬಲ ಹೊಂದಿರುವ ಆರ್‌ಎಲ್‌ಡಿ ಈಗ ಬಿಜೆಪಿಯಿಂದ ದೂರ ಸರಿದಿದೆ. ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿದೆ. ಮರಳಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರ್‌ಎಲ್‌ಡಿ ಮುಖ್ಯಸ್ಥರನ್ನು ಪದೇ ಪದೇ ಕೇಳಿಕೊಂಡಿದ್ದಾರೆ. ಆದರೆ, ಆರ್‌ಎಲ್‌ಡಿ ಈ ಮನವಿಯನ್ನು ಕಡ್ಡಿಮುರಿದಂತೆ ತಿರಸ್ಕರಿಸಿದೆ.

ಈ ಬಾರಿ ಜಾಟರು, ಯಾದವರು, ಯಾದವರನ್ನು ಹೊರತುಪಡಿಸಿದ ಇತರೆ ಹಿಂದುಳಿದ ವರ್ಗಗಳು ಮತ್ತು ಮುಸ್ಲಿಂ ಮತದಾರರನ್ನು ಆರ್‌ಎಲ್‌ಡಿ ಮತ್ತು ಸಮಾಜವಾದಿ ಪಕ್ಷದ ಮೈತ್ರಿಕೂಟವು ಒಗ್ಗೂಡಿಸಿದೆ. ಹೀಗಾಗಿ ಈ ಮೈತ್ರಿಕೂಟವು ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಈ ಮೈತ್ರಿಕೂಟವು ಪಡೆದುಕೊಳ್ಳುವ ಪ್ರತಿ ಕ್ಷೇತ್ರವೂ, ಬಿಜೆಪಿಯಿಂದ ಕಸಿದುಕೊಂಡದ್ದಾಗಿರುತ್ತದೆ. ಹೀಗಾಗಿ ಬಿಜೆಪಿಗೆ ಈ ಕ್ಷೇತ್ರಗಳಲ್ಲಿ ಗೆಲುವು ಸುಲಭವಲ್ಲ ಎಂದು ವಿಶ್ಲೇಷಿಸಲಾಗಿದೆ.

ಕೃಷಿ ಕಾಯ್ದೆಗಳ ವಿರುದ್ಧ ಉತ್ತರ ಪ್ರದೇಶದ ರೈತ ಸಮುದಾಯವನ್ನು ಒಗ್ಗೂಡಿಸಿದ್ದ ಭಾರತೀಯ ಕಿಸಾನ್ ಯೂನಿಯನ್, ಯಾವ ಪಕ್ಷಕ್ಕೂ ನೇರವಾಗಿ ಬೆಂಬಲ ಘೋಷಿಸಿಲ್ಲ. ಆದರೆ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದೆ. ಯಾವ ಸರ್ಕಾರ ಬಂದರೆ ರೈತರಿಗೆ ಅನುಕೂಲವಾಗಲಿದೆ ಎಂದು ರೈತರಿಗೆ ಮನವರಿಕೆ ಮಾಡಿಕೊಡುತ್ತಿದೆ. ಇದು ಬಿಜೆಪಿಗೆ ಮುಳುವಾಗುವ ಮತ್ತು ಆರ್‌ಎಲ್‌ಡಿ–ಎಸ್‌ಪಿ ಮೈತ್ರಿಕೂಟಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ.

ಈ ಕ್ಷೇತ್ರಗಳಲ್ಲಿ ಜಾಟರು ಬಿಜೆಪಿಯಿಂದ ದೂರ ಸರಿಯುತ್ತಿರುವುದನ್ನು ಅರ್ಥಮಾಡಿಕೊಂಡ ಬಿಜೆಪಿ ಧಾರ್ಮಿಕ ಧ್ರುವೀಕರಣಕ್ಕೆ ಯತ್ನಿಸಿದೆ. 2013ರಲ್ಲಿ ಮುಜಪ್ಫರ್‌ನಗರದಲ್ಲಿ ನಡೆದಿದ್ದ ಗಲಭೆಯ ಬಗ್ಗೆ ಬಿಜೆಪಿಯ ಎಲ್ಲಾ ನಾಯಕರು ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದಾರೆ.ಆದರೆ ಜಯಂತ್ ಚೌಧರಿ ಮತ್ತು ಅಖಿಲೇಶ್ ಯಾದವ್ ಅವರು ಬಿಜೆಪಿಯ ಈ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸಿದ್ದಾರೆ.

ಈ ಇಬ್ಬರೂ ನಾಯಕರು ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಲೇ ಇಲ್ಲ. ಬದಲಿಗೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಬಿಜೆಪಿ ಶಾಸಕರು ಮತ್ತು ಸಚಿವರು ಪ್ರಚಾರಕ್ಕೆ ಹೋದೆಡೆಯೆಲ್ಲಾ ಜನರ ಪ್ರತಿಭಟನೆ ಎದುರಿಸಿದ್ದಾರೆ. ಕೆಲವೆಡೆ ಬಿಜೆಪಿ ನಾಯಕರನ್ನು ಜನರು ಅಟ್ಟಾಡಿಸಿ ಓಡಿಸಿದ್ದಾರೆ.

ಪರಿಸ್ಥಿತಿ ಹೀಗಿದ್ದ ಮಾತ್ರಕ್ಕೆ ಆರ್‌ಎಲ್‌ಡಿ–ಎಸ್‌ಪಿ ಮೈತ್ರಿಕೂಟಕ್ಕೆ ಎಲ್ಲವೂ ಅನುಕಾಲವಾಗಿಯೇ ಇದೆ ಎಂದಲ್ಲ. ಇಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಆದರೆ ಇದಕ್ಕಿಂತ ಮುಖ್ಯವಾಗಿರುವುದು ಬಿಎಸ್‌ಪಿ. ದಲಿತ ಮತ್ತು ಮುಸ್ಲಿಂ ಮತದಾರರ ಬೆಂಬಲ ಹೊಂದಿರುವ ಬಿಎಸ್‌ಪಿಯು ಇಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಎಸ್‌ಪಿ ಹೆಚ್ಚು ಮತ ಪಡೆದಷ್ಟೂ, ಬಿಜೆಪಿಗೆ ಅನುಕೂಲವಾಗುತ್ತದೆ. ಆದರೆ, ಜಾಟರು–ದಲಿತರು–ಮುಸ್ಲಿಮರುಮೈತ್ರಿಕೂಟವನ್ನು ಬೆಂಬಲಿಸಿದರೆ, ಅದರ ಹೊಡೆತ ಬೀಳುವುದೂ ಬಿಜೆಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT