ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿ ನೀತಿಯಿಂದ ಆವರ್ತ ಆರ್ಥಿಕತೆಗೆ ಉತ್ತೇಜನ: ಪ್ರಧಾನಿ ಮೋದಿ

ದೇಶದ ಆಟೊಮೊಬೈಲ್‌ ಕ್ಷೇತ್ರಕ್ಕೆ ಹೊಸ ಅಸ್ಮಿತೆ ಸಿಗುವ ವಿಶ್ವಾಸ
Last Updated 13 ಆಗಸ್ಟ್ 2021, 11:09 IST
ಅಕ್ಷರ ಗಾತ್ರ

ಗಾಂಧಿನಗರ: ‘ಬಳಕೆಗೆ ಯೋಗ್ಯವಲ್ಲದ ಹಾಗೂ ಪರಿಸರಕ್ಕೆ ಹೆಚ್ಚು ಮಾಲಿನ್ಯ ಮಾಡುವಂತಹ ವಾಹನಗಳನ್ನು ಹಂತಹಂತವಾಗಿ ಕೈಬಿಡಲು ಗುಜರಿ ನೀತಿಯಿಂದ ಸಾಧ್ಯವಾಗಲಿದೆ. ಆವರ್ತ ಆರ್ಥಿಕತೆಯನ್ನು ಸಹ ಈ ನೀತಿ ಉತ್ತೇಜಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ರಾಷ್ಟ್ರೀಯ ವಾಹನ ಗುಜರಿ ನೀತಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ನೀತಿಯು ಆರ್ಥಿಕ ಬೆಳವಣಿಗೆ ಪ್ರಕ್ರಿಯೆಯನ್ನು ಹೆಚ್ಚು ಸುಸ್ಥಿರಗೊಳಿಸುತ್ತದೆ, ಪರಿಸರಸ್ನೇಹಿ ಆಗಿಸುತ್ತದೆ ಎಂದು ಹೇಳಿದರು.

ಗುಜರಾತಿನ ಗಾಂಧಿನಗರದಲ್ಲಿ ಆಯೋಜಿಸಿರುವ ಹೂಡಿಕೆದಾರರ ಸಮಾವೇಶವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಪ್ರಧಾನಿಯವರು ಈ ಘೋಷಣೆ ಮಾಡಿದರು. ಈ ನೀತಿಯು ದೇಶದ ಆಟೊಮೊಬೈಲ್‌ ವಲಯಕ್ಕೆ ಹೊಸ ಅಸ್ಮಿತೆಯೊಂದನ್ನು ನೀಡುತ್ತದೆ ಎಂದು ಹೇಳಿದರು. ವಾಹನ ಗುಜರಿ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಆಕರ್ಷಿಸುವ ಉದ್ದೇಶದೊಂದಿಗೆ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ಅನರ್ಹ ವಾಹನಗಳನ್ನು ನಮ್ಮ ರಸ್ತೆಗಳಿಂದ ವೈಜ್ಞಾನಿಕ ರೀತಿಯಲ್ಲಿ ತೆರವುಗೊಳಿಸುವಲ್ಲಿ ಈ ನೀತಿಯು ಪ್ರಮುಖ ಪಾತ್ರ ವಹಿಸಲಿದೆ’ ಎಂದು ಅವರು ಹೇಳಿದರು. ಹೊಸ ನೀತಿಯು ದೇಶದ ನಗರಗಳಲ್ಲಿ ಮಾಲಿನ್ಯ ತಗ್ಗುವಂತೆ ಮಾಡುವಲ್ಲಿ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ನೀತಿಯ ಅಡಿಯಲ್ಲಿ, ಹಳೆಯ ವಾಹನವನ್ನು ಗುಜರಿಗೆ ಹಾಕುವವರಿಗೆ ಸರ್ಕಾರದ ಕಡೆಯಿಂದ ಪ್ರಮಾಣಪತ್ರವೊಂದು ಸಿಗುತ್ತದೆ. ಈ ಪ್ರಮಾಣಪತ್ರ ಹೊಂದಿರುವವರು ಹೊಸ ವಾಹನ ಖರೀದಿಸಿದಾಗ ಅವರಿಗೆ ನೋಂದಣಿ ಶುಲ್ಕ ವಿಧಿಸುವುದಿಲ್ಲ ಎಂದು ಪ್ರಧಾನಿ ತಿಳಿಸಿದರು. ಅವರು ಹೊಸ ವಾಹನ ಖರೀದಿಸಿದಾಗ ರಸ್ತೆ ತೆರಿಗೆ ಮೊತ್ತದಲ್ಲಿಯೂ ಕೆಲವು ವಿನಾಯಿತಿಗಳು ಸಿಗಲಿವೆ ಎಂದರು.

ವಾಹನ ಕ್ಷಮತೆ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಆಧರಿಸಿ, ಆ ವಾಹನವನ್ನು ಗುಜರಿಗೆ ಹಾಕಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಹೊಸ ನೀತಿಯು ₹ 10 ಸಾವಿರ ಕೋಟಿ ಬಂಡವಾಳ ಆಕರ್ಷಿಸಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಹೊಸ ಉದ್ಯೋಗ ಸೃಷ್ಟಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT