ಗುರುವಾರ , ಫೆಬ್ರವರಿ 25, 2021
28 °C

‘ಜೈ ಶ್ರೀರಾಮ್‌’ ಘೋಷಣೆಗೆ ಮಮತಾ ವಿರೋಧ: ವಿಎಚ್‌ಪಿ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಮಮತಾ ಬ್ಯಾನರ್ಜಿ

ಕೋಲ್ಕತ್ತ: ಇಲ್ಲಿನ ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ‘ಜೈಶ್ರೀರಾಮ್’ ಘೋಷಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ತೀವ್ರ ವಾಗ್ದಾಳಿ ನಡೆಸಿದೆ.

‘ಇದು ಮಮತಾ ಅವರ ‘ಹಿಂದುತ್ವ ವಿರೋಧಿ’ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಒಂದು ನಿರ್ದಿಷ್ಟ ಸಮುದಾಯವನ್ನು ಸಮಾಧಾನಪಡಿಸುವ ಪ್ರಯತ್ನದಂತೆ ಕಾಣುತ್ತದೆ. ಭಗವಾನ್ ರಾಮ ಈ ದೇಶದ ಆತ್ಮ. ‘ಜೈ ಶ್ರೀರಾಮ್’ ಎನ್ನುವ ಘೋಷಣೆಗೆ ಅವರೇಕೆ ಸಿಟ್ಟುಮಾಡಿಕೊಳ್ಳುತ್ತಾರೆ? ಅವರ ಈ ನಡೆಯನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ’ ಎಂದು ವಿಎಚ್‌ಪಿಯ ಅಂತರರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ.

‘ಜೈ ಶ್ರೀರಾಮ್ ಘೋಷಣೆ ಕೂಗುವುದು ತಪ್ಪಲ್ಲ. ನೇತಾಜಿ ಅವರ ಜನ್ಮ ದಿನಾಚರಣೆಯಲ್ಲಿ ರಾಜಕಾರಣವನ್ನು ಬೆರೆಸುವುದು ಸರಿಯಲ್ಲ’ ಎಂದು ಬಿಜೆಪಿ ನಾಯಕ ಹಾಗೂ ನೇತಾಜಿ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಅಭಿಪ್ರಾಯ ಪಟ್ಟಿದ್ದಾರೆ.

ತಮ್ಮ ಭಾಷಣದ ಸರದಿ ಬಂದಾಗ ಮಮತಾ ಬ್ಯಾನರ್ಜಿ ಅವರು ಮೈಕ್ ಬಳಿ ಬರುವ ವೇಳೆಗೆ ವೇದಿಕೆಯ ಕೆಳಗಿದ್ದ ಅನೇಕರು ‘ಜೈಶ್ರೀರಾಮ್’ ಎಂದು ಘೋಷಣೆ ಕೂಗಿದರು. ಮಮತಾ ಭಾಷಣ ಆರಂಭಕ್ಕೂ ಮುನ್ನವೂ ನೆರೆದಿದ್ದ ಜನಸಮೂಹದ ಒಂದು ಭಾಗ ಘೋಷಣೆ ಕೂಗುವುದನ್ನು ಮುಂದುವರಿಸಿತು.

ಇದರಿಂದ ಸಿಟ್ಟಿಗೆದ್ದ ಮಮತಾ ತಮ್ಮ ಆಸನಕ್ಕೆ ಹಿಂತಿರುಗುವ ಮುನ್ನ ’ಈ ಕಾರ್ಯಕ್ರಮವನ್ನು ಕೋಲ್ಕತ್ತದಲ್ಲಿ ನಡೆಸಿದ್ದಕ್ಕಾಗಿ ನಾನು ಪ್ರಧಾನಿ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಧನ್ಯವಾದ ಹೇಳುತ್ತೇನೆ. ಇದು ಸರ್ಕಾರದ ಕಾರ್ಯಕ್ರಮ. ಯಾವುದೋ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದಕ್ಕೊಂದು ಘನತೆ ಇರಬೇಕು. ಜನರನ್ನು ಆಹ್ವಾನಿಸಿ ಅವರನ್ನು ಅಪಮಾನಿಸುವುದು  ಯಾರಿಗೂ ಇಷ್ಟವಾಗುವುದಿಲ್ಲ. ನಾನು ಮಾತನಾಡುವುದಿಲ್ಲ. ಜೈ ಬಾಂಗ್ಲಾ, ಜೈ ಹಿಂದ್’ ಎಂದು ಹೇಳಿದ್ದರು.

ಮಮತಾ ಅವರ ನಡೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಬೆಂಬಲ ಸೂಚಿಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು